ಕೊರೋನಾ ನಿಯಮ ಗಾಳಿಗೆ ತೂರಿ ವಿವಾಹ ಮಂಡ್ಯದ ಬಿ ಹೊಸೂರು ಹಳ್ಳಿಯ ದೇಗುಲದಲ್ಲಿ ನಡೆದ ಮದುವೆ ಪ್ರಶ್ನಿಸಿದ ಅಧಿಕಾರಿಗಳಿಗೆ ಕುಟುಂಬದವರ ಅವಾಜ್

ಮಂಡ್ಯ (ಮೇ.24): ಕೊರೋನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ವಿವಾಹ ನಡೆಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳಿಗೆ ಆವಾಜ್ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದ ಬಳಿ ಭಾನುವಾರ ರಾತ್ರಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ತಂದೆ ಜೆ.ಪಿ.ಮಹೇಶ, ಮದುಮಗ ಶಿವಕುಮಾರ್, ಈತನ ಸೋದರ ಮಾವ ಶ್ರೀಧರ್ ಮತ್ತಿತರರ ವಿರುದ್ಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನವ ವಧು-ವರರನ್ನು ಕರೆದೊಯ್ಯಲು ಬಂದಿದ್ದ ಕಾರು ಸೇರಿದಂತೆ ಮೂರು ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಆಗಿದ್ದೇನು?

ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಭಾರ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯನಿರ್ವಹಿಸುತ್ತಿರುವ ಬಿ.ಸವಿತಾ ಅವರು ಮೇ 23 ರ ಸಂಜೆ ಸಿಬ್ಬಂದಿಯೊಂದಿಗೆ ಕೆರಗೋಡು ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ಈ ಸಮಯದಲ್ಲಿ ಬಿ.ಹೊಸೂರು ಗ್ರಾಮದ ಶ್ರೀ ಅಂಬೆಗಾಲು ಕೃಷ್ಣ ದೇವಸ್ಥಾನದ ಬಳಿ ಕೊರೋನಾ ನಿಯಮಾವಳಿ ಉಲ್ಲಂಘಿಸಿ ನೂರಾರು ಜನರನ್ನು ಸೇರಿಸಿ ವಿವಾಹ ಕಾರ್ಯ ನಡೆಯುತ್ತಿರುವ ಬಗ್ಗೆ ಮಾಹಿತಿ ತಿಳಿಯಿತು.

ಮಂಡ್ಯ: 800ಕ್ಕೂ ಹೆಚ್ಚು ಹಳ್ಳಿಗಳಿಗೆ ಹಬ್ಬಿದ ಸೋಂಕು ...

 ದೇವಸ್ಥಾನದ ಬಳಿ ಹೋದಾಗ ಅಲ್ಲಿ 100 ರಿಂದ 150 ಜನ ಗುಂಪು ಗುಂಪಾಗಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಮದುವೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಈ ವೇಳೆ ತಹಸೀಲ್ದಾರ್ ಅವರ ಅನುಮತಿ ಪತ್ರ ನೀಡುವಂತೆ ಕೇಳಿದಾಗ ಮದುವೆಗೆ ಯಾವುದೇ ಅನುಮತಿ ಪತ್ರ ಪಡೆಯದಿರುವುದು ಗಮನಕ್ಕೆ ಬಂದಿದೆ. 

ಈ ವಿಷಯ SI ಸವಿತಾ ತಹಸೀಲ್ದಾರ್ ಚಂದ್ರಶೇಖರ ಶಂ.ಗಾಳಿ ಅವರ ಗಮನಕ್ಕೆ ತಂದರು. ಕೂಡಲೇ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಪ್ರಶ್ನಿಸಿದ್ದಕ್ಕೆ ಅಧಿಕಾರಿಗಳಿಗೆ ಬೆದರಿಸಿದ್ದಾರೆ. ಅಲ್ಲದೇ ತಪ್ಪನ್ನು ಒಪ್ಪಿಕೊಳ್ಳದೇ ದುರ್ವರ್ತನೆ ತೋರಿದ್ದರಿಂದ SI ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona