ಸೈಕಲ್‌ ಸವಾರಿ ಉತ್ತೇಜಿಸುವ ಸಲುವಾಗಿ ತುಮಕೂರಿನಲ್ಲಿ ಸೈಕಲ್‌ ದಿನಾಚರಣೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

 ತುಮಕೂರು(ಅ.17): ಸೈಕಲ್‌ ಸವಾರಿ ಉತ್ತೇಜಿಸುವ ಸಲುವಾಗಿ ತುಮಕೂರಿನಲ್ಲಿ ಸೈಕಲ್‌ ದಿನಾಚರಣೆಯನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ನಗರ ಭೂಸಾರಿಗೆ ನಿರ್ದೇಶನಾಲಯ, ತುಮಕೂರು ಸ್ಮಾರ್ಚ್‌ಸಿಟಿ, ತುಮಕೂರು ಮಹಾನಗರಪಾಲಿಕೆ, ತುಮಕೂರಿನ ಶ್ರೀ ವಿನಾಯಕ ಸೈಕಲ್‌ ಶೋರೂಂ, ಸ್ಕೂಲ್‌ ಲೈಟ್‌ ಸೈಕಲ್‌ ವಲ್ಡ್‌ರ್‍, ಕರ್ನಾಟಕ ಬೈಸಿಕಲ್‌ ಡೀಲ​ರ್‍ಸ್ ಅಸೋಸಿಯೇಷನ್‌, ಸಿದ್ಧಗಂಗಾ ಆಸ್ಪತ್ರೆ ಮತ್ತು ಸ್ಥಳೀಯ ಸೈಕಲ್‌ ಮಾರಾಟಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಸೈಕಲ್‌ ದಿನ ಆಚರಣೆ ಅಂಗವಾಗಿ ಭಾನುವಾರ ನಗರದ ಅಮಾನಿಕೆರೆ ಮುಖ್ಯದ್ವಾರದಿಂದ ಹಮ್ಮಿಕೊಂಡಿದ್ದ ಸೈಕಲ್‌ ಜಾಥಾಕ್ಕೆ ತುಮಕೂರು ಸ್ಮಾರ್ಚ್‌ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ. ರಂಗಸ್ವಾಮಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ತುಮಕೂರು ನಗರದಲ್ಲಿ ಸೈಕಲ್‌ ಸವಾರಿಯನ್ನು ಉತ್ತೇಜಿಸಲು, ಸಾರ್ವಜನಿಕರು ಸೈಕಲ್‌ ಸವಾರರೊಂದಿಗೆ ಸಂವಹನ ನಡೆಸಲು ಹಾಗೂ ವಿವಿಧ ಆಟಗಳು ಮತ್ತು ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳಲು ಸಾರ್ವಜನಿಕರಿಗೆ ವೇದಿಕೆ ಸೃಷ್ಟಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

5.70 ಕಿಮೀ ಜಾಥಾ:

ನಗರದ ಅಮಾನಿಕೆರೆಯಿಂದ ಆರಂಭಗೊಂಡ ಸೈಕಲ್‌ ಜಾಥಾ ಕೆಇಬಿ ವೃತ್ತ-ಗುಂಚಿ ವೃತ್ತ-ಕಾಟನ್‌ ಪೇಟೆ ರಸ್ತೆ-ಚಾಮುಂಡೇಶ್ವರಿ ರಸ್ತೆ- ಕಾರ್ಯಪ್ಪ ರಸ್ತೆ-ಬಿ.ಎಚ್‌.ರಸ್ತೆ-ಭದ್ರಮ್ಮ ವೃತ್ತ-ಡಾ.ರಾಧಾಕೃಷ್ಣ ರಸ್ತೆ-ರೈಲ್ವೇಸ್ಟೇಷನ್‌ ರಸ್ತೆ-ಟೌನ್‌ಹಾಲ್‌ ವೃತ್ತ-ಅಶೋಕರಸ್ತೆ ಮಾರ್ಗವಾಗಿ ಕೋಡಿ ಬಸವೇಶ್ವರ ವೃತ್ತದ ಮೂಲಕ ಅಮಾನಿಕೆರೆ ಮುಖ್ಯದ್ವಾರದವರೆಗೆ ಒಟ್ಟು 5.70 ಕಿ.ಮೀ. ಉದ್ದದ ರಸ್ತೆಯಲ್ಲಿ ಸೈಕಲ್‌ ಜಾಥಾ ನಡೆಯಿತು.

