ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ 'ಸ್ಕ್ಯಾಮ್ ಲಾರ್ಡ್' ಶೀರ್ಷಿಕೆಯಡಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕಾಗಿ ಬಿಜೆಪಿ ವಿರುದ್ಧ ಕೆಪಿಸಿಸಿ ದೂರು ದಾಖಲಿಸಿದೆ. ಈ ಪೋಸ್ಟ್ ಸರ್ಕಾರದ ಗಣ್ಯರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ ಎಂಬ ಆರೋಪ.
ಬೆಂಗಳೂರು (ಜ.29): ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರಮುಖ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿಯ ಅಧಿಕೃತ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಪ್ರಕಟವಾದ ಪೋಸ್ಟ್ ಸರ್ಕಾರದ ಗಣ್ಯರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿ ಕೆಪಿಸಿಸಿ ವಕೀಲರ ತಂಡವು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದೆ.
'ಸ್ಕ್ಯಾಮ್ ಲಾರ್ಡ್' ಪೋಸ್ಟ್
ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವರ ಫೋಟೋಗಳನ್ನು ಬಳಸಿ 'ಸ್ಕ್ಯಾಮ್ ಲಾರ್ಡ್' (Scam Lord) ಎಂಬ ವಿವಾದಾತ್ಮಕ ಶೀರ್ಷಿಕೆಯಡಿ ಪೋಸ್ಟ್ ಬಿಡುಗಡೆ ಮಾಡಿತ್ತು. 'ಕರ್ನಾಟಕವನ್ನು ಹಗಲಿರುಳು ಲೂಟಿ ಹೊಡೆಯುತ್ತಿರುವ ಸ್ಕ್ಯಾಮ್ ಸಾಮ್ರಾಜ್ಯದ ಅಸಲಿ ಕಥೆ' ಎಂದು ಬರೆದು ನಮ್ಮ ನಾಯಕರ ಫೋಟೋಗಳನ್ನ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ವ್ಯಕ್ತಿತ್ವ ಹರಣ ಹಾಗೂ ಗೊಂದಲ ಸೃಷ್ಟಿಯ ಆರೋಪ
'ಲೂಟಿ' ಮತ್ತು 'ಸ್ಕ್ಯಾಮ್' ಎಂಬ ಪದಗಳನ್ನು ಪದೇ ಪದೇ ಬಳಸುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಕೇವಲ ರಾಜಕೀಯ ಟೀಕೆಯಲ್ಲ, ಬದಲಾಗಿ ಸಂವಿಧಾನಾತ್ಮಕ ಹುದ್ದೆಯಲ್ಲಿರುವವರ ವ್ಯಕ್ತಿತ್ವ ಹರಣ ಮಾಡುವ ವ್ಯವಸ್ಥಿತ ಸಂಚು ಎಂದು ಕೆಪಿಸಿಸಿ ವಕೀಲರ ತಂಡ ಆರೋಪಿಸಿದೆ. ಸಮಾಜದ ಶಾಂತಿ ಕದಡುವ ಇಂತಹ ಪೋಸ್ಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ದೂರು ಸ್ವೀಕರಿಸಿದ ಸೈಬರ್ ಪೊಲೀಸರು
ಸೈಬರ್ ಕ್ರೈಂ ಪೊಲೀಸರು ಕಾಂಗ್ರೆಸ್ ವಕೀಲರ ತಂಡ ನೀಡಿದ ದೂರನ್ನು ಅಧಿಕೃತವಾಗಿ ಸ್ವೀಕರಿಸಿದ್ದು, ಸ್ವೀಕೃತಿ (Acknowledgment) ನೀಡಿದ್ದಾರೆ. ಈ ಪೋಸ್ಟ್‌ನ ಮೂಲ ಮತ್ತು ಅದರ ಹಿಂದಿರುವ ಉದ್ದೇಶದ ಬಗ್ಗೆ ತಾಂತ್ರಿಕ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಡಿಜಿಟಲ್ ವಾರ್ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.


