'ತಿಂಗಳೊಳಗಾಗಿ ಕರ್ನಾಟಕವು ಕೊರೋನಾ ಮುಕ್ತ'
ರಾಜ್ಯದಲ್ಲಿ ಮಹಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು,ಆದರೆ ಶೀಘ್ರವೇ ಕೊರೋನಾವೂ ರಾಜ್ಯದಿಂದ ಸಂಪೂರ್ಣ ಅಳಿಸಿಹೋಗಲಿದೆ ಎಂದು ಹೇಳಲಾಗಿದೆ.
ಪುತ್ತೂರು (ಆ.27): ಮುಂದಿನ ಒಂದು ತಿಂಗಳೊಳಗಾಗಿ ಕರ್ನಾಟಕವು ಸಂಪೂರ್ಣ ಕೊರೋನಾ ಮುಕ್ತ ರಾಜ್ಯವಾಗಲಿದೆ ಎಂದು ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕಾ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
‘ದೇಶವನ್ನು ಗಂಭೀರವಾಗಿ ಕಾಡಿರುವ ಕೊರೋನಾವನ್ನು ತಡೆಯಲು ಬಿಜೆಪಿ ಸರ್ಕಾರವನ್ನು ಹೊರತುಪಡಿಸಿ ಇತರ ಯಾವುದೇ ಸರ್ಕಾರಗಳಿಂದ ಖಂಡಿತ ಸಾಧ್ಯವಿರಲಿಲ್ಲ.
ಸಿಎಂ ಯಡಿಯೂರಪ್ಪ ಅವರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಅವರ ಪ್ರಯತ್ನದ ಫಲವಾಗಿ ರಾಜ್ಯ ಕೊರೋನಾ ನಿಯಂತ್ರಣದಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ’ ಎಂದಿದ್ದಾರೆ.
ರಾಜ್ಯದಲ್ಲಿ ಬುಧವಾರ 8,580 ಮಂದಿಗೆ ಕೊರೋನಾ ಸೋಂಕು ದೃಢಪಟ್ಟು, 113 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈವರೆಗೆ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ ಮೂರು ಲಕ್ಷ ಗಡಿ ದಾಟಿದರೆ, ಸಾವನ್ನಪ್ಪಿದವರ ಸಂಖ್ಯೆ ಐದು ಸಾವಿರ ಗಡಿ ದಾಟಿದೆ.
ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ...
ರಾಜ್ಯದಲ್ಲಿ ಕಳೆದ ಆ.15, 19 ಮತ್ತು 25ರಂದು ಎಂಟು ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿತ್ತು. ಇದೀಗ ಬುಧವಾರ ದಾಖಲೆಯ 67,066 ಕೋವಿಡ್ ಪರೀಕ್ಷೆ ನಡೆಸಿದ ಪರಿಣಾಮ ಮತ್ತೆ ಎಂಟು ಸಾವಿರ ಗಡಿ ದಾಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,00,406ಕ್ಕೆ ಏರಿಕೆಯಾಗಿದೆ. ಇನ್ನು ಒಟ್ಟು ಸಾವಿನ ಸಂಖ್ಯೆ 5,091 (19 ಅನ್ಯ ಕಾರಣದ ಸಾವು ಹೊರತುಪಡಿಸಿ) ತಲುಪಿದೆ.
ಇದರ ನಡುವೆ 7,249 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 2.11 ಲಕ್ಷಕ್ಕೆ ಏರಿಕೆಯಾಗಿದೆ. ಉಳಿದ 83,608 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಆರೋಗ್ಯ ಸ್ಥಿತಿ ಗಂಭೀರವಾಗಿರುವ 760 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ.
ಸೆಪ್ಟಂಬರ್ ಅಂತ್ಯದೊಳಗೆ ರಾಜ್ಯದಲ್ಲಿ ಕೊರೋನಾ ಸೋಂಕಿರ ಸಂಖ್ಯೆ 6 ಲಕ್ಷಕ್ಕೆ?
"