Asianet Suvarna News Asianet Suvarna News

ಸುಮ್‌ ಸುಮ್ನೆ ನೆರೆ ಪರಿಹಾರ ಪಡೆದ್ರೆ ಕ್ರಿಮಿನಲ್ ಕೇಸಾಗುತ್ತೆ ಹುಷಾರ್..!

ಸುಮ್ಮನೇ ಸಂತ್ರಸ್ತರೆಂದು ಹೇಳಿ ಪರಿಹಾರ ತೆಗೆದುಕೊಂಡರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಖಡಕ್‌ ಎಚ್ಚರಿಕೆ ನೀಡಿದರು. ಗುರುವಾರ ಇಲ್ಲಿಯ ತಾಪಂ ಸಭಾಭವನದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದರು.

Criminal case to be filed on those who illegally take flood relief fund
Author
Bangalore, First Published Aug 30, 2019, 2:11 PM IST

ಬೆಳಗಾವಿ(ಆ.30): ಪ್ರವಾಹದಿಂದ ಹಾನಿಗಿಡಾದ ಸಂತ್ರಸ್ತರಿಗೆ ಮಾತ್ರ ಸರ್ಕಾರದ ಪರಿಹಾರ ಧನ ನೀಡಲು ಕ್ರಮ ಕೈಗೊಳ್ಳಿ. ಕೆಲವು ಕಡೆಗಳಲ್ಲಿ ಗೋಲಮಾಲ್‌ಗಳು ನಡೆಯುತ್ತಿವೆ. ಒಂದು ವೇಳೆ ನಿಜವಾದ ಸಂತ್ರಸ್ತರಿಗೆ ಸರ್ಕಾರದ ಪರಿಹಾರ ಧನ ತಲುಪದಿದ್ದಲ್ಲಿ ಅದಕ್ಕೆ ಅಧಿಕಾರಿಗಳೇ ಹೊಣೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಖಡಕ್‌ ಎಚ್ಚರಿಕೆ ನೀಡಿದರು.

ಗುರುವಾರ ಇಲ್ಲಿಯ ತಾಪಂ ಸಭಾಭವನದಲ್ಲಿ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ ಅವರು, ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೀಡಾದ ಸಂತ್ರಸ್ತರನ್ನು ಗುರುತಿಸಿ ಜಂಟಿ ಸಮೀಕ್ಷೆ ನಡೆಸಿ 15 ದಿನಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಂತ್ರಸ್ತರಲ್ಲದವರು ಪರಿಹಾರ ಪಡೆದ್ರೆ ಕ್ರಿಮಿನಲ್ ಕೇಸ್‌:

ಪ್ರವಾಹದಿಂದಾಗಿ ಕ್ಷೇತ್ರದ 29 ಗ್ರಾಮಗಳು ಜಲಾವೃತಗೊಂಡಿದ್ದು, ಸಾಕಷ್ಟುಮನೆಗಳು ಕುಸಿದಿವೆ. ಈಗಾಗಲೇ ಸರ್ಕಾರದ ತಾತ್ಕಾಲಿಕ ಪರಿಹಾರ 10 ಸಾವಿರಗಳನ್ನು ನೀಡುತ್ತಿದ್ದು, ಇದರಲ್ಲಿಯೂ ಅಕ್ರಮವಾಗುತ್ತಿದೆ. ಸಂತ್ರಸ್ತರಲ್ಲದವರೂ ಪರಿಹಾರ ಧನ ಪಡೆಯುತ್ತಿದ್ದಾರೆ. ಪ್ರಸಂಗ ಬಿದ್ದರೆ ಸಂತ್ರಸ್ತರಲ್ಲದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ಹಿಂಜರಿಯುವುದಿಲ್ಲ ಎಂದು ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು.

