ಲಾಕ್‌ಡೌನ್‌ ಸಡಿಲಿಕೆ ಇರುವುದು ಸಾಮಾಜಿಕ ಅಂತರ ಕಾಯ್ದುಕೊಂಡು ಜೀವನಾವಶ್ಯಕ ಚಟುವಟಿಕೆಗಳಿಗೆ ಅನುವಾಗಲಿ ಎಂಬುದನ್ನೇ ಮರೆತು ಕ್ಷಿಪ್ರ ಪ್ರಸರಣವಾಗುವ ಕೊರೋನಾ ಸ್ವಾಗತಿಸುವಂತೆ ಬಿಂದಾಸ್‌ ಆಗಿ ಹೊನ್ನಾವರ ಪಟ್ಟಣದಲ್ಲಿ ತಿರುಗುವ ಜನರನ್ನು ಎಚ್ಚರಿಸುವಲ್ಲಿ ಹೊನ್ನಾವರ ಪೊಲೀಸರು ಹೈರಾಣಾಗುವಂತಾಗಿದ್ದಾರೆ. 

ಹೊನ್ನಾವರ(ಮೇ 12): ಲಾಕ್‌ಡೌನ್‌ ಸಡಿಲಿಕೆ ಇರುವುದು ಸಾಮಾಜಿಕ ಅಂತರ ಕಾಯ್ದುಕೊಂಡು ಜೀವನಾವಶ್ಯಕ ಚಟುವಟಿಕೆಗಳಿಗೆ ಅನುವಾಗಲಿ ಎಂಬುದನ್ನೇ ಮರೆತು ಕ್ಷಿಪ್ರ ಪ್ರಸರಣವಾಗುವ ಕೊರೋನಾ ಸ್ವಾಗತಿಸುವಂತೆ ಬಿಂದಾಸ್‌ ಆಗಿ ಹೊನ್ನಾವರ ಪಟ್ಟಣದಲ್ಲಿ ತಿರುಗುವ ಜನರನ್ನು ಎಚ್ಚರಿಸುವಲ್ಲಿ ಹೊನ್ನಾವರ ಪೊಲೀಸರು ಹೈರಾಣಾಗುವಂತಾಗಿದ್ದಾರೆ.

ಮೊದಲ ಎರಡು ಹಂತದ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿಯೇ ಆತಂಕಿತರಾಗಿ ಕುಳಿತಿದ್ದ ಮಂದಿ ಮೂರನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಅಂಜಿಕೆಯಿಲ್ಲ ಎಂಬಂತೆ ತಮ್ಮ ಬಿಂದಾಸ್‌ ವರ್ತನೆಯಿಂದ ಕಳವಳ ಹುಟ್ಟುವಂತೆ ಮಾಡಿದ್ದಾರೆ.

ಗಲ್ಫ್‌ನಲ್ಲಿದ್ದ ಭಾರತೀಯರು ಇಂದು ಮಂಗಳೂರಿಗೆ ಏರ್‌ಲಿಫ್ಟ್..!

ನೆರೆಯ ತಾಲೂಕು ಭಟ್ಕಳದಲ್ಲಿ ಕೊರೋನಾ ಪ್ರಕರಣಗಳು ನಿರೀಕ್ಷೆಗೂ ಮೀರಿ ಏರಿಕೆ ಆಗುತ್ತಿದ್ದು, ಸಾಕಷ್ಟುಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ, ಕೊರೋನಾ ನಿಯಂತ್ರಣಕ್ಕೆ ತರುವಲ್ಲಿ ಯಶಸ್ಸು ಸಿಗುತ್ತಿಲ್ಲ ಎನ್ನುವುದು ಜಿಲ್ಲಾಡಳಿತದ ತಲೆನೋವಿಗೆ ಕಾರಣವಾಗಿದೆ.

ಈ ನಡುವೆ ಲಾಕ್‌ಡೌನ್‌ನಿಂದ ಕಷ್ಟಪಡುತ್ತಿದ್ದ ಜನರಿಗೆ ಒಂದಷ್ಟುರಿಯಾಯಿತಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ಕ್ರಮಗಳೊಂದಿಗೆ ದೈನಂದಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಜನ, ಕಂಡಕಂಡಲ್ಲಿ ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಅಂಗಡಿ ಮುಂಗಟ್ಟುಗಳ ಎದುರು ಹಾಕಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಾಲಂಗಳು ಖಾಲಿ ಬಿದ್ದಿದ್ದು ಅಂಗಡಿಯ ಮುಂದೆ ಜನರು ಸಾಮಗ್ರಿಗೆ ಮುಗಿ ಬೀಳುತ್ತಿದ್ದಾರೆ.

ಮಡಿಕೇರಿಯಲ್ಲಿ 5690 ಮಂದಿಗೆ ಕ್ವಾರೆಂಟೈನ್

ಪಟ್ಟಣದ ಬಜಾರ್‌ ರಸ್ತೆ, ರಥಬೀದಿ, ಮಸ್ಜಿದ್‌ ರೋಡ್‌, ಬಂದರ್‌ ರಸ್ತೆ ಹೀಗೆ ಎಲ್ಲಾ ಕಡೆ ಜನಜಂಗುಳಿ ಕಂಡುಬರುತ್ತಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೋನಾ ಸೋಂಕಿತರು ಹೆಚ್ಚುತ್ತಿದ್ದರೂ ಯಾರಿಗೂ ಕೊರೋನಾ ಭಯವೇ ಇಲ್ಲವೇನೋ ಎನ್ನುವಂತೆ ವರ್ತಿಸುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ಪೊಲೀಸರು ಹಾಗೂ ಹೋಮ್‌ ಗಾರ್ಡ್ಸ್ಗಳು ಜನರಿಗೆ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸುತ್ತಿದ್ದರೂ ಅದನ್ನು ಕೇಳಿಸಿಕೊಳ್ಳುವವರು ಯಾರೂ ಇಲ್ಲದಂತಾಗಿದೆ.

ಪೊಲೀಸ್‌ ಜೀಪ್‌ ಸೈರನ್‌ ಮೊಳಗಿಸುತ್ತಾ ಗಲ್ಲಿ ಗಲ್ಲಿಯಲ್ಲಿ ನುಗ್ಗಿ ಬರುವಾಗ ಬದಿಗೆ ಸಾರಿ ಒಂದಿಷ್ಟುಅಂತರ ಕಾಯ್ದುಕೊಳ್ಳುವ ಜನರು ಜೀಪ್‌ ಮುಂದೆ ಹೋದ ನಂತರ ಮೊದಲಿನ ಯಥಾಸ್ಥಿತಿಗೆ ಮರಳುತ್ತಾರೆ. ಪೊಲೀಸರ ಕಣ್ತಪ್ಪಿಸಿಕೊಳ್ಳುವುದಕ್ಕೆ ಮಾತ್ರ ಜನರು ಸುರಕ್ಷತಾ ನಿಯಮಗಳನ್ನು ಪಾಲಿಸುತ್ತಿರುವಂತೆ ವರ್ತಿಸುತ್ತಿದ್ದಾರೆಯೇ ಹೊರತು ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ತಮ್ಮ ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ಇದ್ದಂತೆ ಕಾಣಿಸುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.