ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯೇ ಖಾಲಿ?
* ಸದ್ಯಕ್ಕೆ ಲಸಿಕಾ ಅಭಿಯಾನಕ್ಕೂ ಬಿತ್ತು ಬ್ರೇಕ್
* ಕೆಲವೆಡೆ ನೋ ಸ್ಟಾಕ್ ಬೋರ್ಡ್
* ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಾರ್ವಜನಿಕರು
ಬೆಳಗಾವಿ(ಜೂ.28): ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುವಿಕೆ ತಡೆಗೆ ಲಸಿಕೆ ಹಾಕಿಸಿಕೊಳ್ಳಿ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು ಕರೆ ನೀಡುತ್ತಿದ್ದಾರೆ. ಅದರಂತೆ ಲಸಿಕಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಲಸಿಕೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಲಸಿಕಾ ಅಭಿಯಾನಕ್ಕೆ ಬ್ರೇಕ್ ಬಿದ್ದಿದೆ.
ಇಷ್ಟು ದಿನ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಜನತೆ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳಿಗೆ ಮುಗಿಬೀಳುತ್ತಿದ್ದಾರೆ. ಆದರೆ, ಲಸಿಕೆ ಕೊರತೆ ಎದುರಾಗಿದೆ. ಹಾಗಾಗಿ, ಲಸಿಕೆಗಾಗಿ ಜನರು ಪರದಾಡುವಂತಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಖಾಲಿಯಾಗಿದೆ. ಕೋವ್ಯಾಕ್ಸಿನ್ ಇಲ್ಲ, ಕೋವಿಶೀಲ್ಡ್ ಕೂಡ ಇಲ್ಲ. ಲಸಿಕಾ ಕೇಂದ್ರಗಳ ಎದುರು ಕೋವಿಡ್ ಲಸಿಕೆ ಖಾಲಿ ಎಂಬ ಸೂಚನಾ ಪತ್ರಗಳನ್ನು ಲಗತ್ತಿಸಿರುವುದು ಕಂಡುಬರುತ್ತಿದೆ.
ಬೆಳಗಾವಿ: 120ಕ್ಕೂ ಅಧಿಕ ಬ್ಲಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ
ನೆರೆಯ ಮಹಾರಾಷ್ಟ್ರದಲ್ಲಿ ರೂಪಾಂತರಿ ಡೆಲ್ಟಾಪ್ಲಸ್ ವೈರಸ್ ಹಾಗೂ ಮೂರನೇ ಅಲೆ ಭೀತಿಯಿದೆ. ಜಿಲ್ಲೆಗೂ ಮೂರನೇ ಅಲೆ ಭೀತಿ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆಯಲು ಮುಂದಾಗಿದ್ದಾರೆ. ಆದರೆ, ಲಸಿಕೆಯೇ ಖಾಲಿಯಾಗಿರುವುದರಿಂದ ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾಕರಣ ಸ್ಥಗಿತಗೊಂಡಿದೆ. ಬೆಳಗಾವಿ ಬಿಮ್ಸ್, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹೀಗೆ ಒಟ್ಟು ಜಿಲ್ಲೆಯ 150ಕ್ಕೂ ಹೆಚ್ಚು ಲಸಿಕಾಕರಣ ಕೇಂದ್ರಗಳು ಸ್ಥಗಿತಗೊಂಡಿವೆ. ಹೀಗಾಗಿ ಲಸಿಕಾ ಶಿಬಿರಗಳು ಕೂಡ ನಿಂತುಹೋಗಿವೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಲಸಿಕಾಕರಣ ಕೇಂದ್ರದ ಎದುರು ಕೋವಿಡ್ ವ್ಯಾಕ್ಸಿನ್ ನೋಸ್ಟಾಕ್ ಎಂಬ ಸೂಚನಾ ಫಲಕವನ್ನೂ ಹಾಕಲಾಗಿದೆ. ಲಸಿಕೆ ಪಡೆಯಲು ಬಂದವರು ಈ ಫಲಕ ನೋಡಿ ಮರಳಿ ಮನೆಗಳತ್ತ ಮುಖ ಮಾಡುತ್ತಿದ್ದಾರೆ. ಲಸಿಕೆ ಕೊರತೆಯಾಗಿರುವುದರಿಂದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.