ಬೆಂಗಳೂರು(ಜು.25): ಕೊರೋನಾ ರೋಗಿಗಳ ಆರೈಕೆಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಸ್ಥಾಪಿಸಲು ಉದ್ದೇಶಿದ್ದ 10,100 ಹಾಸಿಗೆಗಳ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರದ ಹಾಸಿಗೆಗಳ ಸಾಮರ್ಥ್ಯವನ್ನು ಸರ್ಕಾರ ದೀಢರ್‌ 6500ಕ್ಕೆ ಸೀಮಿತಗೊಳಿಸಿದೆ. ಇದರೊಂದಿಗೆ ವಿಶ್ವದ ಅತೀ ದೊಡ್ಡ ಕೋವಿಡ್‌ ಆರೈಕೆ ಕೇಂದ್ರವೆಂಬ ಹಣೆಪಟ್ಟಿಕಳಚಿಸಿದೆ.

"

6,500 ಹಾಸಿಗೆಗಳು ಸೋಂಕಿತರಿಗೆ ಮೀಸಲಾದರೆ, ಇನ್ನುಳಿದ 1,500 ಹಾಸಿಗೆಗಳನ್ನು ಆರೈಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಾಗಿ ಮೀಸಲಿಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಧೈರ್ಯವಾಗಿರಿ, ಸಾಮಾನ್ಯ ಕಾಯಿಲೆಯೆಂದು ಭಾವಿಸಿ: ಕೊರೊನಾ ಗೆದ್ದವರು ಹೇಳೋದಿದು..!

ಬಿಐಇಸಿಯಲ್ಲಿ 10,100 ಹಾಸಿಗೆ ಸಾಮರ್ಥ್ಯದ ವಿಶ್ವದ ಅತಿ ದೊಡ್ಡ ಕೋವಿಡ್‌ ನಿಗಾ ಕೇಂದ್ರ ಸ್ಥಾಪಿಸುತ್ತಿರುವುದಾಗಿ ಸರ್ಕಾರ ಹೇಳಿಕೊಂಡಿತ್ತು. ಆದರೆ, ಈ ಕೇಂದ್ರಕ್ಕೆ ಅಗತ್ಯವಿರುವ ಮಂಚ, ಹಾಸಿಗೆ ಮತ್ತಿತರ ವಸ್ತುಗಳ ದರ ನಿಗದಿ ವಿಚಾರದಲ್ಲಿ ಸರ್ಕಾರ ಮತ್ತು ಗುತ್ತಿಗೆದಾರರ ನಡುವಿನ ತಿಕ್ಕಾಟದಿಂದ ಹಾಸಿಗೆ ಸಾಮರ್ಥ್ಯವನ್ನು ಇದ್ದಕ್ಕಿದ್ದಂತೆ ಕಡಿಮೆ ಮಾಡಲಾಗಿದೆ.

ಈಗಾಗಲೇ 6,500 ಹಾಸಿಗೆ, ಮಂಚ, ಫ್ಯಾನ್‌ ಸೇರಿದಂತೆ ಸೋಂಕಿತನ ಆರೈಕೆಗೆ ಬೇಕಾದ ವ್ಯವಸ್ಥೆ ಮಾಡಿರುವ ಗುತ್ತಿಗೆದಾರರೊಂದಿಗೆ ಬಾಡಿಗೆ ವಿಚಾರದಲ್ಲಿ ತಿಕ್ಕಾಟ ನಡೆಯುತ್ತಿದೆ. ಬಿಬಿಎಂಪಿಯು ಮಂಚ, ಹಾಸಿಗೆ ಸೇರಿ ಆರು ವಸ್ತು ಖರೀದಿಗೆ 4,800 ರು. ನಿಗದಿ ಪಡಿಸಿದರೆ, ಗುತ್ತಿಗೆದಾರರು 7,500 ರು. ನೀಡುವಂತೆ ಪಟ್ಟು ಹಿಡಿದಿದ್ದಾರೆ. ಬಿಬಿಎಂಪಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ನೀಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ. ಇದರಿಂದ ಗುತ್ತಿಗೆದಾರರು ಉಳಿದ 3,600 ಹಾಸಿಗೆ, ಮಂಚ ಸರಬರಾಜು ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಕೊರೋನಾ ಗೆದ್ದವರ ಅನುಭವ: ಎಚ್ಚರಿಕೆ ವಹಿಸಿದರೆ ಪ್ರಾಣಕ್ಕೆ ಅಪಾಯ ಇಲ್ಲ!

