ಹಾಸನ (ಮಾ.11):  ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೊರೋನಾ ವೈರಸ್‌ ಪತ್ತೆ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಯೋಗಾಲಯ ಕೇಂದ್ರ ತೆರೆದಿದ್ದು, ಯಾರಾದರೂ ವಿದೇಶದಿಂದ ವಾಪಸ್‌ ಬಂದಿರುವ ಬಗ್ಗೆ ತಿಳಿದರೇ ಹೆಲ್ಪ್‌ ಲೈನ್‌ ನಂಬರ್‌ 08172-246575ಗೆ ಮಾಹಿತಿ ನೀಡುವ ಮೂಲಕ ಮುಂದಾಗುವ ಅನಾಹುತ ತಡೆಯಬಹುದು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ಫ್ರೆಂಚ್‌ ದೇಶದಿಂದ ವಾಪಸ್‌ ಆಗಿ ದಾಖಲಾಗಿದ್ದ ನಗರ ನಿವಾಸಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾವ ರೋಗದ ಲಕ್ಷಣಗಳು ಇಲ್ಲ ಎಂಬುದು ತಿಳಿದು ಬಂದಿದೆ ಎಂದರು.

ಸಾರ್ವಜನಿಕರು ವಿದೇಶಿಗರು, ವಿದೇಶದಿಂದ ವಾಪಸ್‌ ಬಂದಿರುವವರ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಹಿಮ್‌ ಅಸತೆಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಅದಕ್ಕಾಗಿಯೇ ದಿನ 24 ಗಂಟೆಯ ಸೇವೆಯಲ್ಲಿರುವ ಹೆಲ್ಪ್‌ ಲೈನ್‌ ಸಂಖ್ಯೆ 08172-246575 ಸಿದ್ಧವಾಗಿರುತ್ತದೆ ಎಂದರು.

ಹಿಮ್ಸ್‌ ಆಸ್ಪತ್ರೆಯಲ್ಲಿ ಕೊರೋನಾ ವೈರಸ್‌ ಪತ್ತೆ ಪ್ರಯೋಗಾಲಯ ತೆರೆಯಲಾಗಿದೆ. ಹೋಟೆಲ್‌, ರೆಸಾರ್ಟ್‌ ಹೋಂ ಸ್ಟೇಗಳಿಗೆ ಆಗಮಿಸುವ ವಿದೇಶಿ ಪ್ರವಾಸಿಗರ ಬಗ್ಗೆ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ಷಿಪ್ರಕಾರ್ಯಚರಣೆ ತಂಡ ರಚಿಸಲಾಗಿದ್ದು, ತಾಲೂಕು ಮಟ್ಟದಲ್ಲಿ ಆಯಾ ತಾಲೂಕು ಆರೋಗಗಳ ಹಾಗೂ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಜವಾಬ್ದಾರಿಯುತ ಅಧಿಕಾರಿಗಳಾಗಿರುತ್ತಾರೆ ಎಂದು ಸೂಚಿಸಿದರು.

ಮಂಡ್ಯಕ್ಕಿಲ್ಲ ಕೊರೋನಾ ಆತಂಕ : ಮಾಸ್ಕ್ ಧರಿಸುವ ಅಗತ್ಯವೂ ಇಲ್ಲ !..

ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ವಿ.ಆರ್‌.ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಮಲ್ಲಪ್ಪ, ಡಾ. ಹಿರಣಯ್ಯ ಇತರರು ಇದ್ದರು.

10 ಸಾವಿರ ಮಾಸ್ಕ್‌ಗಳ ದಾಸ್ತಾನು

ಜಿಲ್ಲಾದ್ಯಂತ ಆರೋಗ್ಯ ಸಂಸ್ಥೆಗಳಿಗೆ ಬೇಡಿಕೆಯ ಅನುಗುವಾಗಿ ಮಾಸ್ಕ್‌ಗಳನ್ನು ವಿತರಿಸಲಾಗಿದೆ ಹಾಗೂ ಪ್ರಸ್ತುತದಲ್ಲಿ 10 ಸಾವಿರ ಮಾಸ್ಕ್‌ಗಳ ದಾಸ್ತಾನು ಇರಿಸಲಾಗಿದೆ. ಹೆಚ್ಚುವರಿ ಬೇಡಿಕೆ ಬಂದಲ್ಲಿ ಅಗತ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ಕರಪತ್ರ, ಭಿತ್ತಿಪತ್ರ ಸೇರಿದಂತೆ ವಿವಿಧ ಆರೋಗ್ಯ ಶಿಕ್ಷಣದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಕೊರೋನಾದಿಂದ ಸುರಕ್ಷತೆ ಬಗ್ಗೆ ಸಿದ್ಧವಾಗಿರುವ ವಿಚಾರ ಕುರಿತು ವಿವರಿಸಿದರು.

22ರಿಂದ ಬೃಹತ್‌ ಜಲಾಂದೋಲನ ಕಾರ್ಯಕ್ರಮ

ನಿಮಗೆ ಈಗಾಗಲೇ ತಿಳಿದಿರುವಂತೆ ಹಸಿರುಭೂಮಿ ಪ್ರತಿಷ್ಠಾನದ ಮನವಿಯಂತೆ ಜಿಲ್ಲಾಡಳಿತ ಮತ್ತು ಜಿಪಂ ನೇತೃತ್ವದಲ್ಲಿ ಹಾಸನ ಜಿಲ್ಲಾದ್ಯಂತ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಮಾಚ್‌ರ್‍ 22ರ ವಿಶ್ವ ಜಲದಿನದಿಂದ ಏಪ್ರಿಲ್‌ 22ರ ವಿಶ್ವ ಭೂ ದಿನದವರೆಗೆ ಒಂದು ತಿಂಗಳ ಕಾಲ ಬೃಹತ್‌ ಜಲಾಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರತಿ ತಾಲೂಕಿನಲ್ಲೂ ಸಂಬಂಧಿಸಿದ ಅಧಿಕಾರಿಗಳಿಗೆ ಪಟ್ಟಿಯಲ್ಲಿ ಸೂಚಿಸಿರುವ ದಿನಾಂಕ ಮತ್ತು ಸಮಯದಂದು ಹಸಿರುಭೂಮಿ ಪ್ರತಿಷ್ಠಾನದಿಂದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಆದೇಶ ಹೊರಡಿಸಲಾಗಿದೆ. ಈ ಕಾರ್ಯ ಚಟುವಟಿಕೆಯಲ್ಲಿ ಆಸಕ್ತರಾಗಿರುವ ಸಂಘ ಸಂಸ್ಥೆ ಮತ್ತು ವ್ಯಕ್ತಿಗಳೂ ಶಿಬಿರಕ್ಕೆ ಆಗಮಿಸಿ ಪ್ರತಿ ಹಳ್ಳಿಯ ಒಂದಾದರೂ ಪಾರಂಪರಿಕ ಜಲಮೂಲವನ್ನು ಹೂಳೆತ್ತಿ ಪುನಶ್ಚೇತನಗೊಳಿಸಿಕೊಳ್ಳುವ ಈ ಜಲಾಂದೋಲನಕ್ಕೆ ಕೈಜೋಡಿಸಲು ಮನವಿ ಮಾಡಿದರು.