ಬಂಟ್ವಾಳದ ನಾವೂರು ಗ್ರಾಮದ 68 ವರ್ಷದ ಅಬ್ಬು ಪಂಡಿತರು ಕಳೆದ 50 ವರ್ಷಗಳಿಂದ ಸೈಕಲ್‌ನಲ್ಲಿ ಸಂಚರಿಸಿ ಜನರಿಗೆ ಗಿಡಮೂಲಿಕೆ ಔಷಧ ನೀಡುತ್ತಿದ್ದಾರೆ. ಅಜ್ಜ ಮತ್ತು ತಂದೆಯಿಂದ ಕಲಿತ ಪಾರಂಪರಿಕ ಚಿಕಿತ್ಸೆಯನ್ನು ಅತ್ಯಂತ ಕಡಿಮೆ ಹಣಕ್ಕೆ ನೀಡುತ್ತಾ ಸರಳ ಜೀವನ ನಡೆಸುತ್ತಿದ್ದಾರೆ.

ಮೌನೇಶ ವಿಶ್ವಕರ್ಮ

ಬಂಟ್ವಾಳ: ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾಲದಲ್ಲೂ, ಹಳ್ಳಿಯ ದಾರಿಗಳಲ್ಲಿ ಸೈಕಲ್ ತುಳಿಯುತ್ತಾ ಸಾಗಿ ಗಿಡಮೂಲಿಕೆಗಳ ಔಷಧದೊಂದಿಗೆ ಜನರ ಆರೋಗ್ಯ ವಿಚಾರಿಸುತ್ತಾ, ಅಗತ್ಯದವರಿಗೆ ಔಷಧಿ ನೀಡುವ ವ್ಯಕ್ತಿಯೊಬ್ಬರಿದ್ದಾರೆ. ಅವರೇ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಪೂಪಾಡಿಕಟ್ಟೆಯ ಅಬುಬಕ್ಕರ್ (ಅಬ್ಬು) ಪಂಡಿತರು. ಅಜ್ಜ ಮತ್ತು ತಂದೆಯಿಂದ ಕಲಿತ ಪಾರಂಪರಿಕ ಚಿಕಿತ್ಸಾ ಪದ್ಧತಿಯನ್ನು ಕಳೆದ 50 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರುವ ಇವರು, ತಮ್ಮ ಸರಳ ಬದುಕು ಮತ್ತು ನಿರಂತರ ಸೇವೆಯಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ.

ಗಮನ ಸೆಳೆಯುವ ಅಬ್ಬು ಪಂಡಿತರ ಜೀವನಶೈಲಿ

ಹೌದು... ಇವರ ಬದುಕಿನಲ್ಲಿ ಆಡಂಬರವಿಲ್ಲ, ದೊಡ್ಡ ಆಸೆ-ಆಕಾಂಕ್ಷೆಗಳ ಬೆನ್ನಟ್ಟುವ ಹಂಬಲವಿಲ್ಲ. ತಮಗೆ ತಿಳಿದಿರುವ ವಿದ್ಯೆಯನ್ನು ಸಾಧ್ಯವಾದಷ್ಟು ಜನರಿಗೆ ತಲುಪಿಸಬೇಕು ಎಂಬ ಸರಳ ಆಶಯವಷ್ಟೇ ಇದೆ. ಐಷಾರಾಮಿ ಬದುಕಿನ ಹಿಂದೆ ಓಡುವ ಈ ಕಾಲದಲ್ಲಿ, ಅಲ್ಪ ಸೌಲಭ್ಯಗಳ ನಡುವೆಯೂ ತೃಪ್ತಿಯಿಂದ ಬದುಕುತ್ತಾ ಜನರೊಂದಿಗೆ ಬೆರೆತು ಸೇವೆ ಸಲ್ಲಿಸುವ ಅಬ್ಬು ಪಂಡಿತರ ಜೀವನಶೈಲಿ ಗಮನ ಸೆಳೆಯುತ್ತದೆ. ಅವರ ಸುದೀರ್ಘ ಸೇವೆಯ ಹಿಂದೆ ಅಡಗಿರುವ ಪರಿಶ್ರಮ, ತಾಳ್ಮೆ ಮತ್ತು ಜನರೊಂದಿಗಿನ ಆತ್ಮೀಯ ಸಂಬಂಧವೇ ಅವರ ಬದುಕಿನ ವಿಶೇಷತೆ.

