Asianet Suvarna News Asianet Suvarna News

ಹೆಚ್ಚುತ್ತಲೇ ಇದೆ ವಲಸೆ ಕಾರ್ಮಿಕರ ಗುಳೆ! ದೂರವಾಗದ ಆತಂಕ

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಹಾವಳಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ ವ್ಯಾಪಕವಾಗಿ ಗುಳೆ ಹೋಗುವವರೂ ಹೆಚ್ಚಾಗಿದ್ದಾರೆ. ತಂಡೋಪ ತಮಡವಾಗಿ ಗುಳೆ ಮುಂದವರಿಸಿದ್ದಾರೆ. 

Covid 19 Out Of State Migration Continue in Bengaluru  snr
Author
Bengaluru, First Published May 4, 2021, 7:11 AM IST

ಬೆಂಗಳೂರು (ಮೇ.04):  ನಗರದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಬೆಚ್ಚಿರುವ ಹೊರರಾಜ್ಯದ ಕಾರ್ಮಿಕರ ಗುಳೆ ಮತ್ತಷ್ಟು ಹೆಚ್ಚಳವಾಗಿದೆ.

ಕಳೆದ ಮೂರು ವಾರಗಳಿಂದ ನಗರದಲ್ಲಿ ಹೊರರಾಜ್ಯದ ಕಾರ್ಮಿಕರ ವಲಸೆ ದೊಡ್ಡ ಪ್ರಮಾಣದಲ್ಲಿ ಆರಂಭವಾಗಿದ್ದು, ಈಗಲೂ ಮುಂದುವರಿದಿದೆ. ಪ್ರಾರಂಭದಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಳದ ಜೊತೆಗೆ ಲಾಕ್‌ಡೌನ್‌ ಭೀತಿಯಲ್ಲಿ ಕಾರ್ಮಿಕರು ಸಹಸ್ರಾರು ಸಂಖ್ಯೆಯಲ್ಲಿ ನಗರ ತೊರೆದಿದ್ದರು. ಇದೀಗ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕಾರ್ಮಿಕರಲ್ಲಿ ಆತಂಕ ಇಮ್ಮಡಿಯಾಗಿದೆ. ಮತ್ತೊಂದೆಡೆ ಜನತಾ ಕರ್ಫ್ಯೂವಿನಿಂದ ಕೆಲಸ,ಕಾರ್ಯಗಳು ಸ್ಥಗಿತವಾಗಿವೆ. ಹೀಗಾಗಿ ಸೋಂಕಿನ ಭಯ ಹಾಗೂ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ಕಾರ್ಮಿಕರು ಮನೆ ಖಾಲಿ ಮಾಡಿಕೊಂಡು ತವರು ರಾಜ್ಯಗಳ ಹಾದಿ ಹಿಡಿದಿದ್ದಾರೆ.

ಕೊರೋನಾ ಸಂಕಷ್ಟದಿಂದ ತುರ್ತು ಕ್ಯಾಬಿನೆಟ್ ಸಭೆ ಕರೆದ ಮುಖ್ಯಮಂತ್ರಿ; ಮಹತ್ವದ

ನಗರದ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಸೋಮವಾರವೂ ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್‌, ಒಡಿಸ್ಸಾ, ಮಣಿಪುರ ಸೇರಿದಂತೆ ಹಲವು ರಾಜ್ಯಗಳ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿದ್ದರು. ದೊಡ್ಡ ಚೀಲಗಳಲ್ಲಿ ಸರಕು-ಸರಂಜಾಮು ತುಂಬಿಕೊಂಡು ಬೆಳ್ಳಂಬೆಳಗ್ಗೆ ರೈಲು ನಿಲ್ದಾಣಕ್ಕೆ ದೌಡಾಯಿಸಿದ್ದ ಕಾರ್ಮಿಕರು, ರೈಲಿಗಾಗಿ ಕಾದು ಕುಳಿತಿದ್ದರು.

