ಮಂಗಳೂರು[ಜೂ.13]: ಬಿಸಿಲಿನ ಝಳದಿಂದ ಬೆಂದು ಹೋಗಿದ್ದ ರಾಜ್ಯಕ್ಕೆ, ಮುಂಗಾರು ಮಾರುತ ಬಿಸಿಲ ಬೇಗೆಯನ್ನು ತಣಿಸಿದೆ. ಆದರೆ  'ವಾಯು' ಚಂಡಮಾರುತದ ಪರಿಣಾಮದಿಂದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಗಾಳಿಯ ತೀವ್ರತೆ ಜೋರಾಗಿದ್ದು, ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಮಾರುತ ಬೀಸುತ್ತಿದೆ. ಹೀಗಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರವೂ ಜೋರಾಗಿದೆ. 

ಮಂಗಳೂರು ಹೊರವಲಯದ ಪಣಂಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ ಕಡತ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು ಪ್ರವಾಸಿಗರನ್ನು ಸಮುದ್ರ ತೀರದಿಂದ ದೂರವಿರಲು ಸೂಚಿಸಲಾಗಿದೆ. ಗಾಳಿ ಮಳೆಗೆ ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತ ಅಪಾಯದ ಮಟ್ಟಕ್ಕೆ ತಲುಪಿದ್ದು ಸುಮಾರು 7ಕ್ಕೂ ಹೆಚ್ಚು ಮನೆಗಳು ಕಡಲ ಪಾಲಾಗಿವೆ. ಸಮುದ್ರ ತೀರದಲ್ಲಿ ಎತ್ತರದ ಅಲೆಗಳು ಅಪ್ಪಳಿಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ.

ಇತ್ತ ಉಡುಪಿ ಜಿಲ್ಲೆಯ ಮಲ್ಪೆ ಭಾಗದಲ್ಲಿ ಕಟ್ಟೆಚ್ಚರ . ಹೀಗಾಗಿ ಪಡುಕೆರೆ ಸೇರಿದಂತೆ ಕಡಲತಡಿಗೆ ಹೊಂದಿಕೊಂಡಿರುವ ಮೀನುಗಾರರ ಕುಟುಂಬಗಳ ಸ್ಥಳಾಂತರಕ್ಕೂ ಸೂಚನೆ ನೀಡಲಾಗಿದೆ. 

ಇಂದು ಗುರುವಾರ ಮಂಗಳೂರು, ಉಡುಪಿ ಭಾಗದಲ್ಲಿ ಗಾಳಿ ಮಳೆ ಮುಂದುವರೆಯಲಿದ್ದು, ಜನರಿಗೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಅಲರ್ಟ್ ಮಾಡಿದೆ. ಚಂಡಮಾರುತದ ಪರಿಣಾಮದಿಂದಾಗಿ, ನೌಕಪಡೆ, ವಾಯು ಪಡೆ, ರಕ್ಷಣಾ ಪಡೆಗಳು ಸಜ್ಜಾಗಿದ್ದು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.