Asianet Suvarna News Asianet Suvarna News

'ಬೇರೆ ದೇಶಗಳನ್ನು ಗಮನಿಸಿ ಇಲ್ಲಿ ಶಾಲೆ ಆರಂಭಿಸಿ'

ದೇಶದಲ್ಲಿ ಕೊರೋನಾ ಹಾವಳಿ ಇದ್ದು, ಶಿಕ್ಷಣ ವ್ಯವಸ್ಥೆ ಬುಡಮೇಲಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳನ್ನು ಪುನರಾರಂಭಿಸುವ ಮುನ್ನ ಕಾದು ನೋಡಿ ನಿರ್ಧಾರ ಕೈಗೊಳ್ಳಬೇಕು ಎಂದು ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ ಸಲಹೆ ನೀಡಿದ್ದಾರೆ.

COVID 19 Kannada Prabha Editor Ravi Hegde Speaks About School Open
Author
Bengaluru, First Published Sep 7, 2020, 10:59 AM IST

 ಬೆಂಗಳೂರು(ಸೆ.07):  ಕೊರೋನಾ ಸಂಕಷ್ಟದ ನಡುವೆಯೇ ಶಾಲೆ ಆರಂಭಿಸಿರುವ ಬ್ರಿಟನ್‌ ಸೇರಿದಂತೆ ವಿವಿಧ ದೇಶಗಳಲ್ಲಿ ಸೋಂಕು ಹಬ್ಬುವಿಕೆ ಏನಾಗಲಿದೆ ಎಂಬುದನ್ನು ಕಾದು ನೋಡಿ ಅನಂತರ ನಮ್ಮ ದೇಶದಲ್ಲಿ ಶಾಲೆ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳುವುದು ಉತ್ತಮ ಎಂದು‘ಕನ್ನಡಪ್ರಭ’ ಪ್ರಧಾನ ಸಂಪಾದಕ ರವಿ ಹೆಗಡೆ ಸಲಹೆ ನೀಡಿದ್ದಾರೆ.

ಈಗಾಗಲೇ ಲಂಡನ್‌, ಬ್ರೆಜಿಲ್‌, ಇಟಲಿ ಸೇರಿದಂತೆ ಬೇರೆ ರಾಷ್ಟ್ರಗಳು ಶಾಲಾ-ಕಾಲೇಜುಗಳನ್ನು ಆರಂಭಿಸಿವೆ. ಇದರಿಂದ ಕೋವಿಡ್‌ ಹೆಚ್ಚಾಗಬಹುದಾ? ಮಕ್ಕಳ ಮೇಲೆ ಏನಾದರೂ ಪರಿಣಾಮಗಳಾಗಬಹುದಾ ಎಂಬುದು ಮುಂದಿನ ಒಂದೆರಡು ತಿಂಗಳಲ್ಲಿ ಗೋಚರವಾಗಲಿದೆ. ಇದರಿಂದ ಭಾರತಕ್ಕೆ ಕಾಯ್ದುನೋಡುವ ಅವಕಾಶ ಸಿಕ್ಕಿದೆ. ಶಿಕ್ಷಣದಿಂದ ಉತ್ತಮ ಜೀವನ, ವಿದ್ಯೆ, ವೃತ್ತಿ ಸಿಗುತ್ತದೆ ನಿಜ. ಆದರ ಜೊತೆಗೆ ಜೀವವೂ ಮುಖ್ಯ. ಒಂದೆರಡು ತಿಂಗಳು ಕಾಯ್ದುನೋಡಿ ನಂತರ ಶಾಲಾ, ಕಾಲೇಜು ಆರಂಭಿಸುವ ನಿರ್ಧಾರ ತೆಗೆದುಕೊಳ್ಳುವುದರಿಂದ ಯಾವ ನಷ್ಟವೂ ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಶಾಲಾ-ಕಾಲೇಜುಗಳ ತೆರಿಗೆ ಮನ್ನಾಕ್ಕೆ ಒತ್ತಾಯ: ವಿದ್ಯಾರ್ಥಿಗಳ ಶುಲ್ಕ ಕಡಿಮೆಯಾಗುತ್ತಾ..?

