ಬೆಂಗಳೂರು (ಜೂ. 06): ‘ಕಾಂಗ್ರೆಸ್‌ ಪಕ್ಷ ತೊರೆದು ಬೇರೆ ಪಕ್ಷಗಳಿಗೆ ಹೋಗಿರುವ ಅನೇಕ ನಾಯಕರು ಮತ್ತೆ ಪಕ್ಷದತ್ತ ಮರಳಲು ಇಚ್ಛಿಸಿದ್ದಾರೆ. ಇವರನ್ನು ಪಕ್ಷಕ್ಕೆ ಸೇರ್ಪಡಿಸಿಕೊಳ್ಳುವ ಬಗ್ಗೆ ಪರಾಮರ್ಶಿಸಲು ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಸಮಿತಿ ಶಿಫಾರಸು ಹಾಗೂ ಸ್ಥಳೀಯ ನಾಯಕರು, ಕಾರ್ಯಕರ್ತರ ಅಭಿಪ್ರಾಯದ ಆಧಾರದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ನಮ್ಮ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿರುವವರನ್ನು ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಸೇರಿಸಿಕೊಳ್ಳಲು ನಾನು ಸಿದ್ಧವಿಲ್ಲ. ಜತೆಗೆ ಕೇವಲ ಅಧಿಕಾರದ ಆಸೆಯಿಂದ ಪಕ್ಷಕ್ಕೆ ಮರಳುವವರ ಅಗತ್ಯವೂ ನಮಗಿಲ್ಲ. ಪಕ್ಷದ ಸಿದ್ಧಾಂತ, ನಾಯಕತ್ವದ ಮೇಲೆ ನಂಬಿಕೆಯಿಟ್ಟು ತಾಲ್ಲೂಕು ಮಟ್ಟದಲ್ಲಿ ಕಾರ್ಯಕರ್ತರ ಜೊತೆ ಬೆರೆತು ಕೆಲಸ ಮಾಡಲು ಸಿದ್ಧವಿರುವವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು’ ಎಂದು ಹೇಳಿದರು.

ಅಮರ್ತ್ಯ- ಐಶ್ವರ್ಯಾ ಮದುವೆ? ಡೇಟ್ ಯಾವಾಗ? ಡಿಕೆಶಿ ಹೇಳಿದ್ದಿಷ್ಟು

‘ಯಾವುದೇ ಷರತ್ತು ಇಲ್ಲದೇ ಕಾಂಗ್ರೆಸ್‌ ಜೊತೆ ಬರಲು ಇಚ್ಛಿಸುವವರಲ್ಲಿ ಕೆಲವರು ಅರ್ಜಿ ಕೊಟ್ಟಿದ್ದಾರೆ. ಈ ಅರ್ಜಿ ಸುದೀರ್ಘ ಸಮಯದಿಂದ ಹಾಗೇ ಉಳಿದಿದೆ. ಈ ಅರ್ಜಿಗಳನ್ನು ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿಗೆ ನೀಡಿದ್ದೇನೆ. ಸಮಿತಿ ಪರಿಶೀಲಿಸಿದ ಬಳಿಕ ಎಲ್ಲಾ ನಾಯಕರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯವನ್ನು ಕ್ರೋಡೀಕರಿಸಿದ ಬಳಿಕವೇ ಪಕ್ಷಕ್ಕೆ ಕರೆಸಿಕೊಳ್ಳುವ ನಿರ್ಧಾರ ಮಾಡಲಾಗುವುದು’ ಎಂದರು.

‘ಕಾಂಗ್ರೆಸ್‌ ಪಕ್ಷಕ್ಕೆ ಬರುವ ನಾಯಕರು ಕೇವಲ ಮೇಲ್ಮಟ್ಟದ ನಾಯಕರ ಜತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರೆ ಸಾಲದು. ಜಿಲ್ಲೆ ಹಾಗೂ ತಾಲೂಕು ಮಟ್ಟದ ನಾಯಕರು, ಕಾರ್ಯಕರ್ತರ ಜತೆ ಸೇರಿ ಕೆಲಸ ಮಾಡುವಂತಿರಬೇಕು. ಪಕ್ಷಕ್ಕೆ ಬರುವ ನಾಯಕರು ತಾಲೂಕು ಮಟ್ಟದಲ್ಲಿ ಪಕ್ಷಕ್ಕೆ ಆಸ್ತಿಯಾಗುವಂತಿರಬೇಕು. ಇದೇ ವೇಳೆ ಬೇರೆ ಪಕ್ಷದಲ್ಲಿ ಏನಾಗುತ್ತಿದೆ ಎಂಬ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ನಮ್ಮ ಪಕ್ಷದ ನಾಯಕರಿಗೂ ಸಹ ಬೇರೆ ಪಕ್ಷದ ಆಂತರಿಕ ವಿಚಾರದ ಬಗ್ಗೆ ಹೇಳಿಕೆ ನೀಡದಂತೆ ಎಚ್ಚರವಹಿಸಬೇಕು ಎಂದು ಸೂಚಿಸಿದ್ದೇನೆ’ ಎಂದು ತಿಳಿಸಿದರು.