ಬೆಂಗಳೂರು(ಜೂ.07): ಜೂನ್ 14 ರಂದು ನಗರದ ಕಾಂಗ್ರೆಸ್ ಭವನದ ಎದುರು ಡಿ. ಕೆ. ಶಿವಕುಮಾರ್‌ ಅವರ ಪದಗ್ರಹಣ ಕಾರ್ಯಕ್ರಮ ನಡೆಸಲು ಕೆಪಿಸಿಸಿ ನಿರ್ಧರಿಸಿದೆ. ಅಂದು ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಬೆಂಗಳೂರು ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಕೊರೋನಾ ವಾರಿಯರ್‌ಗಳಾದ ಮಹಿಳಾ ಪೌರಕಾರ್ಮಿಕರಿಗೆ ಕಾಂಗ್ರೆಸ್‌ ಸೀರೆ ವಿತರಣೆ ಮಾಡಲು ನಿರ್ಧರಿಸಿದೆ. 

ಜೂನ್ 14 ರಂದು 'ಪ್ರತಿಜ್ಞೆ' ಕಾರ್ಯಕ್ರಮ ನಡೆಸಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯ ಕಾರ್ಯದರ್ಶಿಗಳು, ಆಯುಕ್ತರಿಗೆ ಮನವಿ ಮಾಡಿದ್ದೇನೆ. ಜೂನ್ 8ರ ಬಳಿಕ ಕೋವಿಡ್ ನಿರ್ಬಂಧ ಸಡಿಲಗೊಳಿಸಿ ಕಾರ್ಯಕ್ರಮಕ್ಕೆ ಅನುಮತಿ ನೀಡುವ ವಿಶ್ವಾಸವಿದ್ದು ಈಗಾಗಲೇ ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹೇಳಿದ್ದಾರೆ. 

 

ಪಕ್ಷಕ್ಕೆ ವಾಪಸ್ಸಾಗುವವರಿಗೆ ವೆಲ್‌ಕಮ್‌ ಎಂದ ಡಿಕೆಶಿ

ಸಿಎಂ ಬಳಿ ಅನುಮತಿ ಕೇಳಿದ್ದೇನೆ. ಅನುಮತಿ ಕೊಟ್ಟರೆ ಸರಳವಾಗಿ ಕಾರ್ಯಕ್ರಮವನ್ನ ಮಾಡುತ್ತೇವೆ. ಅರಮನೆ ಮೈದಾನದಲ್ಲಿ ನಾವು ಕಾರ್ಯಕ್ರಮ ಮಾಡುವುದಿಲ್ಲ. ಕೇವಲ 150 ಮಂದಿ ಸೇರಿ ಕಾರ್ಯಕ್ರಮವನ್ನ ಮಾಡುತ್ತೇವೆ.   ಹೀಗಾಗಿ ಕಾರ್ಯಕರ್ತರು ಯಾರು ಇಲ್ಲಿಗೆ ಬರಬಾರದು. ಕೇವಲ ಶಾಸಕರು, ಗಣ್ಯರಿಗೆ ಮಾತ್ರ ಅವಕಾಶ ಇರಲಿದೆ. ಅಂತವರಿಗೆ ಮಾತ್ರ ಪಾಸ್ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಜನಸಾಮಾನ್ಯರು ಬಹಳ ಎಚ್ಚರಿಕೆಯಿಂದ ಇರಬೇಕು

ನಾಳೆಯಿಂದ ಲಾಕ್‌ ಡೌನ್ ಸಡಿಲಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದ ಜನತೆ ಸರ್ಕಾರದ ಮಾರ್ಗಸೂಚಿಗಳನ್ನ ಪಾಲಿಸಬೇಕು. ನಾನು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು. ನಾಳೆಯಿಂದ ಲಾಕ್ ಡೌನ್ ಸಡಿಲಿಕೆಯಾಗಬಹುದು. ಜನಸಾಮಾನ್ಯರು ಬಹಳ ಎಚ್ಚರಿಕೆಯಿಂದ ಇರಬೇಕು. ಯಾರೂ ಕೂಡ ಅಲಕ್ಷ್ಯ ತೋರಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. 

ಇನ್ನು ನಾಳೆಯಿಂದ ಹೊಟೇಲ್, ಶಾಪಿಂಗ್‌ ಮಾಲ್, ದೇಗುಲ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯದ ಜನ ಈಗಾಗಲೇ ಜಾಗರೂಕರಾಗಿದ್ದಾರೆ, ಮತ್ತಷ್ಟು ಜಾಗರೂಕರಾಗಬೇಕು ಎಂದು ಹೇಳಿದ್ದಾರೆ. 
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ಮಾಡುವ ದಿನಂದು ಕಾರ್ಯಕರ್ತರು ಬರದಂತೆ ಮನವಿ ಮಾಡಿದ್ದೇವೆ. ಬಂದರೂ ಕೂಡ ವಿಧಾನಸೌಧದಲ್ಲಿ ಅವಕಾಶವಿಲ್ಲ. ಮೊದಲು ನಮ್ಮ‌ ಪಕ್ಷದ ಕಚೇರಿಯಲ್ಲಿ ಶಾಸಕರ ಸಭೆ ಇದೆ. ಸಭೆಯ ಬಳಿಕ ನಾವು ನಾಮಪತ್ರ ಸಲ್ಲಿಸುತ್ತೇವೆ. ಕೆಲವೇ ನಾಯಕರು ಭಾಗವಹಿಸುತ್ತೇವೆ. ಫಲಿತಾಂಶ ಬಂದ ನಂತರ ಎಲ್ಲರೂ ಸೇರಿ ಸಂಭ್ರಮಾಚರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ. 

ಮಲ್ಲಿಕಾರ್ಜುನ ಖರ್ಗೆ ಮಾತ್ರ ನಮ್ಮ ಅಭ್ಯರ್ಥಿ

ರಾಜ್ಯಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್.ಡಿ.ದೇವೇಗೌಡ ಅವರಿಗೆ ಬೆಂಬಲ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಮಾತ್ರ ನಮ್ಮ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಬೆಂಬಲದ ಬಗ್ಗೆ ರಾಷ್ಟ್ರೀಯ ನಾಯಕರು ನಿರ್ಧರಿಸ್ತಾರೆ. ನಾವು ಬಿಜೆಪಿಯನ್ನೇನು ಬೆಂಬಲಿಸೋಕೆ ಆಗುತ್ತಾ? ಜಾತ್ಯಾತೀತ ನಿಲುವನ್ನೇ ಬೆಂಬಲಿಸಬೇಕು. ಜೆಡಿಎಸ್ ಬೆಂಬಲದ ಬಗ್ಗೆ ಡಿಕೆಶಿ ಪರೋಕ್ಷ ಹೇಳಿಕೆಯನ್ನ ನೀಡಿದ್ದಾರೆ.

ಗ್ರಾಮಗಳಲ್ಲೂ ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಸಿದ್ಧತೆ

ಹೊಟೇಲ್, ಮಾಲ್ ಪ್ರಾರಂಭ ಸದ್ಯಕ್ಕೆ ಬೇಕಿರಲಿಲ್ಲ

ಇನ್ನು ನಾಳೆಯಿಂದ ಲಾಕ್‌ಡೌನ್ ಸಡಿಲಿಕೆ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ಅವರು, ಲಾಕ್‌ಡೌನ್ ಸಡಿಲಿಕೆ ಮಾಡುವುದು ಸರಿಯಾದ ನಿರ್ಧಾರವಲ್ಲ. ಇನ್ನೂ ಲಾಕ್‌ಡೌನ್ ಮುಂದುವರಿಸಬೇಕಿತ್ತು, ಇಲ್ಲವಾದರೆ ಸೋಂಕು ಹೆಚ್ಚಳಕ್ಕೆ ಅವಕಾಶ ಮಾಡಿಕೊಟ್ಟಂತೆ ಅಗುತ್ತದೆ. ಈಗಾಗಲೇ ಬೇರೆ ದೇಶದ ಪರಿಸ್ಥಿತಿ ಗೊತ್ತಿದೆ. ಹೊಟೇಲ್, ಮಾಲ್ ಪ್ರಾರಂಭ ಸದ್ಯಕ್ಕೆ ಬೇಕಿರಲಿಲ್ಲ. ಯಾರದೋ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಹೀಗಾಗಿ ಎಲ್ಕವನ್ನೂ ಸಡಿಲ ಮಾಡಿ ಸೋಂಕಿಗೆ ಕಾರಣವಾಗಿದೆ. ಕೊರೋನಾ ನಿಯಂತ್ರಿಸುವಲ್ಲ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್ ಪಾಠ 1ನೇ ಕ್ಲಾಸ್ ಮಕ್ಕಳಿಗೆ ಏನು ಅರ್ಥ ಆಗುತ್ತೆ

ಶಾಲಾ ಮಕ್ಕಳಿಗೆ ಆನ್‌ಲೈನ್ ಪಾಠ ವಿಚಾರದ ಬಗ್ಗೆ ಮಾತನಾಡಿದ ಅವರು, ಈಗ ಎಲ್ಲರ ಬಳಿಯೂ ಲ್ಯಾಪ್‌ಟಾಪ್ ಇದೆಯಾ? ಶ್ರೀಮಂತರ ಮಕ್ಕಳಿಗೆ ಲ್ಯಾಪ್‌ಟಾಪ್ ಇರುತ್ತೆ, ಬಡವರ ಮಕ್ಕಳು ಎಲ್ಲಿಂದ ತರಬೇಕು? ಮೊದಲು ಸರ್ಕಾರ ಅದನ್ನ ಮಕ್ಕಳಿಗೆ ನೀಡಲಿ, ಆ ನಂತರ ಬೇಕಾದರೆ ಆನ್‌ಲೈನ್ ಪಾಠ ಮಾಡಲಿ. ಆನ್‌ಲೈನ್ ಪಾಠ 1ನೇ ಕ್ಲಾಸ್ ಮಕ್ಕಳಿಗೆ ಏನು ಅರ್ಥ ಆಗುತ್ತೆ, ಇದನ್ನ ಸರ್ಕಾರ ಮೊದಲು ಅರಿತುಕೊಳ್ಳಬೇಕು. ಶಾಲೆಗಳನ್ನ ಸಧ್ಯಕ್ಕೆ ಪ್ರಾರಂಭಿಸುವುದು ಸರಿಯಲ್ಲ. ಸೋಂಕು ಯಾರನ್ನಾದ್ರೂ ಕೇಳಿ ಬರುತ್ತಾ? ಮಕ್ಕಳಿಗೆ ಮಾಸ್ಕ್, ಸಾಮಾಜಿಕ ಅಂತರ ಗೊತ್ತಾಗುತ್ತಾ? ಸರ್ಕಾರ ಇಲ್ಲದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದೆ. ಲಾಕ್‌ಡೌನ್ ಇನ್ನಷ್ಟು ದಿನ ಮುಂದುವರಿಸಿದ್ರೆ ಆಗಲ್ವಾ? ಎಂದು ಸರ್ಕಾರದ ನಡೆಗೆ ರಾಮಲಿಂಗಾರೆಡ್ಡಿ ತೀವ್ರ ಆಕ್ಷೇಪ ಪಡಿಸಿದ್ದಾರೆ. 

ಕಾಫಿ ಡೇ ಸಿದ್ಧಾರ್ಥ್ ಪುತ್ರ, ಡಿಕೆಶಿ ಪುತ್ರಿ ಮದುವೆ ಮಾತುಕತೆ!

ಕೆಪಿಸಿಸಿ ಅಧ್ಯಕ್ಷ ಡಿಕೆಶಿಯಿಂದ ಝೂಮ್ ಕಾನ್ಫರೆನ್ಸ್

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ರಾಜ್ಯದ ಎರಡು ಸಾವಿರ ಸ್ಥಳಗಳಿಂದ ವಿಡಿಯೋ ಸಂವಾದ ನಡೆಸಲಿದ್ದಾರೆ. ಪ್ರತಿ ಬ್ಲಾಕ್‌ನ ಮೂರು ಗ್ರಾ.ಪಂ ಗಳಿಂದ ನೇರ ಸಂವಾದ ನಡೆಯಲಿದೆ. ಯೂತ್ ಕಾಂಗ್ರೆಸ್, ಎನ್ ಎಸ್ ಯುಐ, ಸೇವಾದಳ, ಮಹಿಳಾ ಕಾಂಗ್ರೆಸ್ ಸದಸ್ಯರ ಜೊತೆ ಅಧ್ಯಕ್ಷರು ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ ಎಮದು ಹೇಳಿದ್ದಾರೆ. 

ಲಾಕ್‌ಡೌನ್ ಸಡಿಲಿಕೆ ಬಗ್ಗೆ ಮಾತನಾಡಿದ ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ  ದಿನೇಶ್ ಗುಂಡೂರಾವ್, ಲಾಕ್‌ಡೌನ್ ಮಾಡಿದಾಗ ಜಾಗೃತಿ ಮೂಡಿಸಲಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಜವಾಬ್ದಾರಿ ಮರೆತಿರುವ ಹಾಗೆ ವರ್ತನೆ ಮಾಡುತ್ತಿದೆ. ಪರಿಹಾರ ಸರಿಯಾಗಿ ಜನರಿಗೆ ನೀಡದೇ ಈಗ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಜನ ಅಂತರ ಕಾಯ್ದುಕೊಳ್ಳುವುದೂ ಸೇರಿದ ಹಾಗೆ ಜಾಗೃತಿ ವಹಿಸಬೇಕು. ಎರಡು ಮೂರು ತಿಂಗಳ ಕಾಲ ವ್ಯಾಪಾರ ವಹಿವಾಟು ಕಷ್ಟ ಇದೆ. ಇದನ್ನು ಕೇಂದ್ರ ಸರ್ಕಾರ ನಿಭಾಯಿಸಲು ವಿಫಲವಾಗಿದೆ ಎಂದು ಹೇಳಿದ್ದಾರೆ.