Asianet Suvarna News Asianet Suvarna News

ನಗರದಲ್ಲಿ ಕೊರೋನಾ ಕೊನೆಗೂ ಹತೋಟಿಗೆ?

  •   ಕಳೆದ ಒಂದು ತಿಂಗಳಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣದ ಅಂಕಿ-ಅಂಶ ಅವಲೋಕಿಸಿದರೆ ಇಂತಹದೊಂದು ಆಶಾಭಾವನೆ
  • ಇದೀಗ 300 ಆಸುಪಾಲಿನಲ್ಲಿ ಸೋಂಕು ಹಾಗೂ ಬೆರಳೆಣಿಕೆಯಷ್ಟುಸಾವು ಸಂಭವಿಸುತ್ತಿದೆ
Covid Cases  Control in Bengaluru snr
Author
Bengaluru, First Published Oct 12, 2021, 12:24 PM IST
  • Facebook
  • Twitter
  • Whatsapp

ವರದಿ :  ಸಂಪತ್‌ ತರೀಕೆರೆ

ಬೆಂಗಳೂರು (ಅ.12):  ಕಳೆದ ಒಂದು ತಿಂಗಳಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣದ ಅಂಕಿ-ಅಂಶ ಅವಲೋಕಿಸಿದರೆ ಇಂತಹದೊಂದು ಆಶಾಭಾವನೆ ಹುಟ್ಟುತ್ತಿದೆ. ಏಕೆಂದರೆ, ಕರೋನಾ (Covid) ಎರಡನೇ ಹಂತದ ಉಚ್ಛ್ರಾಯ ಸ್ಥಿತಿಯಲ್ಲಿ ನಗರದಲ್ಲಿ ನಿತ್ಯ 10 ಸಾವಿರಕ್ಕೂ ಹೆಚ್ಚು ಪ್ರಕರಣ ಹಾಗೂ 300ಕ್ಕೂ ಹೆಚ್ಚು ಸಾವು ಸಂಭವಿಸುತ್ತಿತ್ತು. 

ಆದರೆ, ಇದೀಗ 300 ಆಸುಪಾಲಿನಲ್ಲಿ ಸೋಂಕು ಹಾಗೂ ಬೆರಳೆಣಿಕೆಯಷ್ಟುಸಾವು ಸಂಭವಿಸುತ್ತಿದೆ. ಅಷ್ಟೇ ಅಲ್ಲ ಕೊರೋನಾ (Corona) ಉಚ್ಛ್ರಾಯ ಸ್ಥಿತಿಯಿದ್ದ ಮೇ ಮಾಸದ 10ನೇ ದಿನದಂದು ನಗರದಲ್ಲಿ 374 ಸಾವು ಸಂಭವಿಸಿತ್ತು. ಆದರೆ, ಕಳೆದ ಒಂದು ತಿಂಗಳು (ಸೆ. 9ರಿಂದ ಅ.10ರವರೆಗೆ) ನಗರದಲ್ಲಿ ಸಂಭವಿಸಿದ ಒಟ್ಟು ಸಾವು 140. ಈ ಅಂಕಿ-ಅಂಶ ಗಮನಿಸಿದರೆ ತುಸು ಆಶಾಭಾವನೆ ಮೂಡುತ್ತಿದೆ. ಆದರೆ, ದಸರಾ ಹಬ್ಬ ಸೇರಿದಂತೆ ಇನ್ನು ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಈ ವೇಳೆ ನಗರದ ಜನತೆ ಸಂಯಮ ಕಾಯ್ದುಕೊಂಡರೆ ಖಂಡಿತ ಬೆಂಗಳೂರು (Bengaluru) ಕೊರೋನಾ ಗೆಲ್ಲುವ ದಿಸೆಯಲ್ಲಿ ಹೆಜ್ಜೆಯಿಟ್ಟಿದೆ ಎಂದೇ ಭಾವಿಸಬಹುದು. ಇದಾಗದ ಪಕ್ಷದಲ್ಲಿ ಮತ್ತೆ ದುರಂತದ ದಿನಗಳನ್ನು ನೋಡಬೇಕಾದೀತು ಎಂದು ತಜ್ಞರು ಎಚ್ಚರಿಸುತ್ತಾರೆ.

