Asianet Suvarna News

ನ್ಯಾಯಾಂಗ ಬಂಧಿತರಿಗೆ ಕೋವಿಡ್‌ ಟೆಸ್ಟ್‌ ಕಡ್ಡಾಯ

ನ್ಯಾಯಾಂಗ ಬಂಧನಕ್ಕೊಳಗಾಗುವಂತಹ ಯಾವುದೇ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗುವ ಆರೋಪಿಗೆ ಕಡ್ಡಾಯವಾಗಿ ಕೋವಿಡ್‌ -19 ಟೆಸ್ಟ್‌ ಮಾಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಇ ಕುರಿತಾದ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ ನೋಡಿ.

COVID 19 Test Compulsory for  Judicial custody Accused
Author
Shivamogga, First Published May 12, 2020, 11:14 AM IST
  • Facebook
  • Twitter
  • Whatsapp

- ಗೋಪಾಲ್‌ ಯಡಗೆರೆ, ಕನ್ನಡಪ್ರಭ

ಶಿವಮೊಗ್ಗ(ಮೇ.11): ಲಾಕ್‌ಡೌನ್‌ ನಂತರವೂ ದಿನದಿಂದ ದಿನಕ್ಕೆ ಕೊರೋನಾ ವೈರಸ್‌ನ ಪ್ರಭಾವ ಹೆಚ್ಚುತ್ತಿರುವ ಬೆನ್ನಹಿಂದೆಯೇ ಅಪರಾಧ ಚಟುವಟಿಕೆಗೆ ಸಂಬಂಧಿಸಿದಂತೆ ಪೊಲೀಸರಿಂದ ಬಂಧಿಸಲ್ಪಟ್ಟ ಆರೋಪಿಗಳಿಗೆ ಕಡ್ಡಾಯವಾಗಿ ಕೋವಿಡ್‌ -19 ಟೆಸ್ಟ್‌ ಮಾಡಿಸಲಾಗುತ್ತಿದೆ. ಇದರಿಂದಾಗಿ ಪೊಲೀಸ್‌ ಸಿಬ್ಬಂದಿಗಳಿಗೆ ಹೊಸ ಕೆಲಸದ ಹೊರೆಯೊಂದು ಹೆಗಲ ಮೇಲೇರಿದೆ.

ಕಳೆದ 10 ದಿನಗಳಿಂದೀಚೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ರಂಗನಾಥ್‌ ಮನವಿ ಮೇರೆಗೆ ನ್ಯಾಯಾಂಗ ಬಂಧನಕ್ಕೊಳಗಾಗುವಂತಹ ಯಾವುದೇ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗುವ ಆರೋಪಿಗೆ ಕಡ್ಡಾಯವಾಗಿ ಕೋವಿಡ್‌ -19 ಟೆಸ್ಟ್‌ ಮಾಡಿಸುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಈ ಆದೇಶವನ್ನೇ ಮುಂದಿಟ್ಟುಕೊಂಡು ರಾಜ್ಯದ ಉಳಿದ ಜಿಲ್ಲೆಗಳ ಕಾರಾಗೃಹದ ಅಧೀಕ್ಷಕರೂ ತಮ್ಮ ತಮ್ಮ ಜಿಲ್ಲೆಯ ನ್ಯಾಯಾಧೀಶರಿಗೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿರುವ ಪರಿಣಾಮ ನ್ಯಾಯಾಂಗ ಬಂಧನಕ್ಕೊಳಗಾಗುವ ಆರೋಪಿಗಳಿಗೆ ಪೊಲೀಸರು ಇದೀಗ ಕೋವಿಡ್‌ -19 ಪರೀಕ್ಷೆ ಮಾಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಿದ್ದಾರೆ.

ಬಿಂದಾಸ್ ಆಗಿ ತಿರುಗ್ತಿದ್ದಾರೆ ಜನ, ಎಚ್ಚರಿಸೋದ್ರಲ್ಲಿ ಪೊಲೀಸ್ರು ಹೈರಾಣ

ಬೆಂಗಳೂರಿನ ಪಾದರಾಯನಪುರ ಪ್ರಕರಣದ ಆರೋಪಿಗಳನ್ನು ರಾಮನಗರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿದ ಸಂದರ್ಭದಲ್ಲಿ ಕಾರಾಗೃಹದ ಸಿಬ್ಬಂದಿ ಹಾಗೂ ಅಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೂ ಕೊರೋನಾ ಭಯ ಕಾಡಿದ ನಂತರ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಹೆಚ್ಚುವರಿ ಕೆಲಸ:

ಪ್ರಸ್ತುತ ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡು ವಾರಿಯರ್ಸ್‌ ಎಂದು ಗುರುತಿಸಿಕೊಂಡಿರುವ ಪೊಲೀಸರು ಹಾಲಿ ಕೆಲಸದ ಜೊತೆಗೆ ಆರೋಪಿಗಳಿಗೆ ಕೋವಿಡ್‌ -19 ಟೆಸ್ಟ್‌ ಮಾಡಿಸುವ ಹೆಚ್ಚುವರಿ ಕೆಲಸವನ್ನು ನಿಭಾಯಿಸಬೇಕಿದೆ.