ಈ ಮಧ್ಯೆ, ಹಾಸಿಗೆ ಸಾಮರ್ಥ್ಯ ಇಳಿಕೆ ಬಗ್ಗೆ ಅಧಿಕಾರಿಗಳು ಹೇಳುವುದೇ ಬೇರೆ. ಸರ್ಕಾರ 10,100 ಹಾಸಿಗೆ ಸಾಮರ್ಥ್ಯದ ನಿಗಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದದ್ದು ನಿಜ. ಅಲ್ಲಿ ಅಷ್ಟುಹಾಸಿಗೆ ಅಳವಡಿಕೆಗೆ ಸ್ಥಳಾವಕಾಶವೂ ಇದೆ. ಆದರೆ, ಈಗಾಗಲೇ ಜಿಕೆವಿಕೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸಾಕಷ್ಟುಕೋವಿಡ್‌ ನಿಗಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಾಗಾಗಿ ಅಗತ್ಯತೆ ನೋಡಿಕೊಂಡು ಸಾಮರ್ಥ್ಯ ಹೆಚ್ಚಿಸಲು ತೀರ್ಮಾನಿಸಿ ಸದ್ಯದ ಮಟ್ಟಿಗೆ 5000 ಹಾಸಿಗೆ ಸಾಮರ್ಥ್ಯದ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.

ಆರೋಗ್ಯ ಸಿಬ್ಬಂದಿಗೆ 1500 ಹಾಸಿಗೆ:

ಇದರ ಜೊತೆಗೆ ಈ ಕೇಂದ್ರದಲ್ಲಿ 1500 ಮಂದಿ ವೈದ್ಯರು, ಶುಶ್ರೂಷಕರು ಸೇರಿ ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಅವರಲ್ಲಿ ಸೋಂಕಿತರಾದರೆ ಹಾಗೂ ಅವರು ಐಸೋಲೇಷನ್‌ನಲ್ಲಿ ಇರಲು ಇನ್ನೂ 1500 ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಈ ಕೇಂದ್ರ ಒಟ್ಟು ಸಾಮರ್ಥ್ಯ 6500 ಆಗುತ್ತದೆ. ಪರಿಸ್ಥಿತಿ ನೋಡಿಕೊಂಡು ಹಾಸಿಗೆ ಸಾಮರ್ಥ್ಯವನ್ನು ಮುಂದೆ ವಿಸ್ತರಿಸಲಾಗುವುದು ಎಂದು ಬಿಬಿಎಂಪಿ ಜಂಟಿ ಆಯುಕ್ತ ಸಫ್‌ರ್‍ರಾಜ್‌ ಖಾನ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 1000 ಹಾಸಿಗೆ

ಇನ್ನು 6500ರಲ್ಲಿ ಸದ್ಯ 5000 ಹಾಸಿಗೆಗಳ ಅಳವಡಿಕೆ ಮಾತ್ರ ಪೂರ್ಣಗೊಂಡಿದ್ದು ಸೋಮವಾರ ಉದ್ಘಾಟನೆ ಬಳಿಕ ಮೊದಲ ಹಂತದಲ್ಲಿ 1000 ಹಾಸಿಗೆಗಳು ಮಾತ್ರ ಸೋಂಕಿತರ ಹಾರೈಕೆಗೆ ಲಭ್ಯವಾಗಲಿವೆ. ಹಂತ ಹಂತವಾಗಿ ಉಳಿದ ಹಾಸಿಗೆಗಳ ಭರ್ತಿ ಕಾರ್ಯ ನಡೆಯಲಿದೆ.

ಈ ಬಗ್ಗೆ ಸ್ವತಃ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಕೂಡ ಟ್ವೀಟ್‌ ಮಾಡಿದ್ದು, ‘ಈಗಾಗಲೇ ಪಾಲಿಕೆಯಿಂದ 8 ಕೋವಿಡ್‌ ನಿಗಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ಬಿಐಇಸಿಯಲ್ಲಿ 5000 ಹಾಸಿಗೆಗಳು ಲಭ್ಯವಿದೆ. ಅವುಗಳಲ್ಲಿ 1000 ಹಾಸಿಗೆಗಳನ್ನು ಮೊದಲ ಹಂತವಾಗಿ ಉದ್ಘಾಟಿಸಲಾಗುವುದು’ ಎಂದು ಹೇಳಿದ್ದಾರೆ.

ಎಸ್‌ಎಸ್‌ಎನ್‌ಎಂಸಿ ಆಸ್ಪತ್ರೆಯಿಂದ ಹೆಚ್ಚುವರಿ ಹಣ ವಸೂಲಿ

ವಾರ್ಡ್‌, ವಲಯವಾರು ವಿಕೇಂದ್ರಿಕೃತ ಆರೈಕೆ ಕೇಂದ್ರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಿಐಇಸಿಯಲ್ಲಿ 6500 ಹಾಸಿಗೆ ಆರೈಕೆ ಕೇಂದ್ರ ಸೀಮಿತವಾಗಲಿದೆ. 10,100ಕ್ಕೆ ಏರಿಕೆ ಸದ್ಯಕ್ಕೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.