Asianet Suvarna News Asianet Suvarna News

ಕೊರೋನಾ ಅಟ್ಟಹಾಸ: ಐಸಿಯು ಬೆಡ್‌ಗಾಗಿ ರೋಗಿಗಳ ಪರದಾಟ!

ಬೆಂಗಳೂರಿನಲ್ಲಿ ಕೊರೋನಾ ಕೇಸ್‌ಗಳ ಸಂಖ್ಯೆ ಏಕಾಏಕಿ ಹೆಚ್ಚಳ| ಮುಂದಿನ ವಾರದಿಂದ ಸಮಸ್ಯೆ ಮತ್ತಷ್ಟು ಗಂಭೀರ|  47 ವೆಂಟಿಲೇಟರ್‌ ಸಹಿತ ಐಸಿಯು ಲಭ್ಯ| ವಿಕ್ಟೋರಿಯಾ, ಬೌರಿಂಗ್‌ನಲ್ಲಿ ಐಸಿಯು ಲಭ್ಯವಿಲ್ಲ| 

Corona Patients Faces ICU Bed Problems in Hospitals in Bengaluru grg
Author
Bengaluru, First Published Apr 10, 2021, 7:16 AM IST

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಏ.10):  ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಸ್ಫೋಟ ತೀವ್ರಗೊಳ್ಳುತ್ತಿದ್ದು, ಪರಿಣಾಮ ಕೊರೋನಾ ರೋಗಿಗಳಿಗೆ ಐಸಿಯು ಬೆಡ್‌ಗಳ ತೀವ್ರ ಕೊರತೆ ಉಂಟಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ರೋಗಿಗಳು ಚಿಕಿತ್ಸೆ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಧಾನಿಯಲ್ಲಿ ನಿತ್ಯದ ಕೊರೋನಾ ಪ್ರಕರಣಗಳು 6 ಸಾವಿರ ಗಡಿ ತಲುಪಿದ್ದು, ನಗರದ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಐಸಿಯು ಬೆಡ್‌ಗಳು ಭರ್ತಿಯಾಗಿವೆ. ಗಂಭೀರ ಅನಾರೋಗ್ಯ ಹೊಂದಿರುವ ಸೋಂಕಿತರು ಐಸಿಯು ವ್ಯವಸ್ಥೆಯುಳ್ಳ ಆಸ್ಪತ್ರೆಗೆ ದಾಖಲಾಗಬೇಕಾದರೆ ದಿನವಿಡೀ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಸ್ಥಿತಿ ಉಂಟಾಗಿದೆ. ಮುಂದಿನ ವಾರ 10 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾಗಲಿದ್ದು, ಬೆಡ್‌ಗಳ ಸಂಖ್ಯೆ ಹೆಚ್ಚಾಗದಿದ್ದರೆ ಸಮಸ್ಯೆ ತೀವ್ರಗೊಳ್ಳಲಿದೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೇ ಆತಂಕ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಕೊರೋನಾ ಹಾಸಿಗೆ ನಿರ್ವಹಣಾ ವ್ಯವಸ್ಥೆಯ ಪ್ರಕಾರ ಬೆಂಗಳೂರಿನಲ್ಲಿ 197 ಐಸಿಯು ಬೆಡ್‌ಗಳಿದ್ದು, 169 ಐಸಿಯು ಬೆಡ್‌ ಭರ್ತಿಯಾಗಿದೆ. ಉಳಿದಂತೆ ಕೇವಲ 28 ಬೆಡ್‌ಗಳು ಮಾತ್ರ ಲಭ್ಯವಿವೆ.  ಸೋಂಕು ಏರುಗತಿಯ ಆರಂಭಿಕ ಹಂತದಲ್ಲೇ ಈ ಪರಿಸ್ಥಿತಿ ನಿರ್ಮಾಣವಾದರೆ, ಮುಂದಿನ ವಾರದಿಂದ ಸೋಂಕು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಈ ವೇಳೆ ಸೋಂಕಿತರ ಪರಿಸ್ಥಿತಿ ಏನು ಎಂಬ ಆತಂಕ ಮೂಡಿದೆ.

ಏಕಾಏಕಿ ಬೆಡ್‌ ಸಾಧ್ಯವಿಲ್ಲ:

ಮತ್ತೊಂದೆಡೆ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಶೇ.50 ರಷ್ಟುಬೆಡ್‌ಗಳನ್ನು ಕೊರೋನಾಗೆ ಮೀಸಲಿಡುವಂತೆ ಸರ್ಕಾರ ಸೂಚಿಸಿದ್ದರೂ, ಏಕಾಏಕಿ ಕೊರೋನೇತರ ರೋಗಿಗಳನ್ನು ಖಾಲಿ ಮಾಡಿಸಲು ಸಾಧ್ಯವಿಲ್ಲ. ಕನಿಷ್ಠ 2-3 ವಾರಗಳ ಕಾಲಾವಕಾಶ ಬೇಕು ಎಂದು ಖಾಸಗಿ ಆಸ್ಪತ್ರೆಗಳು ಅಸಹಾಯಕತೆ ವ್ಯಕ್ತಪಡಿಸಿವೆ.

ಕೊರೋನಾ ಲಸಿಕೆ ಕಚ್ಚಾ ಸಾಮಗ್ರಿಗೆ ಅಮೆರಿಕ ತಡೆ

ಬಹುತೇಕ ಬೆಡ್‌ಗಳು ಭರ್ತಿ:

ನಗರದಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 2,119 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿದೆ. ಈ ಪೈಕಿ ಈಗಾಗಲೇ 1,635 ಭರ್ತಿಯಾಗಿದ್ದು, 484 ಮಾತ್ರ ಖಾಲಿ ಇವೆ. ಇವುಗಳಲ್ಲಿ ಬಹುತೇಕ ಸಾಮಾನ್ಯ ಬೆಡ್‌ಗಳು ಮಾತ್ರ ಖಾಲಿ ಇವೆ. ಐಸಿಯು ಹಾಗೂ ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳು ಲಭ್ಯತೆ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ 3,584 ಖಾಸಗಿ ಬೆಡ್‌ ವ್ಯವಸ್ಥೆ ಮಾಡಿರುವುದಾಗಿ ಹೇಳುತ್ತಿದ್ದರೂ ಕೇವಲ ಕಾಗದಕ್ಕೆ ಸೀಮಿತವಾಗಿದೆ.

ವಿಕ್ಟೋರಿಯಾ, ಬೌರಿಂಗ್‌ನಲ್ಲಿ ಐಸಿಯು ಲಭ್ಯವಿಲ್ಲ!

ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ವಿಕ್ಟೋರಿಯಾ) ಹಾಗೂ ಬೌರಿಂಗ್‌ ಆಸ್ಪತ್ರೆಯಲ್ಲಿ ಒಟ್ಟು 350 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ 70 ಐಸಿಯು ಹಾಸಿಗೆ ಹಾಗೂ ವೆಂಟಿಲೇಟರ್‌ ಸಹಿತ ಐಸಿಯು 45 ವ್ಯವಸ್ಥೆ ಮಾಡಿದ್ದು, ