ಪಹಣಿ ದುರುಪಯೋಗಕ್ಕೆ ಕ್ರಮಿನಲ್ ಮೊಕದ್ದಮೆ: ಕೃಷ್ಣಪ್ಪ
ರಾಗಿ ಖರೀದಿ ಮಾಡುವ ಸಂಧರ್ಭದಲ್ಲಿ ರೈತರು ತಮ್ಮ ಪಹಣಿಯನ್ನು ಮಧ್ಯವರ್ತಿಗಳಿಗೆ ನೀಡಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಶಾಸಕ ಎಂ.ಟಿ .ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ತುರುವೇಕೆರೆ : ರಾಗಿ ಖರೀದಿ ಮಾಡುವ ಸಂಧರ್ಭದಲ್ಲಿ ರೈತರು ತಮ್ಮ ಪಹಣಿಯನ್ನು ಮಧ್ಯವರ್ತಿಗಳಿಗೆ ನೀಡಿದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಶಾಸಕ ಎಂ.ಟಿ .ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಬಾರಿ ಮಳೆಯ ಅಭಾವದಿಂದ ರಾಗಿ ಬೆಳೆದ ರೈತರ ಸಂಖ್ಯೆ ವಿರಳವಾಗಿದೆ. ಮುಖ್ಯವಾಗಿ ರಾಗಿ ತರುವ ರೈತರಿಂದ ಎಫ್ಐಡಿ ಮತ್ತು ಆಧಾರ ಕಾರ್ಡ್‌ಗಳನ್ನು ಪಡೆಯಬೇಕು. ಅಲ್ಲದೇ ಕೈ ಬೆರಳಿನ ಗುರುತನ್ನೂ ಸಹ ಜಮೀನಿನ ರೈತರೇ ನೀಡಬೇಕಾಗಿರುವುದರಿಂದ ವಂಚನೆ ಮಾಡಲು ಸಾಧ್ಯವಿಲ್ಲ.
ದಲ್ಲಾಳಿಗಳು ನಕಲಿ ದಾಖಲೆ ಸೃಷ್ಟಿಸದಂತೆ ಹಾಗೂ ಕಮಿಷನ್ ಆಸೆಗಾಗಿ ದಲ್ಲಾಳಿಗಳೊಂದಿಗೆ ಕೈ ಜೋಡಿಸದೆ ಮುನ್ನೆಚ್ಚರಿಕೆ ವಹಿಸಬೇಕೆಂದು ರಾಗಿ ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದರು.
ರೈತರಿಗೆ ತೊಂದರೆಯಾಗದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಪಹಣಿ ನೀಡುವಾಗ ಸೂಕ್ತ ರೀತಿ ಪರಿಶೀಲನೆ ನಡೆಸಿ ಪಹಣಿ ನೀಡಬೇಕು. ರೈತರಿಂದ ಹಣ ಪಡೆದು ಪಹಣಿ ನೀಡಿ ವಂಚಿಸಿದರೆ ತಪ್ಪು ಎಸಗಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.
ಕಮಿಷನ್ ಆಸೆಗಾಗಿ ರಾಗಿ ಖರೀದಿ ಕೇಂದ್ರದಲ್ಲಿನ ಅಧಿಕಾರಿಗಳು ಅವ್ಯವಹಾರ ನಡೆಸಿ ತಾಲ್ಲೂಕಿನ ರೈತರ ರಾಗಿಯನ್ನು ಕೊಳ್ಳುವಲ್ಲಿ ಪ್ರಮಾದವೆಸಗಿರುವುದು ಕಂಡು ಬಂದಲ್ಲಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಎಚ್ಚರಿಸಿದರು. ಕೇಂದ್ರದಲ್ಲಿ ದಲ್ಲಾಳಿಗಳು ಸುಳಿಯದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ಪೊಲೀಸ್ ರಕ್ಷಣೆಯನ್ನು ಸಹ ಕೊಡುವುದಾಗಿ ಹೇಳಿದರು.
ಸಂಧರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ವಿ.ಬಿ. ಶ್ರೀಧರ್, ತಹಸೀಲ್ದಾರ್ ವೈ.ಎಂ. ರೇಣುಕುಮಾರ್, ಕೃಷಿ ಸಹಾಯಕ ಅಧಿಕಾರಿ ಬಿ.ಪೂಜಾ, ಆಹಾರ ಇಲಾಖೆಯ ಅಧಿಕಾರಿ ಪ್ರೇಮಾ, ಎಪಿಎಂಸಿ ಮಾಜಿ ನಿರ್ದೇಶಕ ವಿಜಯೇಂದ್ರ, ಡಿಸಿಸಿ ಬ್ಯಾಂಕ್ ಜಿಲ್ಲಾ ಮಾಜಿ ನಿರ್ದೇಶಕ ಬಿ.ಎಸ್.ದೇವರಾಜು, ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಆರ್.ಜಯರಾಮ್, ಮುಖಂಡರಾದ ದಂಡಿನಶಿವರ ರಾಜ್‌ಕುಮಾರ್ ಸೇರಿದಂತೆ ಹಲವು ಮುಖಂಡರು ಇದ್ದರು.