ಕರ್ನಾಟಕದಲ್ಲಿ ಕೊರೋನಾ ಏರಿಳಿತ: 10 ಸಾವಿರಕ್ಕಿಂತ ಕೆಳಕ್ಕಿಳಿದ ಸಕ್ರಿಯ ಪ್ರಕರಣಗಳು

ಮೇನಲ್ಲಿ ನಿತ್ಯ 300 ಸಾವು!

ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಕೋವಿಡ್‌ ಎರಡನೇ ಅಲೆಯ ತೀವ್ರಗೊಂಡಿದ್ದ ಮೇ ತಿಂಗಳಲ್ಲಿ ನಿತ್ಯ 300ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಎರಡನೇ ಅಲೆಯಲ್ಲಿ ದಿನವೂ ಸಾವಿನ ಸುರಿಮಳೆಯಿಂದ ಚಿತಾಗಾರಗಳ ಮುಂದೆ ಗಂಟೆಗಟ್ಟಲೆ ಕಾದುನಿಂತು ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯ ಸರ್ಕಾರದ (Karnataka Govt) ಕೋವಿಡ್‌ ನಿಯಂತ್ರಣ ನಿಯಮಗಳು, ಕಟ್ಟುನಿಟ್ಟಿನ ಪಾಲನೆಯಿಂದ ಕೋವಿಡ್‌ ಸಾವು ಮತ್ತು ಸೋಂಕಿನ ಪ್ರಕರಣ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಈ ಪರಿಣಾಮ ಈಗ ಸೋಂಕಿತ ಪ್ರಕರಣಗಳೊಂದಿಗೆ ಸಾವಿನ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ದಿನಕ್ಕೆ ಎರಡಂಕಿಗಿಂತ ಕಡಿಮೆ ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಕಳೆದೊಂದು ತಿಂಗಳಲ್ಲಿ ಪಾಲಿಕೆಯ 198 ವಾರ್ಡ್‌ಗಳ ಪೈಕಿ 122 ವಾರ್ಡ್‌ಗಳಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ.

ವಿಶೇಷವೆಂದರೆ ಸೆ.9ರಿಂದ ಈವರೆಗೆ ಅಟ್ಟೂರು, ಮುನೇಶ್ವರ ನಗರ, ಥಣಿಸಂದ್ರ, ದೊಡ್ಡಬೊಮ್ಮಸಂದ್ರ, ಗಂಗಾನಗರ, ಹೆಬ್ಬಾಳ, ನಾಗವಾರ, ಕಾಚರಕನಹಳ್ಳಿ, ಲಿಂಗರಾಜಪುರ, ನ್ಯೂತಿಪ್ಪಸಂದ್ರ, ಮಹಾಲಕ್ಷ್ಮೇಪುರ, ರಾಜಗೋಪಾಲ ನಗರ, ಗಾಯತ್ರಿ ನಗರ, ಗಾಂಧಿ ನಗರ, ಬಿನ್ನಿಪೇಟೆ, ಕೆ.ಆರ್‌.ಮಾರುಕಟ್ಟೆ, ಆಜಾದ್‌ ನಗರ, ಯಡಿಯೂರು, ಪಟ್ಟಾಭಿರಾಮ ನಗರ ಸೇರಿದಂತೆ 122 ವಾರ್ಡ್‌ಗಳಲ್ಲಿ ಸೋಂಕಿನಿಂದ ಸಾವು ಸಂಭವಿಸಿಲ್ಲ.

