ಬೆಂಗಳೂರು (ಏ.27):  ಕೊರೋನಾ ಹರಡುವ ಭೀತಿ ಹಾಗೂ ಜನತಾ ಕರ್ಫ್ಯೂ  ಹಿನ್ನೆಲೆಯಲ್ಲಿ ಸೋಮವಾರ ರಾಜಧಾನಿಯಿಂದ ಸಾವಿರಾರು ಮಂದಿ ತಮ್ಮ ಊರುಗಳಿಗೆ ಗುಳೆ ಹೊರಟರು. ಇದರಿಂದ ಬಸ್‌, ರೈಲು ನಿಲ್ದಾಣಗಳಲ್ಲಿ ಭಾರಿ ದಟ್ಟಣೆ, ಹೆದ್ದಾರಿಗಳಲ್ಲಿ ಭರ್ಜರಿ ಟ್ರಾಫಿಕ್‌ ಜಾಮ್‌ ನಿರ್ಮಾಣವಾಯಿತು. ಸಾಮಾಜಿಕ ಅಂತರ ಎಂಬುದು ಕಣ್ಮರೆಯಾಯಿತು.

ಇದೇ ಸಂದರ್ಭವನ್ನು ಬಳಸಿಕೊಂಡು ಖಾಸಗಿ ಬಸ್‌ ಮಾಲಿಕರು ದರ ಹೆಚ್ಚಳ ಮಾಡಿ ಪ್ರಯಾಣಿಕರ ಸುಲಿಗೆ ಮಾಡಿದರೆ, ಸಿಕ್ಕ ಸಿಕ್ಕ ಬಸ್‌ ಹತ್ತಿ ಜನರು ಬೆಂಗಳೂರು ತೊರೆಯಲು ಧಾವಂತ ತೋರಿದರು.

ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಹಾಗೂ ಸಾವಿನ ಪ್ರಕರಣ ಹೆಚ್ಚಾಗುತ್ತಿರುವುದರಿಂದ ತೀವ್ರ ಆತಂಕಕ್ಕೆ ಒಳಗಾಗಿರುವುದು ಕಾರ್ಮಿಕ ವರ್ಗ. ಸರ್ಕಾರ ಸೋಮವಾರ 14 ದಿನಗಳ ಜನತಾ ಕರ್ಫ್ಯೂ ಸಹ ಘೋಷಿಸಿದ್ದರಿಂದ ಕಾರ್ಮಿಕ ವರ್ಗ ನಗರ ತೊರೆದಿದೆ. ಒಂದು ಅಂದಾಜಿನ ಪ್ರಕಾರ ಉದ್ಯೋಗಿಗಳು, ಹೋಟೆಲ್‌, ರೆಸ್ಟೋರೆಂಟ್‌, ಬೇಕರಿ, ಕಟ್ಟಡ ನಿರ್ಮಾಣ ಕಾಮಗಾರಿ, ರಸ್ತೆ ಬದಿ ವ್ಯಾಪಾರಿಗಳು, ದಿನಗೂಲಿ ಕಾರ್ಮಿಕರು ಸೇರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ನಗರ ತೊರೆದರು.

ಗುಳೆ ಹೋದವರ ಸಾಮೂಹಿಕ ವಲಸೆ: ಹಳ್ಳಿಗಳಲ್ಲಿ ಆತಂಕ ಸೃಷ್ಟಿ ..

ಪ್ರಯಾಣಿಕರ ದೊಡ್ಡ ದಂಡು ಬಸ್‌ ಹಾಗೂ ರೈಲು ನಿಲ್ದಾಣಗಳತ್ತ ದೌಡಾಯಿಸಿದ್ದರು. ಸಂಜೆ ವೇಳೆಗೆ ಮೆಜೆಸ್ಟಿಕ್‌ ಪ್ರದೇಶದಲ್ಲಿ ದೊಡ್ಡ ದಂಡೇ ನೆರೆದಿತ್ತು. ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣ, ಕೆಎಸ್‌ಆರ್‌ ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಕೆಎಸ್‌ಆರ್‌ಟಿಸಿಯ ಸುಮಾರು 500 ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆಗೆ ಇಳಿಸಿತ್ತು.

ಬೆಳಗಾವಿ, ಬೀದರ್‌, ರಾಯಚೂರು, ಕೊಪ್ಪಳ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ದಾವಗೆರೆ, ಗದಗ, ವಿಜಯಪುರ, ಮಂಗಳೂರು, ಉಡುಪಿ, ಕೊಡಗು, ಶಿವಮೊಗ್ಗ, ಬಳ್ಳಾರಿ, ಚಾಮರಾಜನಗರ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದರು. ಇನ್ನು ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ ರಾಜ್ಯಗಳಿಗೆ ತೆರಳುವ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕಿದವು.

ಕೊರೊನಾ ಆರ್ಭಟಕ್ಕೆ ಬೆಂಗ್ಳೂರು ಖಾಲಿ ಖಾಲಿ, ಗುಳೆ ಹೊರಟ ಕಾರ್ಮಿಕರು..! ...