ಗಸ್ತು ಪೊಲೀಸ್‌ ನಿಯೋಜಿಸಿ:

ನಿರಾಶ್ರಿತರಿಗೆ ಪರಿಹಾರ ಧನದ ಚೆಕ್‌ ಅನ್ನು ಪ್ರತಿ ಗ್ರಾಮಗಳಿಗೆ ತಲುಪಿಸಿ ವಿತರಿಸಬೇಕು. ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು, ಅರಭಾವಿ ಕ್ಷೇತ್ರದ ಸಂತ್ರಸ್ತರಿಗೆ ಅಂದಾಜು 350 ಶೆಡ್‌ಗಳ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಮೀಕ್ಷೆ ಕಾರ್ಯ ನಡೆಯುವ ಸಂದರ್ಭದಲ್ಲಿ ಅನಧಿಕೃತ ಫಲಾನುಭವಿಗಳು ಆಯ್ಕೆಯಾಗುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಸಂತ್ರಸ್ತರಿಗೆ ಪಡಿತರ ಧಾನ್ಯಗಳನ್ನು ವಿತರಿಸುವ ಸಂದರ್ಭದಲ್ಲಿ ಕೆಲವರು ಗಲಾಟೆ ಮಾಡುತ್ತಿದ್ದಾರೆ. ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿದ್ದಾರೆ. ಅಂತಹ ಗ್ರಾಮಗಳಲ್ಲಿ ಕಡ್ಡಾಯವಾಗಿ ಗಸ್ತು ಪೊಲೀಸರನ್ನು ನಿಯೋಜಿಸಿ ಸಂತ್ರಸ್ತರಿಗೆ ಸರ್ಕಾರಿ ಸೌಲಭ್ಯ ಸಿಗಲು ಅನುಕೂಲ ಮಾಡುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

8.59 ಕೋಟಿಗಳ ಪರಿಹಾರ ಧನ:

ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಅಡಿಬಟ್ಟಿ, ಚಿಗಡೊಳ್ಳಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ಲೋಳಸೂರ, ಬಸಳಿಗುಂದಿ, ಬಳೋಬಾಳ, ಬೀರನಗಡ್ಡಿ, ವಡೇರಹಟ್ಟಿ, ಗುಜನಟ್ಟಿ, ಭೈರನಟ್ಟಿ, ಢವಳೇಶ್ವರ, ಕಮಲದಿನ್ನಿ, ಅರಳಿಮಟ್ಟಿ, ಫುಲಗಡ್ಡಿ, ಸುಣಧೋಳಿ, ಮುನ್ಯಾಳ, ಧರ್ಮಟ್ಟಿ, ರಂಗಾಪೂರ, ಹುಣಶ್ಯಾಳ ಪಿವಾಯ್‌, ಬೀಸನಕೊಪ್ಪ, ಹುಣಶ್ಯಾಳ ಪಿಜಿ, ಅವರಾದಿ, ತಿಗಡಿ ಮಸಗುಪ್ಪಿ ಮತ್ತು ಪಟಗುಂದಿ ಗ್ರಾಮಗಳಲ್ಲಿ ತಲಾ 10 ಸಾವಿರಗಳಂತೆ ತಾತ್ಕಾಲಿಕ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಲಾಗುತ್ತಿದೆ. ಮೆಳವಂಕಿ, ತಳಕಟ್ನಾಳ ಹಾಗೂ ನಲ್ಲಾನಟ್ಟಿಗ್ರಾಮಗಳಲ್ಲಿ ಸಮೀಕ್ಷೆ ಕಾರ್ಯ ಮುಕ್ತಾಯದ ಹಂತ ತಲುಪಿದೆ. ಅರಭಾವಿ ಮತಕ್ಷೇತ್ರದ 8593 ಸಂತ್ರಸ್ತರಿಗೆ 8.59 ಕೋಟಿಗಳ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳ ಅಳಲು:

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮುಂದೆ ಅಧಿಕಾರಿಗಳೇ ತಮ್ಮ ಅಳಲು ತೋಡಿಕೊಂಡರು. ಸಂತ್ರಸ್ತರಿಗೆ ಪರಿಹಾರ ಧನದ ಚೆಕ್‌ ನೀಡುವ ಸಂದರ್ಭದಲ್ಲಿ ಉದ್ಧಟತನ ವರ್ತನೆ ತೋರುತ್ತಿದ್ದಾರೆ. ಸಮೀಕ್ಷೆಯಲ್ಲಿ ತಮ್ಮ ಕುಟುಂಬದ ಹೆಸರನ್ನು ನಾಲ್ಕು ನಾಲ್ಕು ಸಾರಿ ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಸಾಲದ್ದಕ್ಕೆ ಪಡಿತರ ಚೀಟಿಯನ್ನು ತೋರಿಸಿ ಒಂದೇ ಕುಟುಂಬದ ನಾಲ್ವರು ಹೆಸರಿನ ಮೇಲೆ ಚೆಕ್‌ ಬರೆಯುವಂತೆ ಒತ್ತಡ ಹೇರುತ್ತಿದ್ದಾರೆ. ಪಡಿತರಗಳನ್ನು ಹಂಚುವ ಸಂದರ್ಭದಲ್ಲಿ ಲಾರಿಗಳನ್ನು ತಡೆಯುತ್ತಿದ್ದಾರೆ. ಇದನ್ನು ಹೇಗಾದರೂ ಮಾಡಿ ಪರಿಹರಿಸುವಂತೆ ಶಾಸಕರಿಗೆ ಅಧಿಕಾರಿಗಳು ಇದೇ ಸಂದರ್ಭದಲ್ಲಿ ತಮ್ಮ ನೋವುಗಳನ್ನು ತೋಡಿಕೊಂಡರು.

15.26 ಕೋಟಿ ಅಂದಾಜು ಹಾನಿ:

ಅರಭಾವಿ ಮತಕ್ಷೇತ್ರದಲ್ಲಿ 193 ಶಾಲೆಗಳು ಮಳೆ ಮತ್ತು ಪ್ರವಾಹದಿಂದಾಗಿ ಶಾಲಾ ಕಟ್ಟಡಗಳು ಕುಸಿತ ಕಂಡಿವೆ. 424 ಶಾಲೆಗಳು ದುರಸ್ತಿಯಲ್ಲಿದ್ದು, ಇದಕ್ಕಾಗಿ .4.24 ಕೋಟಿಗಳು ಹಾಗೂ ಶಿಥೀಲಗೊಂಡ ಶಾಲೆಗಳ ಮರು ನಿರ್ಮಾಣಕ್ಕೆ 29.28 ಕೋಟಿಗಳ ಅವಶ್ಯಕತೆ ಇದೆ. ಇದಕ್ಕಾಗಿ ಅಂದಾಜು 34 ಕೋಟಿಗಳ ಅನುದಾನ ಅಗತ್ಯವಿದೆ. ಎನ್‌ಡಿಆರ್‌ಎಫ್‌ ಯೋಜನೆಯಡಿ ಒಂದು ಶಾಲೆಯ ದುರಸ್ತಿಗೆ ಕೇವಲ 2 ಲಕ್ಷ ರು.ಗಳನ್ನು ನೀಡುತ್ತಿದ್ದು, ಈ ಹಣವು ಶಾಲಾ ದುರಸ್ತಿಗೂ ಸಾಕಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರದಿಂದ ಅಗತ್ಯ ಹಣವನ್ನು ಕೂಡಲೇ ಬಿಡುಗಡೆ ಮಾಡಿಸುವಂತೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಕೋರಿದರು. ಶಾಲೆಗಳಲ್ಲಿ ಗಂಜಿ ಕೇಂದ್ರಗಳು ಪ್ರಾರಂಭವಾಗಿದ್ದರಿಂದ ಶಾಲಾ ದಾಸ್ತಾನುಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ. ಇದನ್ನು ಮರು ಭರಣಾ ಮಾಡುವಂತೆ ಮನವಿ ಮಾಡಿಕೊಂಡರು.