ಒಂದಕ್ಕಿಂತ ಹೆಚ್ಚು ಸಾವು:

ಚೌಡೇಶ್ವರಿ ವಾರ್ಡ್‌, ಕುವೆಂಪು ನಗರ, ಚೋಳಸಂದ್ರ, ಮಾರುತಿಸೇವಾ ನಗರ, ವಿಜ್ಞಾನ ನಗರ, ಗೋವಿಂದರಾಜ ನಗರ, ಮೂಡಲಪಾಳ್ಯ, ಅರಕೆರೆ, ಪ್ರಕಾಶ್‌ ನಗರ, ರಾಜಾಜಿ ನಗರ ಸೇರಿದಂತೆ 54 ವಾರ್ಡ್‌ಗಳಲ್ಲಿ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ದೊಡ್ಡನೆಕ್ಕುಂದಿ, ವಿದ್ಯಾರಣ್ಯಪುರ, ಲಗ್ಗೆರೆ ಸೇರಿದಂತೆ 12 ವಾರ್ಡ್‌ಗಳಲ್ಲಿ ತಲಾ ಇಬ್ಬರು, ಕೆಂಪೇಗೌಡ ವಾರ್ಡ್‌, ಮಲ್ಲೇಶ್ವರಂ, ಕೋರಮಂಗಲ ಸೇರಿದಂತೆ ಐದು ವಾರ್ಡ್‌ಗಳಲ್ಲಿ ತಲಾ 3, ಜ್ಞಾನಭಾರತಿ, ಹೊಯ್ಸಳ ನಗರ, ವಸಂತಪುರ ವಾರ್ಡ್‌ನಲ್ಲಿ ತಲಾ 4 ಮತ್ತು ಕತ್ರಿಗುಪ್ಪೆಯಲ್ಲಿ 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

ಏಳು ವಾರ್ಡ್‌ಗಳಲ್ಲಿ ನೂರಕ್ಕೂ ಹೆಚ್ಚು ಪ್ರಕರಣ

ಕೋವಿಡ್‌-19 ಎರಡನೇ ಅಲೆಯ ಸಂದರ್ಭದಲ್ಲಿ ಏ.30 ರಂದು ಬೆಂಗಳೂರು ನಗರದಲ್ಲಿ 26,756 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗಿನ ದಾಖಲೆ. ಪ್ರಸ್ತುತ ಬೆಂಗಳೂರಿನಲ್ಲಿ ಕೋವಿಡ್‌ ಸೋಂಕಿತ ಪ್ರಕರಣಗಳ (Covid Cases) ಏರಿಳಿತ ಮುಂದುವರೆದಿದ್ದು, ನಿತ್ಯ 200ರಿಂದ 300 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿವೆ. ಹಾಗೆಯೇ 45 ವಾರ್ಡ್‌ಗಳಲ್ಲಿ ಕಳೆದೊಂದು ತಿಂಗಳಿನಿಂದ ಪತ್ತೆಯಾದ ಕೋವಿಡ್‌ ಸೋಂಕಿತ ಪ್ರಕರಣಗಳು ಕೂಡಾ ಎರಡಂಕಿ ತಲುಪಿಲ್ಲ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಿ.ರಂದೀಪ್‌ (D Randeep) ಅವರು  ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಅ.10ರ ಅಂಕಿ-ಸಂಖ್ಯೆ

ಪಾಲಿಕೆಯ 198 ವಾರ್ಡ್‌ಗಳ ಪೈಕಿ ಒಂದು ತಿಂಗಳಲ್ಲಿ ಹೊರಮಾವು 157, ಹಗದೂರು 105, ದೊಡ್ಡ ನೆಕ್ಕುಂದಿ 130, ರಾಜರಾಜೇಶ್ವರಿ ನಗರ 138, ಎಚ್‌ಎಸ್‌ಆರ್‌ ಲೇಔಟ್‌ 106, ಸಿಂಗಸಂದ್ರ 115 ಮತ್ತು ಬೇಗೂರು ವಾರ್ಡ್‌ನಲ್ಲಿ 169 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಟಿ.ದಾಸರಹಳ್ಳಿ, ಕಾಡುಗೊಂಡನಹಳ್ಳಿ, ಕಾವಲ್‌ಬೈರಸಂದ್ರ, ಸಗಾಯಪುರ, ಸುಬ್ರಹ್ಮಣ್ಯನಗರ, ಭಾರತಿ ನಗರ, ನಾಯಂಡಹಳ್ಳಿ, ಬಾಪೂಜಿನಗರ, ಛಲವಾದಿ ಪಾಳ್ಯ ಸೇರಿದಂತೆ 45 ವಾರ್ಡ್‌ಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದಂಕಿ ದಾಟಿಲ್ಲ. 17 ವಾರ್ಡ್‌ಗಳಲ್ಲಿ ತಿಂಗಳಲ್ಲಿ 50ಕ್ಕೂ ಹೆಚ್ಚು ಮತ್ತು ಉಳಿದ 129 ವಾರ್ಡ್‌ಗಳಲ್ಲಿ 50ಕ್ಕಿಂತ ಕಡಿಮೆ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಶೇ.92 ಲಸಿಕಾಕರಣ 

ಬಿಬಿಎಂಪಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಲ್ಲಿ ಶೇ.92ರಷ್ಟುಮಂದಿಗೆ ಮೊದಲ ಡೋಸ್‌ (First Dose) ಹಾಗೂ ಶೇ.91ರಷ್ಟುಜನರಿಗೆ ದ್ವಿತೀಯ ಡೋಸ್‌ ಲಸಿಕೆ ನೀಡಲಾಗಿದೆ. 18-44 ವರ್ಷದೊಳಗಿನ 47,36,749(ಶೇ.65.85), 45-59 ವಯೋಮಿತಿಯೊಳಗಿನ 15,44,705(ಶೇ.21.47) ಹಾಗೂ 60 ವರ್ಷ ಮೇಲ್ಪಟ್ಟ9,12,121 ಮಂದಿ, 2,10,111 ಆರೋಗ್ಯ ಕಾರ್ಯಕರ್ತರು, 3,87,236 ಮುಂಚೂಣಿ ಕಾರ್ಯಕರ್ತರು ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ.

ಅದೇ ರೀತಿಯಲ್ಲಿ 18-44 ವರ್ಷದೊಳಗಿನ 23,75,508 (ಶೇ.57.76), 45-59 ವಯೋಮಿತಿಯೊಳಗಿನ 10,58,582(ಶೇ.22.74) ಹಾಗೂ 60 ವರ್ಷ ಮೇಲ್ಪಟ್ಟ6,78,408 ಮಂದಿ(ಶೇ.16.50), 1,59,632 ಆರೋಗ್ಯ ಕಾರ್ಯಕರ್ತರು, 2,71,234 ಮುಂಚೂಣಿ ಕಾರ್ಯಕತರು ದ್ವಿತೀಯ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕೋವಿಡ್‌ ಕೇಸು ಕಡಿಮೆ ಆಗಿದೆ. 2ನೇ ಅಲೆಯ ಕೊನೆಯ ಹಂತಕ್ಕೆ ಬಂದಿದ್ದೇವೆ. ಆದರೂ ರಾಜ್ಯದಲ್ಲಿ 400ರಿಂದ 500 ಕೇಸುಗಳು ದಾಖಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವನ್ನು ಪಾಲಿಸಬೇಕು. ಮೊದಲ ಮತ್ತು ಎರಡನೇ ಸಂದರ್ಭದಲ್ಲಿ ನಿರ್ಲಕ್ಷ್ಯದಿಂದ ಸಾವು-ನೋವು ಸಂಭವಿಸಿದ್ದನ್ನು ಮರೆಯಬಾರದು. ಮುಂದೆ ಡೆಲ್ಟಾಪ್ರಬೇಧದಿಂದ ಹೆಚ್ಚು ಅಪಾಯವಿಲ್ಲ. ಬೇರೆ ರೂಪಾಂತರಿ ಪ್ರಬೇಧ ರೂಪಗೊಂಡರೆ ಅಪಾಯ ತಪ್ಪಿದ್ದಲ್ಲ.

-ಸಿ.ಎನ್‌.ಮಂಜುನಾಥ್‌, ನಿರ್ದೇಶಕರು, ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆ

Follow Us:
Download App:
  • android
  • ios