ಬೆಂಗಳೂರು(ಜು.28): ಸಕಾಲಕ್ಕೆ ಆ್ಯಂಬುಲೆನ್ಸ್‌ ಸಿಗದ ಕಾರಣ ಕೊರೋನಾ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪರಪ್ಪನ ಅಗ್ರಹಾರದ ಹೊಸರೋಡಿನ ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದ ಬಿಬಿಎಂಪಿ ಆರೋಗ್ಯ ವಿಭಾದ ಅಧಿಕಾರಿಗಳು, ಶೀಘ್ರದಲ್ಲಿ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು.

ಆದರೆ ಸಕಾಲದಲ್ಲಿ ಆ್ಯಂಬುಲೆನ್ಸ್‌ ಕಳುಹಿಸದೇ ನಿರ್ಲಕ್ಷ್ಯವಹಿಸಿದ ಪರಿಣಾಮ ಉಸಿರಾಟದ ತೊಂದರೆಯಿಂದ ಸೋಂಕಿತ ಮೃತಪಟ್ಟಿದ್ದಾರೆಂದು ಸಂಬಂಧಿಕರು ದೂರಿದ್ದಾರೆ. ಪರಪ್ಪನ ಅಗ್ರಹಾರದ ಸುಮಾರು 36 ವರ್ಷದ ವ್ಯಕ್ತಿಗೆ ಕಳೆದ ಕೆಲ ದಿನಗಳಿಂದ ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು.

ಕೊರೋನಾ ವರದಿ ಕೇಳದೆ ಆಸ್ಪತ್ರೆಗೆ ದಾಖಲಿಸಿಕೊಳ್ಳಿ: ಸರ್ಕಾರ ಖಡಕ್‌ ಆದೇಶ

ಜು.24ರಂದು ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಜು.26ರಂದು ಸಂಜೆ 3 ಗಂಟೆಗೆ ಕರೆ ಮಾಡಿದ್ದ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ನಿಮಗೆ ಕೊರೋನಾ ಸೋಂಕು ದೃಢಪಟ್ಟಿದೆ. ಚಿಕಿತ್ಸೆ ನೀಡಲು ನಿಮ್ಮನ್ನು ಕರೆದೊಯ್ಯಲಾಗುವುದು. ಶೀಘ್ರದಲ್ಲಿ ಮನೆ ಬಳಿ ಆ್ಯಂಬುಲೆನ್ಸ್‌ ಬರಲಿದ್ದು ಸಿದ್ಧರಾಗಿರಬೇಕು ಎಂದು ತಿಳಿಸಿದ್ದರು.

ರಾತ್ರಿ ಎಂಟು ಗಂಟೆಯಾದರೂ ಆ್ಯಂಬುಲೆನ್ಸ್‌ ಬಂದಿರಲಿಲ್ಲ. ಕೊನೆಗೆ ಬಸ್‌ ನಿಲ್ದಾಣದವರೆಗೂ ಹೋಗಿ ಸುಮಾರು 30 ನಿಮಿಷ ಕಾದಿದ್ದಾರೆ. ಆದರೂ ಆ್ಯಂಬುಲೆನ್ಸ್‌ ಬಂದಿರಲಿಲ್ಲ. ಬಳಿಕ ಮನೆಗೆ ವಾಪಸಾದ ಅವರಿಗೆ ಉಸಿರಾಟದ ತೊಂದರೆಯಿಮದ ಸಾವನ್ನಪ್ಪಿದರು ಎಂದು ಮೃತರ ಸಂಬಂಧಿ ಸುರೇಶ್‌ ‘ಕನ್ನಡಪ್ರಭ’ಕ್ಕೆ ವಿವರಿಸಿದರು.

ರಾತ್ರಿಯಿಡೀ ಮನೆಯಲ್ಲೇ ಇದ್ದ ಶವ:

ಕೊರೋನಾ ಸೋಂಕಿನಿಂದ ರಾತ್ರಿ 9 ಗಂಟೆಗೆ ವ್ಯಕ್ತಿ ಮೃತಪಟ್ಟಿದ್ದರೂ, ಮೃತದೇಹವನ್ನು ತೆಗೆದುಕೊಂಡು ಹೋಗಲು ಬೆಳಗಾಗುವವರೆಗೂ ಪಾಲಿಕೆ ಸಿಬ್ಬಂದಿ ಇತ್ತ ಮುಖ ಮಾಡಿರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರಲಿಲ್ಲ.

ಬೆಂಗಳೂರು: 50 ವರ್ಷದ ಹಳೆಯ ಪ್ರತಿಷ್ಠಿತ ಬೇಕರಿ ಮಾಲೀಕ ಕೊರೋನಾಗೆ ಬಲಿ

ಘಟನೆ ಕುರಿತು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಪಾಲಿಕೆ ಸಿಬ್ಬಂದಿ ಮಧ್ಯಾಹ್ನ 12 ಗಂಟೆಗೆ ಬಂದು ಮೃತ ದೇಹವನ್ನು ಕೊಂಡೊಯ್ದರು ಎಂದು ಸುರೇಶ್‌ ತಿಳಿಸಿದರು.