ಹಾಸನ(ಜು.19): ಮನೆ ಮುಂದೆ ಕಾಲುವೆ ತೆಗೆದ ವಿಚಾರ ಕೇಳಲು ಹೋದ ವ್ಯಕ್ತಿಗೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಅರಸೀಕೆರೆ ಜೆಎಂಎಫ್‌ಸಿ ನ್ಯಾಯಾಲಯವು ಮೂವರಿಗೆ 2 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅರಸೀಕೆರೆ ತಾಲೂಕು ಗಂಡಸಿ ಹೋಬಳಿಯ ಬಾಗೇಶಪುರ ಗ್ರಾಮದ ವಾಸಿಗಳಾದ ಗುರು, ಕುಮಾರ, ರಂಗಸ್ವಾಮಿ ಎಂಬವವರು ಶಿಕ್ಷೆಗೆ ಒಳಗಾಗಿದ್ದಾರೆ.

ಈ ಮೂವರು ಆರೋಪಿಗಳು 2016ರ ಜ.17 ರಂದು ಮಧ್ಯಾಹ್ನ 3 ಗಂಟೆಗೆ ಅದೇ ಗ್ರಾಮದ ನಾಗರಾಜು ಮತ್ತು ಅಶೋಕ್‌ ಎಂಬವರ ಮನೆಯ ಮುಂದೆ ಕಾಲುವೆ ಮಾಡಿದ್ದಾರೆ. ಇದನ್ನು ಕೇಳಲು ಹೋದ ನಾಗರಾಜು ಮತ್ತು ಅಶೋಕ್‌ ಅವರಿಗೆ ಅವಾಚ್ಯ ಶಬ್ಧಗಳಿಂದ ಬೈದು, ಅಡ್ಡಗಟ್ಟಿಕೈಯಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದರು.

ಶಾಸಕ ಕುಮಠಳ್ಳಿಗೆ ಕೊಲೆ ಬೆದರಿಕೆ : ವಿಡಿಯೋ ವೈರಲ್‌

ಈ ಬಗ್ಗೆ ಗಂಡಸಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು. ವಿಚಾರಣೆ ನಡೆಸಿದ ಅರಸೀಕೆರೆಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ನಿರ್ಮಲಾ ಅವರು ಮೂವರ ಮೇಲಿದ್ದ ಆರೋಪವು ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೂ 2 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಂ. ಮೃತ್ಯುಂಜಯ ವಾದಿಸಿದ್ದರು.