ಲಂಡನ್‌ ಕನ್ನಡಿಗರ ತಂಡವು ತನ್ನ ‘ಕನ್ನಡಿಗರು ಯುಕೆ’ ಫೇಸ್ಬುಕ್‌ ಗ್ರೂಪ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ಪತ್ರಕರ್ತರ ದೃಷ್ಟಿಯಲ್ಲಿ ಯುಕೆ-ಭಾರತದಲ್ಲಿ ಕೋವಿಡ್‌ ನಿಯಂತ್ರಣ ಹಾಗೂ ಪರಿಣಾಮ’ ಎಂಬ ಆನ್‌ಲೈನ್‌ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಶಾಲೆ ಆರಂಭಿಸಲು ಒತ್ತಡ ಬಂದರೂ ಪೋಷಕರ ವಿರೋಧದಿಂದ ಸರ್ಕಾರ ಶಾಲೆ ಆರಂಭಿಸುವ ನಿರ್ಧಾರ ಕೈಗೊಂಡಿಲ್ಲ. ಆದರೆ, ಅಡ್ಮಿಶನ್‌ ಆರಂಭಿಸಲು ಸರ್ಕಾರ ಶಾಲೆಗಳಿಗೆ ಸೂಚನೆ ನೀಡುವ ಮೂಲಕ ಕರ್ನಾಟಕದಲ್ಲಿ ಶಾಲೆ ಆರಂಭಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಇದರ ನಡುವೆ ಮಕ್ಕಳ ನಿರಂತರ ಕಲಿಕೆಗೆ ಈಗಾಗಲೇ ಕೆಲ ದಿನಗಳಿಂದ ವರ್ಚುವಲ್‌ ತರಗತಿಗಳು, ಸಾಮಾಜಿಕ ಅಂತರದ ಮೂಲಕ ವಿದ್ಯಾಗಮ, ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ಅಕ್ಟೋಬರ್‌ ವೇಳೆಗೆ ಹಂತ ಹಂತವಾಗಿ ಕಾಲೇಜು, ಹೈಸ್ಕೂಲ್‌, ನಂತರ ಶಾಲೆಗಳಲ್ಲಿ ಸಾಮಾನ್ಯ ತರಗತಿ ಬೋಧನೆ ಆರಂಭಿಸುವ ನಿರೀಕ್ಷೆ ಇದೆ ಎಂದರು.

ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್

ಕೋವಿಡ್‌ ವಿಚಾರವಾಗಿ ಭಾರತದಲ್ಲಿ ಕಳೆದ ಎರಡು ವಾರಗಳ ಮುಂಚೆ ಇದ್ದ ಆತಂಕ, ಭಯ ಈಗಿಲ್ಲ. ಮಾರುಕಟ್ಟೆ, ಶಾಪಿಂಗ್‌ ಮಾಲ್‌, ದೇವಸ್ಥಾನ ಸೇರಿದಂತೆ ಎಲ್ಲೆಡೆ ಜನದಟ್ಟಣೆ ಹೆಚ್ಚಾಗುತ್ತಿದೆ. ಕೋವಿಡ್‌ ಮುಂದಿನ ಡಿಸೆಂಬರ್‌, ಮಾಚ್‌ರ್‍, ಜೂನ್‌ ಹೀಗೆ ಹಂತ ಹಂತವಾಗಿ ನಿಯಂತ್ರಣಕ್ಕೆ ಬರಬಹುದು ಎನ್ನಲಾಗಿದೆ. ಆದರೆ, ಜನರು ಕೋವಿಡ್‌ ನಿಯಂತ್ರಣ ಕ್ರಮಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಕೋವಿಡ್‌ ಅನಿಯಂತ್ರಿತವಾಗಿ ಹಬ್ಬಿ ಪರಿಸ್ಥಿತಿ ಬಿಗಡಾಯಿಸಿದರೆ ಸೋಂಕಿತರ ಸಂಖ್ಯೆ ಜನವರಿ ವೇಳೆಗೆ 3.20 ಕೋಟಿ ದಾಟಿ 3.7 ಲಕ್ಷ ಜನ ಸಾವನ್ನಪ್ಪಬಹುದು ಎಂದು ಐಐಎಸ್ಸಿ ಎಚ್ಚರಿಸಿದೆ ಎಂದು ತಿಳಿಸಿದರು.

ಬ್ರಿಟನ್‌ನಲ್ಲಿ ಬೇರೆ ರೀತಿಯ ಕ್ರಮ:

ಟೈಮ್ಸ್‌ ಆಫ್‌ ಇಂಡಿಯಾ ಲಂಡನ್‌ ಪತ್ರಕರ್ತೆ ನವೋಮಿ ಕಾಂಟನ್‌ ಮಾತನಾಡಿ, ಕೋವಿಡ್‌ ನಿಯಂತ್ರಣಕ್ಕೆ ಭಾರತ ಮತ್ತು ಬ್ರಿಟನ್‌(ಯುಕೆ) ಕೈಗೊಂಡ ಕ್ರಮಗಳು ವಿಭಿನ್ನವಾಗಿವೆ. ಬ್ರಿಟನ್‌ನಲ್ಲಿ ಮಾಚ್‌ರ್‍ನಲ್ಲಿ ಲಾಕ್‌ಡೌನ್‌ ಮಾಡಿದರೂ ಮಾಸ್ಕ್‌ ಕಡ್ಡಾಯವಿರಲಿಲ್ಲ. ಜೂನ್‌ ಜುಲೈನಲ್ಲೇ ಹಂತ ಹಂತವಾಗಿ ಅಂಗಡಿ ಮುಂಗಟ್ಟು, ಚಿತ್ರಮಂದಿರ, ಮಾರುಕಟ್ಟೆ, ಧಾರ್ಮಿಕ ಕೇಂದ್ರಗಳು ಎಲ್ಲವೂ ಆರಂಭಗೊಂಡವು. ಶಾಲೆಗಳಲ್ಲಿ ತರಗತಿ ಆರಂಭಿಸಿದರೂ ಸಾಕಷ್ಟುಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದರು. ಹಾಗಾಗಿ ಸೆಪ್ಟೆಂಬರ್‌ನಿಂದ ಎಲ್ಲ ವಯಸ್ಸಿನ ಮಕ್ಕಳಿಗೂ ಶಾಲಾ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಆದರೆ, ಕಡ್ಡಾಯ ಮಾಸ್ಕ್‌ ಧರಿಸುವ ನಿಯಮವೇನಿಲ್ಲ. ಲಾಕ್‌ಡೌನ್‌ ಪ್ರದೇಶಗಳನ್ನು ಬಿಟ್ಟು ಉಳಿದೆಡೆ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್‌ ನಿಯಂತ್ರಣ ಕ್ರಮಗಳು ಜಾರಿಯಲ್ಲಿಲ್ಲ ಎಂದು ಮಾಹಿತಿ ನೀಡಿದರು.

‘ಸೌತ್‌ ನೆಟ್‌ವರ್ಕ್ 18’ನ ಸಮೂಹ ಸಂಪಾದಕೀಯ ಸಲಹೆಗಾರ ಡಿ.ಪಿ.ಸತೀಶ್‌ ಮಾತನಾಡಿ, ಭಾರತದಲ್ಲಿ ಶಾಲೆಗಳನ್ನು ಆರಂಭಿಸದೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ರಾಜಕೀಯವಾಗಿ ಸರಿಯಾಗಿದೆ. ಶಾಲೆ ಆರಂಭಸಲು ನಿರ್ಧರಿಸಿದರೆ ಜನರ ದೃಷ್ಟಿಯಲ್ಲಿ ಖಳನಾಯಕರಾಗುತ್ತಾರೆ. ಆದರೆ, ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಪರಿಣಾಮವಂತೂ ಆಗಿದೆ ಎಂದರು.

Follow Us:
Download App:
  • android
  • ios