ಸಾಮಾನ್ಯ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗುವ ಅಥವಾ ವಿಚಾರಣೆಗಾಗಿ ತಮ್ಮ ವಶದಲ್ಲಿರುವ ಆರೋಪಿಯನ್ನು ಪೊಲೀಸರುವ ಸರ್ಕಾರಿ ವೈದ್ಯರ ಬಳಿ ಕರೆದೊಯ್ದು ಗಂಟೆಗಟ್ಟಲೆ ಕಾದು ಆರೋಗ್ಯ ತಪಾಸಣೆ ಮಾಡಿಸುತ್ತಿದ್ದರು. ಇದೀಗ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ಕೋವಿಡ್‌-19 ಟೆಸ್ಟ್‌ ಮಾಡಿಸುವುದು ಕಡ್ಡಾಯವಾಗಿರುವ ಕಾರಣ ಉಳಿದೆಲ್ಲ ಕೆಲಸಗಳನ್ನು ಬದಿಗೊತ್ತಿ ಆಯಾ ಠಾಣೆಯ ಅಧಿಕಾರಿಯೇ ಮುಂದೆ ನಿಂತು ಕೋವಿಡ್‌ -19 ಟೆಸ್ಟ್‌ ಮಾಡಿಸುವ ಪ್ರಸಂಗ ಎದುರಾಗಿದೆ.

ಈ ಮೊದಲು ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಯನ್ನು ಕಾರಾಗೃಹಕ್ಕೆ ಬಿಟ್ಟನಂತರ ಆ ಆರೋಪಿಯನ್ನು ಪ್ರತ್ಯೇಕ ಕೋಣೆಯಲ್ಲಿಸಿ ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಆದರೆ ಇದೀಗ ಕೋವಿಡ್‌-19 ಟೆಸ್ಟ್‌ ಆದ ನಂತರವೇ ಕಾರಾಗೃಹದೊಳಗೆ ಬಿಟ್ಟುಕೊಳ್ಳಲಾಗುತ್ತಿದೆ. ಹಾಗಾಗಿ ನ್ಯಾಯಾಂಗ ಬಂಧನಕ್ಕೊಳಗಾಗುವಂತಹ ಗಂಭೀರ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾಗುವ ಆರೋಪಿಗಳನ್ನು ಕಾರಾಗೃಹ ಸಿಬ್ಬಂದಿ ಹಾಗೂ ನ್ಯಾಯಾಧೀಶರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಕೋವಿಡ್‌-19 ಟೆಸ್ಟ್‌ ಮಾಡಿಸುವ ಅನಿವಾರ್ಯತೆಯನ್ನು ಪೊಲೀಸರು ಎದುರಿಸುತ್ತಿದ್ದಾರೆ.

ಒಟ್ಟಿನಲ್ಲಿ ಹಲವು ರೀತಿಯ ಮುಂಜಾಗ್ರತಾ ಕ್ರಮ ಹಾಗೂ ಎಚ್ಚರಿಕೆಯ ಹೊರತಾಗಿಯೂ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗುವ ಆರೋಪಿಗಳಿಗೆ ಕೋವಿಡ್‌ -19 ಟೆಸ್ಟ್‌ ಸ್ವಾಗತಾರ್ಹ ಕ್ರಮವಾದರೂ ಈಗಿರುವ ಬಿಡುವಿಲ್ಲದ ಕೆಲಸದ ನಡುವೆ ಪೊಲೀಸರಿಗೆ ಮತ್ತೊಂದು ಕೆಲಸ ಸೇರ್ಪಡೆಗೊಂಡಂತಾಗಿದೆ.

ಕಾರಾಗೃಹ ಹಾಗೂ ಪೊಲೀಸ್‌ ಸಿಬ್ಬಂದಿಯ ಆರೋಗ್ಯ ದೃಷ್ಟಿಯಿಂದ ನ್ಯಾಯಾಂಗ ಬಂಧನಕ್ಕೊಳಪಡುವಂತಹ ಆರೋಪಿಗಳಿಗೆ ಕೋವಿಡ್‌ -19 ಟೆಸ್ಟ್‌ ಮಾಡಿಸಲು ನ್ಯಾಯಾಲಯ ಸೂಚಿಸಿದೆ. ಶಿವಮೊಗ್ಗದಿಂದ ಅರಂಭವಾದ ಈ ಪದ್ಧತಿಯನ್ನು ರಾಜ್ಯದ ಇತರೆ ಜಿಲ್ಲೆಗಳಲ್ಲೂ ಅನುಸರಿಸಲಾಗುತ್ತಿದೆ. ಇದರಿಂದ ಒಬ್ಬ ವ್ಯಕ್ತಿಯಿಂದಾಗಿ ಅನೇಕರು ತೊಂದರೆಗೊಳಗಾಗುವುದು ತಪ್ಪಿದಂತಾಗುತ್ತದೆ. ಕೊರೋನಾ ಪಾಸಿಟಿವ್‌ ಇದ್ದ ವ್ಯಕ್ತಿಯನ್ನು ಆಸ್ಪತ್ರೆಯ ಕಾರಾಗೃಹ ವಾರ್ಡಿನಲ್ಲಿಯೇ ಕ್ವಾರಂಟೈನ್‌ ಮಾಡಲಾಗುತ್ತದೆ. -ಡಾ.ಪಿ.ರಂಗನಾಥ್‌, ಅಧೀಕ್ಷಕರು, ಕೇಂದ್ರ ಕಾರಾಗೃಹ, ಶಿವಮೊಗ್ಗ
 

Follow Us:
Download App:
  • android
  • ios