ಕೋವಿಡ್‌ ನಿಯಮ ಗಾಳಿಗೆ ತೂರಿದ ಜನ

ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರು ಊರುಗಳತ್ತ ತೆರಳಲು ಬಸ್‌ ನಿಲ್ದಾಣ, ರೈಲು ನಿಲ್ದಾಣಗಳಿಗೆ ಬಂದ ಹಿನ್ನೆಲೆಯಲ್ಲಿ ದಟ್ಟಣೆ ಉಂಟಾಗಿ ಸಾಮಾಜಿಕ ಅಂತರ ಮಾಯವಾಗಿತ್ತು. ಬಸ್‌ಗಳಲ್ಲಿ ಆಸನ ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿತ್ತು. ಪ್ಲಾಟ್‌ ಫಾಮ್‌ರ್‍ಗಳಲ್ಲಿ ಪ್ರಯಾಣಿಕರ ದೊಡ್ಡ ಗುಂಪುಗಳು ಕಂಡು ಬಂದ್ದವು. ಊರುಗಳಿಗೆ ತೆರಳುವ ಧಾವಂತದಲ್ಲಿ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.

ಹೆದ್ದಾರಿಗಳಲ್ಲಿ ಟ್ರಾಫಿಕ್‌ ಜಾಂ

ಕಳೆದೆರಡು ದಿನಗಳಿಂದ ವೀಕೆಂಡ್‌ ಕರ್ಫ್ಯೂ ನಿಂದ ವಾಹನಗಳ ಸಂಚಾರ ಇಲ್ಲದೇ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಸರ್ಕಾರಿ, ಖಾಸಗಿ ಬಸ್‌ಗಳ ಜೊತೆಗೆ ಜನರು ಖಾಸಗಿ ವಾಹನಗಳು, ಸ್ವಂತ ವಾಹನಗಳಲ್ಲಿ ಊರುಗಳಿಗೆ ತೆರಳಿದ ಪರಿಣಾಮ ನಗರ ಹೊರವಲಯದ ಹೆದ್ದಾರಿಗಳಲ್ಲಿ ಕಿಲೋ ಮೀಟರ್‌ ಉದ್ದಕ್ಕೆ ವಾಹನಗಳು ಸಾಲುಗಟ್ಟಿನಿಂತಿದ್ದವು. ತುಮಕೂರು ರಸ್ತೆಯ ನವಯುಗ ಟೋಲ್‌, ಬಳ್ಳಾರಿ ರಸ್ತೆಯ ಸಾದಹಳ್ಳಿ ಗೇಟ್‌ ಟೋಲ್‌, ಬೆಂಗಳೂರು-ಮೈಸೂರು ರಸ್ತೆಯ ನೈಸ್‌ ರಸ್ತೆ ಜಂಕ್ಷನ್‌ ಸೇರಿದಂತೆ ಹೊರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಟೋಲ್‌ ಕೇಂದ್ರಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಇಂದೂ ಕೂಡ ಜನರ ವಲಸೆ

ಮಂಗಳವಾರ ರಾತ್ರಿಯಿಂದಲೇ ಜನತಾ ಕರ್ಫ್ಯೂ ಜಾರಿಯಾಗುವುದರಿಂದ ಬೆಳಗ್ಗೆಯಿಂದಲೇ ಭಾರೀ ಸಂಖ್ಯೆಯ ಜನರು ನಗರದಿಂದ ಊರುಗಳತ್ತ ತೆರಳುವ ಸಾಧ್ಯತೆಯಿದೆ. ಸೋಮವಾರ ದೂರದೂರುಗಳಿಗೆ ತೆರಳುವವರು ನಗರದಿಂದ ಹೊರಟರು. ಇನ್ನು ಬೆಳಗ್ಗೆ ಹಾಸನ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳ ಜನರು ಊರುಗಳತ್ತ ತೆರುವ ಸಾಧ್ಯತೆಯಿದೆ.

ಬೆಂಗಳೂರಲ್ಲಿ ಕೊರೋನಾ ಸೋಂಕು ಹೆಚ್ಚಾಗಿರುವುದರಿಂದ ಅಪ್ಪ-ಅಮ್ಮ ಊರಿಗೆ ಬರುವಂತೆ ಒಂದು ವಾರದಿಂದ ಪದೇ ಪದೇ ಕರೆ ಮಾಡುತ್ತಿದ್ದರು. ಇದೀಗ ಸರ್ಕಾರ ಜನತಾ ಕಫä್ರ್ಯ ಘೋಷಿಸಿರುವುದರಿಂದ ಊರಿನತ್ತ ಹೊರಟ್ಟಿದ್ದೇನೆ. ವರ್ಕ್ ಫ್ರಂ ಹೋಂ ಜಾರಿ ಇರುವುದರಿಂದ ಊರಿನಿಂದಲೇ ಕೆಲಸ ಮಾಡುತ್ತೇನೆ.

-ಸುಶ್ಮಿತಾ, ಶಿವಮೊಗ್ಗ ಮೂಲದ ಐಟಿ ಉದ್ಯೋಗಿ.

ಅಯ್ಯೋ ಕಳೆದ ಬಾರಿ ಲಾಕ್‌ಡೌನ್‌ ವೇಳೆ ಕೆಲಸ ಇಲ್ಲದೇ ಪರದಾಡುವಂತಾಗಿತ್ತು. ಈಗ ಮತ್ತೆ ಸರ್ಕಾರ ಲಾಕ್‌ಡೌನ್‌ ಜಾರಿಗೆ ಮುಂದಾಗಿದೆ. ಹೋಟೆಲ್‌ ಮಾಲಿಕರು ಸಹ ಊರಿಗೆ ಹೋಗುವಂತೆ ಸೂಚಿಸಿರುವುದರಿಂದ ಊರಿಗೆ ಹೋಗಲು ಬಸ್‌ ನಿಲ್ದಾಣಕ್ಕೆ ಬಂದಿದ್ದೇನೆ.

-ಪುಟ್ಟರಾಜ ಕೆ.ಆಲೂರ, ಗದಗ ಮೂಲಕ ಹೋಟೆಲ್‌ ಕಾರ್ಮಿಕ.