ಯುವ ಜನರಿಗೆ ಮಾದರಿಯಾಗಬೇಕಿದ್ದ ಮಾಜಿ ಸಂಸದೆ ನಟಿ ರಮ್ಯಾ ಜವಾಬ್ದಾರಿ ಮರೆತುಬಿಟ್ಟರೇ?
ಮಾಜಿ ಸಂಸದೆ ನಟಿ ರಮ್ಯಾ ಮತದಾನ ಮಾಡಿ ಯುವಜನರಿಗೆ ಮಾದರಿ ಆಗಬೇಕಿತ್ತು. ಆದರೆ, ಕಳೆದ 6 ವರ್ಷಗಳಿಂದ ಮತದಾನ ಮಾಡದೇ ನಿರ್ಲಕ್ಷ್ಯವಹಿಸಿದ್ದು, ಈ ಬಾರಿಯಾದರೂ ಮತ ಚಲಾಯಿಸುತ್ತಾರಾ? ಕಾದು ನೋಡಬೇಕಿದೆ.
ಮಂಡ್ಯ (ಏ.25): ಸ್ಯಾಂಡಲ್‌ವುಡ್ ಮೋಹಕ ತಾರೆ ನಟಿ ಹಾಗೂ ಮಾಜಿ ಸಂಸದೆಯೂ ಆಗಿರುವ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನಾ ಈ ಬಾರಿಯಾದರೂ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಹೌದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲಿ ಮತದಾನ ಹಕ್ಕು ಹೊಂದಿರುವ ಯಾವುದೇ ವ್ಯಕ್ತಿ ಸಂಬಂಧಪಟ್ಟ ಅರ್ಹತೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಪ್ರಧಾನಮಂತ್ರಿಯೂ ಆಗಬಹುದು. ಆದರೆ, ಮತದಾನ ಹಕ್ಕು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಬಳಸಿಕೊಂಡು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಒಂದು ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸಿ ಸಂಸದೆ ಆಗಿದ್ದ ಮೋಹಕ ತಾರೆ ರಮ್ಯಾ ಅವರು ಕಳೆದ 6 ವರ್ಷಗಳಿಂದ ತಮ್ಮ ಮತದಾನದ ಹಕ್ಕನ್ನೇ ಚಲಾಯಿಸಿಲ್ಲ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿಯ ಪ್ರಚಾರಕ್ಕೆ ಬಿಎಂಟಿಸಿ ಬಸ್ ದುರ್ಬಳಕೆ!
2018ರಿಂದ ಈವರೆಗೆ ಮಂಡ್ಯದಲ್ಲಿ ಎರಡು ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ನಡೆದಿದ್ದರೂ ರಮ್ಯಾ ಮತ ಚಲಾಯಿಸಿಲ್ಲ. ಈ ಬಾರಿ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಬರುತ್ತಾರೆ ಎಂದು ನಿರೀಕ್ಷೆ ಮಾಡಿದ್ದರೂ ಮಂಡ್ಯಕ್ಕೆ ಆಗಮಿಸಲಿಲ್ಲ. ಇನ್ನು ನಾಳೆಯೇ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದ್ದು, ನಾಳೆ ಮತದಾನ ಚಲಾಯಿಸಲಾದರೂ ಬರುತ್ತಾರಾ ಎಂಬ ಪ್ರಶ್ನೆ ಶುರುವಾಗಿದೆ.
ಮಂಡ್ಯದ ಮಾಜಿ ಸಂಸದೆ ಆಗಿದ್ದ ನಟಿ ರಮ್ಯಾ ಮಂಡ್ಯದ ವಿದ್ಯಾನಗರದ ಮತಗಟ್ಟೆ ವ್ಯಾಪ್ತಿಯ ಮತದಾರರಾಗಿದ್ದಾರೆ. 2018 ರಿಂದ ಯಾವುದೇ ಚುನಾವಣೆಗಳಲ್ಲಿ ಮತ ಹಾಕಿಲ್ಲ. ಈವರೆಗೆ ಎರಡು ಎಂಎಲ್ ಎ ಚುನಾವಣೆ, ತಲಾ ಒಂದು ಎಂಪಿ ಬೈ ಎಲೆಕ್ಷನ್ ಹಾಗೂ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಹಾಕಲು ಬಂದಿಲ್ಲ. ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಗೂ ಸ್ಯಾಂಡಲ್ ವುಡ್ ಕ್ವೀನ್ ಮತಚಲಾಯಿಸದೇ ತಪ್ಪಿಸಿಕೊಂಡಿದ್ದಾರೆ. ಇನ್ನು 2023ರ ಎಂಎಲ್ಎ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರೂ ಮತ ಹಾಕದೆ ನಿರ್ಲಕ್ಷ ಮಾಡಿದ್ದಾರೆ.
ಮತಗಟ್ಟೆಯೊಳಗೆ ಮೊಬೈಲ್ ಕೊಂಡೊಯ್ಯಲು ಅವಕಾಶವಿಲ್ಲ; ಫೋಟೋ, ವಿಡಿಯೋ ತೆಗೆಯಲು ನಿರ್ಬಂಧ
ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯದಿಂದ ನಟಿ ರಮ್ಯಾ ಅಂತರ ಕಾಯ್ದುಕೊಂಡಿದ್ದರು. ಆದರೆ, ಪ್ರಚಾರದಿಂದ ದೂರ ಉಳಿದರೂ, ತಮ್ಮ ಮತದಾನ ಚಲಾಯಿಸಿ ಜವಬ್ದಾರಿ ನಿರ್ವಹಿಸುತ್ತಾರಾ? ಎಂಬುದು ಮಂಡ್ಯ ಜನರ ಚಿಂತೆಯಾಗಿದೆ. ಇನ್ನು ಮಂಡ್ಯಕ್ಕೆ ರಮ್ಯಾ ಬಂದಿದ್ದರೆ ಅವರ ಅಭಿಮಾನಿಗಳನ್ನು ಕಾಂಗ್ರೆಸ್‌ಗೆ ಸುಲಭವಾಗಿ ಸೆಳೆಯಬಹುದು ಎಂಬುದು ಸ್ಥಳೀಯ ಕಾಂಗ್ರೆಸ್ ನಾಯಕರ ನಿರೀಕ್ಷೆಯಾಗಿದೆ. ಆದರೆ, ದೇಶದ ಒಬ್ಬ ಮಾಜಿ ಸಂಸದೆಯಾಗಿರುವ ನಟಿ ರಮ್ಯಾ ಅವರು ಮತ ಚಲಾಯಿಸಿ ಯುವ ಜನರಿಗೆ ಮಾದರಿಯಾಗಬೇಕಿದ್ದರೂ, ತಮ್ಮ ಜವಾಬ್ದಾರಿ ಮರೆತಿದ್ದಾರೆ. ನಾಳೆ ನಡೆಯಲಿರುವ ಮತದಾನಕ್ಕಾದರೂ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.