ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ 2482 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಇನ್ನೆರಡು ದಿನಗಳಲ್ಲಿ 1.24 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಈ ಹಣ ಜಮೆಯಾಗಲಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಈ ಹಣವು ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲಿದೆ.

ಬೆಂಗಳೂರು (ಅ.15): ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯ 33ನೇ ಕಂತಿನ 2482 ಕೋಟಿ ರು. ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಇನ್ನೆರಡು ದಿನಗಳಲ್ಲಿ ರಾಜ್ಯದ 1.24 ಕೋಟಿ ಮಹಿಳೆಯರಿಗೆ ಯೋಜನೆ ಹಣ ತಲುಪಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ತಿಳಿಸಿದ್ದಾರೆ.

33ನೇ ಕಂತಿನ ಹಣ ಬಿಡುಗಡೆ ಇನ್ನೆರಡು ದಿನದಲ್ಲಿ ಫಲಾನುಭವಿಗಳ ಖಾತೆಗೆ!

ಗೃಹಲಕ್ಷ್ಮಿ ಯೋಜನೆ ಅಡಿ ಈವರೆಗೂ ಪ್ರತಿ ಫಲಾನುಭವಿಗಳಿಗೆ 32 ಕಂತುಗಳಲ್ಲಿ 64 ಸಾವಿರ ರು. ಹಣ ತಲುಪಿದೆ. ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು 33ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಆ ಮೂಲಕ ಪ್ರತಿ ಫಲಾನುಭವಿಗಳಿಗೆ 66 ಸಾವಿರ ರು. ತಲುಪಿದಂತಾಗಲಿದೆ. ಜತೆಗೆ 1.29 ಕೋಟಿ ಮಹಿಳೆಯರಿಗೆ ಈವರೆಗೆ 79,433 ಕೋಟಿ ರು. ಪಾವತಿಯಾದಂತಾಗಲಿದೆ ಎಂದಿದ್ದಾರೆ.

ದಸರಾ ಹಬ್ಬಕ್ಕೆ ಗೃಹಲಕ್ಷ್ಮಿ ಹಣ ಬಿಡುಗಡೆ

ಬರದ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ನೀಡಲಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ದಿನೇಶ್‌ ಗೂಳಿಗೌಡ ಅವರು ಧನ್ಯವಾದ ಅರ್ಪಿಸಿದ್ದಾರೆ.