ಚಿಕಿತ್ಸಾ ಪದ್ಧತಿ

68 ವರ್ಷ ವಯಸ್ಸಿನ ಅಬ್ಬು ಪಂಡಿತರು ತಮ್ಮ 18ನೇ ವಯಸ್ಸಿನಲ್ಲಿಯೇ ತಂದೆಯ ಜೊತೆ ಸೇರಿ ಔಷಧಿ ನೀಡಲು ಆರಂಭಿಸಿದವರು. ಅಬ್ಬು ಪಂಡಿತರ ಬದುಕಿನ ವಿಶೇಷತೆ ಅವರು ನೀಡುವ ಚಿಕಿತ್ಸೆಯಲ್ಲಿ ಮಾತ್ರವಿಲ್ಲ; ಅದನ್ನು ಜನರಿಗೆ ತಲುಪಿಸುವ ರೀತಿಯಲ್ಲಿಯೂ ಇದೆ. ಔಷಧಕ್ಕಾಗಿ ತಮ್ಮ ಬಳಿ ಬರುವವರಿಂದ ದೊಡ್ಡ ಮೊತ್ತದ ಹಣವನ್ನು ನಿರೀಕ್ಷಿಸುವುದಿಲ್ಲ. 10 ಅಥವಾ 20 ರೂಪಾಯಿಗಳನ್ನು ನೀಡಿದರೂ ಸ್ವೀಕರಿಸುತ್ತಾರೆ. ಯಾರಾದರೂ ಮನೆಗೆ ಕರೆದರೆ ಅಲ್ಲಿಗೇ ತೆರಳಿ ಔಷಧ ನೀಡುತ್ತಾರೆ. ಕೆಲವೊಮ್ಮೆ ಸೈಕಲ್‌ನಲ್ಲಿ ಸಂಚರಿಸುವಾಗ ಪರಿಚಯದವರು ಎದುರಾದರೂ ಸೈಕಲ್ ನಿಲ್ಲಿಸಿ ಅವರ ಆರೋಗ್ಯ ವಿಚಾರಿಸಿ, ಅಗತ್ಯಕ್ಕೆ ತಕ್ಕಂತೆ ಔಷಧ ನೀಡುತ್ತಾರೆ. ಗಿಡಮೂಲಿಕೆಗಳನ್ನು ತಾವೇ ಸಂಗ್ರಹಿಸಿ, ಮನೆಯಲ್ಲಿಯೇ ಅರೆದು ಔಷಧ ಸಿದ್ಧಪಡಿಸುವುದು ಇವರ ಚಿಕಿತ್ಸಾ ಪದ್ಧತಿಯ ಮತ್ತೊಂದು ವಿಶೇಷತೆ.

ಸಂಸ್ಕೃತ ಪಠಣ ಮತ್ತು ಬಸವಣ್ಣನ ವಚನ

ಬೆಳಗಿನ ಜಾವ 4 ಗಂಟೆಗೆ ಆರಂಭವಾಗುವ ಇವರ ದಿನಚರಿ ಸಂಜೆ 5 ಗಂಟೆಯವರೆಗೂ ಸಾಗುತ್ತದೆ. ಸೈಕಲ್ ಸವಾರಿಯೇ ಇವರ ನಿತ್ಯದ ಸಂಚಾರದ ಸಾಧನ ಹಾಗೂ ವ್ಯಾಯಾಮದ ಮಾರ್ಗ. ನಾವೂರು ಗ್ರಾಮದ ಪೂಪಾಡಿಕಟ್ಟೆಯ ಪುಟ್ಟ ಮನೆಯಲ್ಲಿ ವಾಸಿಸುವ ಅಬ್ಬು ಪಂಡಿತರು ಸುತ್ತಮುತ್ತಲಿನ ಜನರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಸಂಸ್ಕೃತ ಪಠಣ ಮತ್ತು ಬಸವಣ್ಣನ ವಚನಗಳ ಬಗ್ಗೆಯೂ ಆಸಕ್ತಿ ಹೊಂದಿರುವ ಇವರು, ಸರಳತೆ ಮತ್ತು ವಿನಯವನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ.