ಬೆಂಗಳೂರು(ಜು.21): ರಾಜಧಾನಿ ಬೆಂಗಳೂರಿನಲ್ಲಿ ಸತತ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಹಾಗೂ ಮೃತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಸೋಮವಾರ ಹೊಸದಾಗಿ 1,452 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, 31 ಮಂದಿ ಸೋಂಕಿನಿಂದ ಮೃಪಟ್ಟಿದ್ದಾರೆ.

ಕಳೆದ ಒಂದು ವಾರದಿಂದ ನಗರದಲ್ಲಿ ದಿನಕ್ಕೆ ಎರಡು ಸಾವಿರಕ್ಕೂ ಹೆಚ್ಚು ಸೋಂಕಿತರಾಗುತ್ತಿದ್ದು, 50ರಿಂದ 70 ಮಂದಿ ಮೃತಪಡುತ್ತಿದ್ದರು. ಆದರೆ, ಭಾನುವಾರ ಮತ್ತು ಸೋಮವಾರ ಸೋಂಕಿತರ ಸಂಖ್ಯೆಯ ಜತೆಗೆ ಸಾವಿನ ಸಂಖ್ಯೆಯೂ ಇಳಿಕೆಯಾಗಿರುವುದು ಸ್ವಲ್ಪ ಮಟ್ಟಿನ ಆತಂಕ ದೂರ ಮಾಡಿದೆ.

ಬಿಎಸ್‌ವೈ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ ಡಿಕೆ ಶಿವಕುಮಾರ್

ಕಳೆದ ಶುಕ್ರವಾರ 2208 ಪ್ರಕರಣ ಪತ್ತೆಯಾಗಿ 75 ಮಂದಿ ಮೃತಪಟ್ಟಿದ್ದರು, ಶನಿವಾರ ಸೋಂಕಿತರ ಸಂಖ್ಯೆ 2125ಕ್ಕೆ ಹಾಗೂ ಮೃತರ ಸಂಖ್ಯೆ 49ಕ್ಕೆ ಮತ್ತು ಭಾನುವಾರ ಸೋಂಕಿತರ ಸಂಖ್ಯೆ 2156ಕ್ಕೆ ಹಾಗೂ ಮೃತರ ಸಂಖ್ಯೆ 36ಕ್ಕೆ ಇಳಿಕೆಯಾಗಿದೆ. ಸೋಮವಾರ ಹೊಸದಾಗಿ 1,452 ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 33,229ಕ್ಕೆ ಏರಿಕೆಯಾಗಿದೆ.

ಕೋವಿಡ್ ಆಸ್ಪತ್ರೆಗಳಿಗೆ ಪರಿಸರ ಸ್ನೇಹಿ ಬೆಡ್ ಖರೀದಿಸಿದ ಕಾಂಗ್ರೆಸ್, ಮಲಗಿ ಟ್ರಯಲ್ ನೋಡಿದ ಡಿಕೆಶಿ

ಈ ನಡುವೆ 163 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಈ ವರೆಗೆ ಒಟ್ಟು 6,956 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಇನ್ನೂ 25,574 ಸಕ್ರಿಯ ಕೊರೋನಾ ಸೋಂಕು ಪ್ರಕರಣಗಳಿವೆ. ನಗರದಲ್ಲಿ ಈವರೆಗೆ 698 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಐಸಿಯುನಲ್ಲಿ 336 ಮಂದಿ: ಸೋಮವಾರ ವರದಿ ಪ್ರಕಾರ ನಗರದಲ್ಲಿ ಒಟ್ಟು ಕೊರೋನಾ ಸೋಂಕು ಪ್ರಕರಣಗಳು ತಗ್ಗಿದ್ದರೂ ಐಸಿಯುನಲ್ಲಿ 336 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.