ಫುಟ್‌ಪಾತ್‌ನಲ್ಲೇ ಠಿಕಾಣಿ:

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಎದುರಿನ ರಸ್ತೆಯ ಉದ್ದದ ಪಾದಚಾರಿ ಮಾರ್ಗ ಹಾಗೂ ಅಂಗಡಿ ಮುಂಗಟ್ಟುಗಳ ಎದುರು ಕಾರ್ಮಿಕರು ಗುಂಪು ಗುಂಪಾಗಿ ಕುಳಿತ್ತಿದ್ದರು. ಮಧ್ಯಾಹ್ನ ಹಾಗೂ ರಾತ್ರಿ ಹೊರಡಲಿರುವ ರೈಲುಗಳಲ್ಲಿ ತೆರಳಲು ಮುಂಚಿತವಾಗಿ ಬೆಳಗ್ಗೆಯೇ ರೈಲು ನಿಲ್ದಾಣಕ್ಕೆ ಬಂದಿದ್ದರು. ಆಟೋ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳು ಹಾಗೂ ಟೆಂಪೋ ಟ್ರಾವೆಲರ್‌ಗಳು ಸೇರಿದಂತೆ ಸಿಕ್ಕ ಸಿಕ್ಕ ವಾಹನ ಹಿಡಿದು ರೈಲು ನಿಲ್ದಾಣದತ್ತ ಧಾವಿಸಿದ್ದರು. ಯಶವಂತಪುರ ರೈಲು ನಿಲ್ದಾಣದ ಬಳಿಯೂ ಇದೇ ಮಾದರಿಯ ದೃಶ್ಯಗಳು ಕಂಡು ಬಂದಿತು.

ರಾಜ್ಯ ಸರ್ಕಾರ ಜನತಾ ಕಫä್ರ್ಯ ಜಾರಿಗೊಳಿಸಿರುವುದರಿಂದೆ ಕೆಲಸ-ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಕೆಲಸ ಇಲ್ಲದೇ ಜೀವನ ನಿರ್ವಹಣೆ ಕಷ್ಟ.ಹೀಗಾಗಿ ಕೊರೋನಾ ಪರಿಸ್ಥಿತಿ ತಿಳಿಯಾಗುವವರೆಗೂ ನಮ್ಮ ಊರುಗಳಲ್ಲೇ ಇದ್ದು, ಬಳಿಕ ನಗರಕ್ಕೆ ವಾಪಸಾಗುತ್ತೇವೆ ಎಂದು ಬಿಹಾರ ಮೂಲದ ಹೋಟೆಲ್‌ ಕಾರ್ಮಿಕರ ಗುಂಪೊಂದು ಹೇಳಿತು.

ಹಣಕ್ಕಿಂತ ಜೀವ ಮುಖ್ಯ

ಕೆಲಸ ಇಲ್ಲ ಅನ್ನೋದು ಸತ್ಯ. ಆದರೆ, ಕೆಲ ದಿನಗಳಿಂದ ನಗರದಲ್ಲಿ ಕೊರೋನಾ ಹಾವಳಿ ಜೋರಾಗಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ಸಮಸ್ಯೆಯಾಗಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಹಲವರು ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಈ ಘಟನೆಗಳಿಂದ ನಮಗೂ ಕೊರೋನಾ ಬಗೆಗಿನ ಆತಂಕ ಹೆಚ್ಚಾಗಿದೆ. ಈಗ ಹಣಕ್ಕಿಂತ ಜೀವ ಉಳಿಸಿಕೊಳ್ಳೋದು ಮುಖ್ಯವಾಗಿದೆ. ಇಲ್ಲಿ ನಮಗೇನಾದರೂ ಹೆಚ್ಚುಕಮ್ಮಿಯಾದರೂ ನೋಡುವವರು ಯಾರು ಇಲ್ಲ. ಹೀಗಾಗಿ ಊರುಗಳಿಗೆ ಹೋಗುತ್ತಿದ್ದೇವೆ. ಸೋಂಕು ಕಡಿಮೆಯಾದ ಬಳಿಕ ಮತ್ತೆ ನಗರಕ್ಕೆ ಬರುತ್ತೇವೆ ಎಂದು ಒಡಿಸ್ಸಾ ಮೂಲದ ಕಟ್ಟಡ ನಿರ್ಮಾಣ ಕಾರ್ಮಿಕರು ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios