ಕೊಲ್ಲೂರು ದೇಗುಲದಲ್ಲಿ ಭಾರಿ ಭ್ರಷ್ಟಾಚಾರ ಆರೋಪ
ಕೊಲ್ಲೂರು ಮೂಕಾಂಬಿಕ ದೇಗುಲದಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಆರೋಪ ಮಾಡಲಾಗಿದೆ. 21.5 ಕೋಟಿ ರು. ಮೊತ್ತದ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದೆ.
ಬೆಂಗಳೂರು (ಮಾ.10): ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಆಡಳಿತ ಮಂಡಳಿಯಿಂದ 21.5 ಕೋಟಿ ರು. ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಈ ಅವ್ಯವಹಾರದ ಬಗ್ಗೆ ರಾಜ್ಯ ಸರ್ಕಾರ 15 ದಿನದೊಳಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರ ಮೋಹನ್‌ಗೌಡ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಮಾತನಾಡಿದ ಅವರು, ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿಯ ಸರ್ಕಾರಿ ಅಧಿಕಾರಿಗಳು ದೇವಸ್ಥಾನದ ಕೋಟ್ಯಂತರ ರು. ಸಂಪತ್ತನ್ನು ಲೂಟಿ ಮಾಡಿರುವುದು ಮಾಹಿತಿ ಹಕ್ಕು ಆಯೋಗದಿಂದ ಬಹಿರಂಗಗೊಂಡಿದೆ. ಹೀಗಾಗಿ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದರು ಒತ್ತಾಯಿಸಿದ್ದಾರೆ.
ದೇವಸ್ಥಾನಕ್ಕೆ ಭಕ್ತರು ನೀಡಿದ ಕಾಣಿಕೆಯಿಂದ ಹಿಡಿದು, 2004ರಿಂದ 2019ರವರೆಗೆ ದೇವಸ್ಥಾನದ ಆದಾಯ-ವೆಚ್ಚದ ಬಗ್ಗೆ ಲೆಕ್ಕವಿಲ್ಲದಿರುವುದು ಲೆಕ್ಕಪರಿಶೋಧಕರ ವರದಿಯಲ್ಲಿ ಪತ್ತೆಯಾಗಿದೆ. ಹೀಗಾಗಿ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದರು.
ಕೊಲ್ಲೂರು ದೇಗುಲದಲ್ಲಿಯೂ ಗೊಂದಲ : ಭುಗಿಲೆದ್ದ ಅಸಮಾಧಾನ
ಕೊಲ್ಲೂರು ಮೂಕಾಂಬಿಕಾ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. 2005ರಿಂದ 2018ರ ಅವಧಿಯಲ್ಲಿ ಕೋಟ್ಯಂತರ ರು.ಗಳನ್ನು ಅಧಿಕಾರಿಗಳು ಲೂಟಿ ಮಾಡಿದ್ದಾರೆ. ನಾವು ನಮ್ಮ ಸಂಘಟನೆಯ ಮೂಲಕ ಆರ್‌ಟಿಐ ಅರ್ಜಿ ಹಾಕಿ ಆಡಿಟ್ ರಿಪೋರ್ಟ್ ಪಡೆದಿದ್ದೇವೆ. ಅದರಲ್ಲಿ ಭಕ್ತರು ಕೊಡುವ ಚಿನ್ನಾಭರಣದ ಮಾಹಿತಿ ನೀಡಿಲ್ಲ. ಮೂಕಾಂಬಿಕೆ ದೇವಸ್ಥಾನದಲ್ಲಿ ದೇಣಿಗೆ ರೂಪದಲ್ಲಿ ದೊರೆತ ಬಂಗಾರ, ಬೆಳ್ಳಿ ಸೇರಿದಂತೆ ಬೆಲೆ ಬಾಳುವ ಆಭರಣಗಳ ಬಗ್ಗೆ ನಿಯಮಾನುಸಾರ ನೋಂದಣಿ ಮಾಡಿಲ್ಲ ಎಂದು ದೂರಿದರು.
2016ರಲ್ಲಿ ಕೊಲ್ಲೂರು ದೇವಸ್ಥಾನದಲ್ಲಿ ಕೋಟ್ಯಂತರ ಮೌಲ್ಯದ 4.20 ಕೆಜಿ ಚಿನ್ನ ಕಳ್ಳತನ ನಡೆದಿತ್ತು. ಅದರಲ್ಲಿ ಕಾರ್ಯ ನಿರ್ವಾಹಣಾ ಅಧಿಕಾರಿ ಮತ್ತಿತರ ಅಧಿಕಾರಿಗಳು ಭಾಗಿಯಾಗಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ದೇವಾಲಯಕ್ಕೆ ಬರುವ ಅರ್ಪಣೆಗಳು ಸೇರಿದಂತೆ ಅಧಿಕಾರಿಗಳು ಯಾವುದೇ ಸೂಕ್ತ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ ಎಂದರು.
2018-19ರಲ್ಲಿ ದೇಣಿಗೆ ರೂಪದಲ್ಲಿ ಸ್ವೀಕರಿಸಿದ ಆಭರಣ ಪಟ್ಟಿಯನ್ನು ಕ್ರಮ ಪ್ರಕಾರ ಸರ್ಕಾರಿ ಲೆಕ್ಕಪರಿಶೋಧಕರಿಗೆ ಸಲ್ಲಿಸಿಲ್ಲ. ಇತ್ತೀಚೆಗೆ ಆಡಳಿತ ಮಂಡಳಿ ಹಾಗೂ ಸರ್ಕಾರಿ ಅಧಿಕಾರಿಗಳು ನಕಲಿ ಸಿಬ್ಬಂದಿಗಳನ್ನು ತೋರಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಚಾರವೆಸಗುತ್ತಿರುವುದು ಬೆಳಕಿಗೆ ಬಂದಿದೆ. ದೇವಸ್ಥಾನದ ಸಿಬ್ಬಂದಿಗಳ ಭವಿಷ್ಯ ನಿಧಿಯನ್ನು ನೋಂದಾಯಿತ ಆಯುಕ್ತರ ಬಳಿ ಜಮೆ ಮಾಡಿಲ್ಲ. ಈ ಕಾರಣ ಸಂಬಂಧಪಟ್ಟಅಧಿಕಾರಿಗಳಿಂದ 7.46 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ. ಈ ದಂಡದ ಮೊತ್ತವನ್ನು ಅಧಿಕಾರಿಗಳ ಸಂಬಳದಿಂದ ವಸೂಲಿ ಮಾಡದೆ ಭಕ್ತರು ದೇವಸ್ಥಾನಕ್ಕೆ ನೀಡಿರುವ ದೇಣಿಗೆಯಿಂದ ವಸೂಲಿ ಮಾಡಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ ಎಂದು ಹೇಳಿದರು.
ದೇವಸ್ಥಾನದಿಂದ ನಾನಾ ಉದ್ದೇಶಕ್ಕೆ ಕೋಟ್ಯಂತರ ರು. ಮುಂಗಡವಾಗಿ ನೀಡಲಾಗಿದೆ. ಆದರೆ, ಅದರ ರಿಜಿಸ್ಟರ್ ನಿರ್ವಹಣೆಯಿಲ್ಲದ ಕಾರಣ ಕೋಟ್ಯಂತರ ರು. ವಸೂಲಿಯಾಗದೆ ಬಾಕಿ ಉಳಿದಿದೆ. ದೇವಸ್ಥಾನಕ್ಕೆ ಸೇರಿದ ಜಮೀನು, ಇತರೆ ಆಸ್ತಿಪಾಸ್ತಿಗಳ ನೋಂದಣಿ ಮಾಡಿಲ್ಲ. ಇದರಿಂದ ಜಮೀನನ್ನು ಖಾಸಗಿಯವರು ಅತಿಕ್ರಮಿಸಿಕೊಳ್ಳುತ್ತಿದ್ದಾರೆ ಎಂದರು.
ದೇವಸ್ಥಾನ ಆಡಳಿತ ಮಂಡಳಿ 2004-05ರಲ್ಲಿ ಒಂದೇ ವರ್ಷದಲ್ಲಿ 1.45 ಲಕ್ಷ ರು. ವಿದ್ಯುತ್ ಬಿಲ್ ಪಾವತಿಸಿದೆ. ಯಾವ ಕಾರಣಕ್ಕೆ ಅಷ್ಟುವಿದ್ಯುತ್ ಉಪಯೋಗಿಸಲಾಗಿದೆ ಎಂಬುದನ್ನು ನಮೂದು ಮಾಡಿಲ್ಲ. 2011-12ರಲ್ಲಿ ದೇವಸ್ಥಾನ ಆಡಳಿತ ಮಂಡಳಿ 2.35 ಲಕ್ಷ ರು. ವೆಚ್ಚದಲ್ಲಿ ವಿಶ್ರಾಂತಿ ಗೃಹಗಳಿಗೆ ಬಕೆಟ್ ಮತ್ತು ಕಸದ ಡಬ್ಬಿಗಳನ್ನು ಖರೀದಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಸರ್ಕಾರ 15 ದಿನಗಳಲ್ಲಿ ತನಿಖೆಗೆ ವಹಿಸದಿದ್ದರೆ ಹೋರಾಟ ಸಂಘಟಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲ ಕಿರಣ ಬೆಟ್ಟದಪುರ, ಸಂಘದ ಸದಸ್ಯ ವಿಜಯಶೇಖರ್, ಶರ್ಮಾ ಗುರೂಜಿ, ಶ್ರೀರಾಮ ಸೇನೆ ರಾಜ್ಯ ಕಾರ್ಯದರ್ಶಿ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.