ಬೆಳಗಾವಿ: ಸರ್ಕಾರ ಬದಲಾದರೂ ಇಲ್ಲಿ ಮಾತ್ರ ಈಗಲೂ ಎಚ್‌ಡಿಕೆ ಸಿಎಂ..!

ಗೋಕಾಕ್‌ ಶೈಕ್ಷಣಿಕ ವಲಯದಲ್ಲಿ 256 ಶಾಲಾ ಕೊಠಡಿಗಳು ದುರಸ್ತಿಯಲ್ಲಿವೆ. 76 ಕೊಠಡಿಗಳು ಶಿಥೀಲಾವಸ್ಥೆಯಲ್ಲಿವೆ. ಇದಕ್ಕಾಗಿ 15.26 ಕೋಟಿಗಳ ಅಂದಾಜು ಹಾನಿಯನ್ನು ವರದಿ ಮಾಡಲಾಗಿದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ. ಬಳಿಗಾರ ಅವರು ಹೇಳಿದರು.

ಲೋಕೋಪಯೋಗಿ ಇಲಾಖೆಯ ವರದಿ ಪ್ರಕಾರ 125 ಕಿ.ಮೀ ರಸ್ತೆಗಳು ಹಾಳಾಗಿದ್ದು, ಇದರಲ್ಲಿ 4 ಸೇತುವೆಗಳು ಸೇರಿವೆ. ಅರಭಾವಿ ಮಠದಿಂದ ಯಾದವಾಡವರೆಗಿನ ಶಾಶ್ವತ ರಸ್ತೆ ನಿರ್ಮಾಣ ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆರ್‌ಡಿಪಿಆರ್‌ ಇಲಾಖೆಯ 369 ಕಿಮೀ ರಸ್ತೆ ಹಾಳಾಗಿದ್ದು, ಇದಕ್ಕಾಗಿ .35 ಕೋಟಿಗಳ ಅಂದಾಜು ವರದಿಯನ್ನು ನೀಡಲಾಗಿದೆ. ಇದರಲ್ಲಿ 7 ಸೇತುವೆಗಳು 1 ಕೆರೆಗಳು ಸೇರಿವೆ. 492 ಶಾಲೆ, ಅಂಗನವಾಡಿ ಹಾಗೂ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು, .40.99 ಕೋಟಿಗಳ ಹಾನಿಯನ್ನು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.

ಬೆಳಗಾವಿ: ಸರ್ವೆಗೆ ಬಂದ ಅಧಿಕಾರಿಗಳನ್ನೇ ಕೂಡಿ ಹಾಕಿದ ಸಂತ್ರಸ್ತರು..!

ಇತ್ತೀಚೆಗೆ ಸುರಿದ ಭಾರಿ ಪ್ರಮಾಣದ ಮಳೆ ಹಾಗೂ ಅಬ್ಬರದ ಪ್ರವಾಹದಿಂದಾಗಿ ಗೋಕಾಕ್‌ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ಕಬ್ಬಿನ ಬೆಳೆ ಸಂಪೂರ್ಣ ನಾಶವಾಗಿದೆ. ಕೂಡಲೇ ನಷ್ಟಕ್ಕೀಡಾದ ರೈತರ ಬೆಳೆಗಳ ಹಾನಿಯನ್ನು ಸಮೀಕ್ಷೆ ನಡೆಸಿ ಎ.ಸಿ ಮೂಲಕ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ ನೀಡಿದರು. ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಪಂ ಇಓ ಬಸವರಾಜ ಹೆಗ್ಗನಾಯಿಕ, ಡಿವಾಯ್‌ಎಸ್‌ಪಿ ಎಸ್‌. ಪ್ರಭು, ಮೂಡಲಗಿ ತಾಲೂಕಾ ನೋಡಲ್‌ ಅಧಿಕಾರಿ ಎಸಿಎಫ್‌ ಶ್ರೀಕಾಂತ ಕಣದಾಳೆ ಉಪಸ್ಥಿತರಿದ್ದರು.

Follow Us:
Download App:
  • android
  • ios