ಬಾಡೂಟ ಸವಿದು ದೇವಾಲಯ ಪ್ರವೇಶಿಸಿದ ಸಿ.ಟಿ. ರವಿ.!: ಸಾರ್ವಜನಿಕರಿಂದ ವಿರೋಧ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಶಾಸಕರೊಬ್ಬರ ಮನೆಯಲ್ಲಿ ಭರ್ಜರಿ ಬಾಡೂಟವನ್ನು ಸವಿದು ದೇವಾಲಯ ಪ್ರವೇಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಾರವಾರ (ಫೆ.22): ಈ ಹಿಂದೆ ಮಾಂಸ ಸೇವನೆ ಮಾಡಿ ದೇವಾಲಯದೊಳಗೆ ಪ್ರವೇಶ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾರಿ ವಿರೋಧವನ್ನು ಎದುರಿಸಿದ್ದರು. ಈಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಶಾಸಕರೊಬ್ಬರ ಮನೆಯಲ್ಲಿ ಭರ್ಜರಿ ಬಾಡೂಟವನ್ನು ಸವಿದು ದೇವಾಲಯ ಪ್ರವೇಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಫೆ.19 ರ ಭಾನುವಾರದಂದು ಉತ್ತರಕನ್ನಡ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಕಾರವಾರದ ಶಿವಾಜಿ ಜಯಂತಿಯಲ್ಲಿ ಭಾಗವಹಿಸಿದ್ದರು. ನಂತರ ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನಿಲ್ ನಾಯ್ಕ ಮನೆಗೆ ಹೋಗಿ ಭರ್ಜರಿ ಬಾಡೂಟವನ್ನು ಸೇವಿಸಿದ್ದರು. ನಂತರ ಕಾರ್ಯಕರ್ತರ ಒತ್ತಾಯದ ಮೇರೆಗೆ ಭಟ್ಕಳ ನಗರದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಈ ವೇಲೆ ಭಟ್ಕಳದ ಹಳೇ ಬಸ್ ನಿಲ್ದಾಣ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆಂದು ಆರೋಪ ಎದುರಾಗಿದೆ.
Chikkamagaluru: ಹಳೇ ದೋಸ್ತಿಗಳ ಹೊಸ ಜಗಳ, 18 ವರ್ಷದ ಆಪ್ತಮಿತ್ರ ತಮ್ಮಯ್ಯ ವಿರುದ್ಧ ತಿರುಗಿಬಿದ್ದ ಸಿ.ಟಿ. ರವಿ
ಕರಿಬಂಟ ದೇವಾಲಯದೊಳಗೆ ಪ್ರವೇಶ: ಮಾಂಸ ಸೇವನೆಯ ನಂತರ ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ದೇವಸ್ಥಾನದ ಕಮಿಟಿ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆದರೆ, ಸಿ.ಟಿ. ರವಿ ಅವರು ನಾಗಬನ ದೇವಾಲಯದ ಬಾಗಿಲಿನಲ್ಲಿಯೇ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರಿಂದ ಸನ್ಮಾನ ಸ್ವೀಕರಿಸಿದರು. ಆದರೆ, ಕರಿಬಂಟ ಹನುಮ ದೇವಾಲಯದೊಳಗೆ ಪ್ರವೇಶ ಮಾಡಿದ್ದು, ದೇವಾಲಯದ ಒಳಗೆ ಸಂಚಾರ ಮಾಡಿದ್ದಾರೆ. ಈ ಮೂಲಕ ಹಿಂದೂಗಳ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ಸಿ.ಟಿ. ರವಿ ಅವರ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಭಟ್ಕಳದ ತುಂಬೆಲ್ಲಾ ಬಾಡೂಟದ್ದೇ ಮಾತು: ಈಗ ಕಾಂಗ್ರೆಸ್ ಹಾಗೂ ಇತರೆ ಸಾರ್ವಜನಿಕರು ಭಟ್ಕಳದ ಶಾಸಕ ಸುನೀಲ್ ನಾಯ್ಕ ಅವರೊಂದಿಗೆ ಬಾಡೂಟ ಸಮಿಯುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ರವಿ ಅವರು ಧರ್ಮದ ಆಚಾರ, ವಿಚಾರಗಳು ಹಾಗೂ ಸಂಪ್ರದಾಯವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಉತ್ತರಕನ್ನಡ ಜಿಲ್ಲೆಯಾದ್ಯಂತ ಸಿ.ಟಿ. ರವಿ ಅವರ ಬಾಡೂಟ ಹಾಗೂ ದೇವಾಲಯ ಪ್ರವೇಶದ ಬಗ್ಗೆಯೇ ಚರ್ಚೆಯಾಗುತ್ತಿದೆ.
ಸಾಲ ತೀರಿಸಲು ಆಗಲ್ಲವೆಂದು ಬಂದು- ಗೋಲ್ಡನ್ ಹ್ಯಾಂಡ್ ಅಂತ ಹೇಳಿದ್ಯಲ್ಲಾ: ಕುಮಾರಸ್ವಾಮಿ ಟೀಕೆ
ಸಿ.ಟಿ. ರವಿ ಮಾಂಸಾಹಾರ ಸೇವಿಸಿಲ್ಲ: ಈ ಬಗ್ಗೆ ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಸ್ಪಷ್ಠೀಕರಣ ಕೊಟ್ಟ ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರು, ಸಿ.ಟಿ.ರವಿ ಯಾವುದೇ ನಾನ್‌ವೆಜ್ (ಮಾಂಸಾಹಾರ) ಸೇವಿಸಿಲ್ಲ. ಅವರು ಸೇವಿಸಿದ್ದು ವಿವಿಧ ಬಗೆಯ ಸಸ್ಯಾಹಾರ ಆಹಾರಗಳನ್ನು ಮಾತ್ರ ಸೇವನೆ ಮಾಡಿದ್ದಾರೆ. ಇನ್ನು ನಾಗಬನ ದೇವಾಲಯ ಪ್ರತಿಷ್ಠಾಪನೆಯಾಗಿ 41 ದಿನಗಳ ಕಾಲ ಯಾವುದೇ ಭಕ್ತರು, ಸಾರ್ವಜನಿಕರು ದೇವಾಲಯದೊಳಗೆ ಪ್ರವೇಶ ಮಾಡಬಾರದು ಎಂಬ ನಂಬಿಕೆಯಿದೆ. ಹೀಗಾಗಿ, ಸಿ.ಟಿ. ರವಿ ದೇವಸ್ಥಾನದ ಹೊರಗಡೆಯೇ ಕೈ ಮುಗಿದು ತೆರಳಿದ್ದಾರೆ. ವಿಪಕ್ಷಗಳ ಕಾರ್ಯಕರ್ತರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಹೇಳಿದರು.