ಶಾಲಾ-ಕಾಲೇಜುಗಳ ತೆರಿಗೆ ಮನ್ನಾಕ್ಕೆ ಒತ್ತಾಯ: ವಿದ್ಯಾರ್ಥಿಗಳ ಶುಲ್ಕ ಕಡಿಮೆಯಾಗುತ್ತಾ..?
ಕೊರೋನಾ ಸಂಕಷ್ಟದಿಂದ ಖಾಸಗಿ ಶಾಲಾ-ಕಾಲೇಜು ಸೇರಿದಂತೆ ಇಡೀ ಶಿಕ್ಷಣ ಕ್ಷೇತ್ರವೇ ನೆಲಕಚ್ಚಿದೆ. ಇದರಿಂದ ಲಾ ಕಾಲೇಜುಗಳ ತೆರಿಗೆಯನ್ನು ಮನ್ನಾ ಮಾಡಬೇಕು ಎನ್ನುವ ಮಾತುಗಳು ಕೇಳಿಬಂದಿವೆ.
ಬೆಂಗಳೂರು, (ಸೆ.6): ಶಾಲಾ ಕಾಲೇಜುಗಳ ತೆರಿಗೆಯನ್ನು ಮನ್ನಾ ಮಾಡಬೇಕು ಆ ಮೂಲಕ ವಿದ್ಯಾರ್ಥಿ ಗಳ ಪೋಷಕರಿಂದ ವಸೂಲಿ ಮಾಡುವ ಶುಲ್ಕವನ್ನು ಕಡಿಮೆ ಮಾಡಲು ಸೂಚಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ಇಂದು (ಭಾನುವಾರ) ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಶೇಖರ್, ಜಿ.ಕೃಷ್ಣಪ್ಪ ಅವರು, ರಾಜ್ಯ ದಲ್ಲಿ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದಿದೆ. ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಕಿಡಿಕಾರಿದರು.
ಶಾಲಾ-ಕಾಲೇಜು ಪ್ರಾರಂಭ ಯಾವಾಗ? ಸ್ಪಷ್ಟನೆ ಕೊಟ್ಟ ಸಚಿವ ಸುರೇಶ್ ಕುಮಾರ್
ಮಧ್ಯಾಹ್ನದ ಬಿಸಿಯೂಟವನ್ನು ವಿದ್ಯಾರ್ಥಿಗಳ ಮನೆಗೆ ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಬೇಕು. ಸಮೀಕ್ಷೆ ನಡೆಸಿ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರಬೇಕು. ಶಿಕ್ಷಣ ಕ್ಷೇತ್ರದಲ್ಲಿ ಪ್ರತ್ಯೇಕ್ಷ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿ ಇರುವವರಿಗೆ ಪರಿಹಾರ ನೀಡಲು ಪ್ಯಾಕೇಜ್ ಘೋಷಣೆ ಮಾಡಬೇಕು. ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.
ಕೊರೋನಾ ಸಂಕಷ್ಟ ಕಾಲದಲ್ಲಿ ಆಸ್ತಿ ತೆರಿಗೆ ವಸೂಲಿಯನ್ನು ಕೈ ಬಿಡಬೇಕು. ವಾರ್ಡ್ ವಿಂಗಡನೆ ನೆಪದಲ್ಲಿ ಬಿಬಿಎಂಪಿ ಚುನಾವಣೆಯನ್ನು ಮುಂದೂಡಬಾರದು ಎಂದು ಆಗ್ರಹಿಸಿದರು.