ವಿವಿಧ ಗ್ರಾಮೀಣ ಕ್ರೀಡೆ:

ಸೈಕಲ್‌ ದಿನಾಚರಣೆ ಅಂಗವಾಗಿ ಅಮಾನಿಕೆರೆ ಮುಂಭಾಗದಲ್ಲಿ ಚೌಕಾಬಾರ, ಪಗಡೆ, ಅಲ್ಗುಣಿ ಮನೆ, ಚೆಸ್‌, ಲೂಡೋ, ಕುಂಟೆಬಿಲ್ಲೆ, ಮ್ಯೂಸಿಕಲ್‌ ಚೇರ್‌ ಸೇರಿದಂತೆ ಹಲವು ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಸೈಕಲ್‌ ದಿನ ಆಚರಣೆಗೆ ಮೆರಗು ತಂದವು. ಸಿದ್ಧಗಂಗಾ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಏರ್ಪಡಿಸಲಾಗಿತ್ತು. ನಂತರ ಅಮಾನಿಕೆರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸೈಕಲ್‌ ದಿನಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಹಾನಗರಪಾಲಿಕೆ ಉಪಮೇಯರ್‌ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ, ಯುವಜನರ ಶಾರೀರಿಕ ಬೆಳವಣಿಗೆಯು ಉತ್ತಮವಾಗಿರುವ ನಿಟ್ಟಿನಲ್ಲಿ ಕ್ರೀಡೆಗಳಲ್ಲಿ ವ್ಯಾಯಾಮ, ಯೋಗ, ಸೈಕ್ಲಿಂಗ್‌, ಅಭ್ಯಾಸ ರೂಡಿಸಿಕೊಳ್ಳಲು ಪ್ರೋತ್ಸಾಹಿಸಬೇಕಾಗಿದೆ ಎಂದರು.

ಸಿದ್ಧಗಂಗಾ ಆಸ್ಪತ್ರೆಯ ಡಾ.ಪರಮೇಶ್‌ ಮಾತನಾಡಿ, ದಿನವಿಡೀ ಚಟುವಟಿಕೆಯಿಂದಿರಲು ಸೈಕ್ಲಿಂಗ್‌ ಅತ್ಯುತ್ತಮವಾದ ವ್ಯಾಯಾಮವಾಗಿದೆ. ದೇಹದಾಢ್ರ್ಯತೆ ಕಾಪಾಡಲು ಆರೋಗ್ಯಕರ ಜೀವನ ಕ್ರಮ ನಡೆಸಲು ಹಾಗೂ ವಿಶೇಷವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಚೈತನ್ಯ ಶೀಲರಾಗಲು ಸೈಕ್ಲಿಂಗ್‌ ಉತ್ತಮ ಸಾಧನವಾಗಿದೆ. ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಈ ವರ್ಷದಿಂದ ಪ್ರಾರಂಭವಾಗುತ್ತಿದೆ. ಮೊದಲು ಖಾಸಗಿ ವೈದ್ಯರು ಸೇರಿ ಸಿದ್ಧಗಂಗಾ ಆಸ್ಪತ್ರೆಯನ್ನು ನಡೆಸುತ್ತಿದ್ದೆವು. ಈಗ ಸಂಪೂರ್ಣವಾಗಿ ಸಿದ್ಧಗಂಗಾ ಮಠದ ಆಡಳಿತ ಮಂಡಳಿಯೂ ಸೇರಿರುವುದರಿಂದ ಸ್ಪೆಷಾಲಿಟಿ ಕೇರ್‌ ಸೆಂಟರ್‌ನಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಸದಸ್ಯೆ ರೂಪಶ್ರೀ ಶೆಟ್ಟಳ್ಳಯ್ಯ, ಡಿಯುಎಲ್‌ಟಿ ಸಂಸ್ಥೆಯ ಜಂಟಿ ನಿರ್ದೇಶಕ ಫಾಜ್ಹಿಲ್‌, ಅಕ್ಷಯ್‌ ಸೇರಿದಂತೆ ಮಹಾನಗರಪಾಲಿಕೆ ಅಧಿಕಾರಿಗಳು, ಎಂಜಿನಿಯರು, ವಿವಿಧ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಪರಿಸರ ಸ್ನೇಹಿ ಮತ್ತು ದೈಹಿಕ ಆರೋಗ್ಯಕ್ಕೋಸ್ಕರ ಸೈಕಲ್‌ ಬಳಕೆಯನ್ನು ಉಪಯೋಗಿಸಬೇಕು. ಸೈಕಲ್‌ನ್ನು ಹೆಚ್ಚು ಹೆಚ್ಚು ಬಳಸುವುದರ ಮೂಲಕ ಪರಿಸರವನ್ನು ಕಾಪಾಡುವುದರ ಜೊತೆಗೆ ವಾಯುಮಾಲಿನ್ಯವನ್ನು ತಡೆಗಟ್ಟುವ ದೃಷ್ಠಿಯಿಂದ ಜನರಲ್ಲಿ ಜಾಗೃತಿ ಮೂಡಿಸುವಂತಹ ದಿಸೆಯಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದೇವೆ. ಈ ಸೈಕಲ್‌ ಜಾಥಾದಲ್ಲಿ ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತಸ ತಂದಿದೆ.

ಬಿ.ಟಿ. ರಂಗಸ್ವಾಮಿ ವ್ಯವಸ್ಥಾಪಕ ನಿರ್ದೇಶಕ, ತುಮಕೂರು ಸ್ಮಾರ್ಚ್‌ಸಿಟಿ ಲಿಮಿಟೆಡ್‌