ಕೊರೋನಾ ವಾರಿಯರ್ಸ್ ಕಾರ್ಯ ಶ್ಲಾಘನೀಯ: ಸಚಿವ ಸಿ.ಟಿ. ರವಿ
ಕೊರೋನಾ ನಿಯಂತ್ರಣಕ್ಕಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಲು ಮನೆ ಮನೆಗೆ ಭೇಟಿ ಮೂಲಕ ಕೊರೋನಾ ವಾರಿಯರ್ಸ್ ನಿರಂತರವಾಗಿ ಶ್ರಮಿಸಿದ್ದು, ಅವರ ಕಾರ್ಯ ಅಭಿನಂದನಾರ್ಹವಾದುದು ಎಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜೂ.23): ಕೊರೋನಾ ಸೋಂಕಿನ ಕುರಿತು ಜನತೆಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಆರೊಗ್ಯ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಒಳಗೊಂಡ ಸ್ವಯಂ ಸೇವಕರ ಸೇವಾ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.
ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಪಂನಲ್ಲಿ ಸೋಮವಾರ ಸ್ಥಳೀಯ ಆಡಳಿತದಿಂದ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರಿಗೆ ಆಯೋಜಿಸಿದ್ದ ಕೊರೋನಾ ವಾರಿಯರ್ಸ್ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊರೋನಾ ಸೋಂಕು ಕೂಲಿ ಕಾರ್ಮಿಕರಿಂದ ದೊಡ್ಡ ಉದ್ದಿಮೆದಾರರವರೆಗೂ ಆರ್ಥಿಕವಾಗಿ ಸಂಕಷ್ಟ ಅನುಭವಿಸುವಂತೆ ಮಾಡಿದೆ. ಆರಂಭದಲ್ಲಿ ಸೋಂಕಿನ ಬಗ್ಗೆ ಯಾವುದೇ ಭಯವಿರಲಿಲ್ಲ. ಆದರೆ, ಇಂದು ಕೊರೋನಾ ಸೋಂಕಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಕೊರೋನಾ ಸೋಂಕು ಇನ್ನು ದೇಶಮುಕ್ತವಾಗಿಲ್ಲ ಎಂಬುದನ್ನು ಅರಿತು ಜನ ಮುನ್ನೆಚ್ಚರಿಕೆ ವಹಿಸುವುದು ಒಳಿತು ಎಂದು ಹೇಳಿದರು.
ಕಳೆದ 4 ತಿಂಗಳಿನಿಂದ ಕೊರೋನಾ ನಿಯಂತ್ರಣಕ್ಕಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಲು ಮನೆ ಮನೆಗೆ ಭೇಟಿ ಮೂಲಕ ಕೊರೋನಾ ವಾರಿಯರ್ಸ್ ನಿರಂತರವಾಗಿ ಶ್ರಮಿಸಿದ್ದು, ಅವರ ಕಾರ್ಯ ಅಭಿನಂದನಾರ್ಹವಾದುದು. ನಮ್ಮ ಜಿಲ್ಲೆಯಲ್ಲಿ ಮೂರು ಹಂತಗಳ ಲಾಕ್‌ಡೌನ್ ಸಮಯದಲ್ಲೂ ಹಸಿರು ವಲಯದಲ್ಲೇ ಗುರುತಿಸಿಕೊಂಡಿತ್ತು. ಆದರೆ, ತಮಿಳುನಾಡು, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ಅಧಿಕವಾದ ಮೇಲೆ ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳು ಕಂಡು ಬಂದಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟುಸೋಂಕು ಹೆಚ್ಚಾಗಲಿದ್ದು ನಿಯಂತ್ರಣಕ್ಕೆ ಜನರ ಸಹಕಾರ ಅಗತ್ಯ ಎಂದರು.
ಕೊರೋನಾ ಸೋಂಕು ಈಗಾಗಲೇ ರಾಜ್ಯ, ಜಿಲ್ಲೆ ಸೇರಿ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ನಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಹಾಗಾಗಿ, ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಸ್ಯಾನಿಟೈಸರ್, ವೈಯಕ್ತಿಕ ಸ್ವಚ್ಛತೆಗೆ ಒಳಗೊಂಡು ಸರ್ಕಾರದ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕಾಗಿರುವುದು ಸರ್ಕಾರ ಕೊರೋನಾ ಸೋಂಕಿಗೆ ಔಷಧವನ್ನು ಕಂಡು ಹಿಡಿಯುವವರೆಗೂ ಈ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ತಿಳಿಸಿದರು.
ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮನೆ ಮದ್ದು ಕಷಾಯ ಸೇವನೆ, ಕಾಯಿಸಿದ ಬಿಸಿ ನೀರು ಹಾಗೂ ಪೌಷ್ಟಿಕ ಆಹಾರವನ್ನು ಸೇವನೆ ಮಾಡುವುದರಿಂದ ರೋಗವನ್ನು ದೂರ ಮಾಡಲು ಸಹಾಯಕವಾಗಲಿದೆ. ದೇಶದ ಪ್ರಧಾನಮಂತ್ರಿಗಳು ಮಾಚ್‌ರ್ 22ರಂದು ಜನತಾ ಕಪ್ರ್ಯೂ ಘೋಷಿಸುವ ಮೂಲಕ ಕೋವಿಡ್-19 ವಿರುದ್ಧ ಹೋರಾಡಿದ ವಾರಿಯರ್ಸ್‌ಗೆ ಮನೆಯಿಂದಲೇ ಅಭಿನಂದನೆ ತಿಳಿಸಲು ಹೇಳಿದ್ದರು. ಇಂದಿಗೆ ನಾಲ್ಕು ತಿಂಗಳು ಪೂರ್ಣಗೊಂಡಿದ್ದು, ಇದರ ಬಗ್ಗೆ ಜನ ಮತ್ತಷ್ಟುಎಚ್ಚರಿಕೆ ವಸಬೇಕಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಮೇಶ್, ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.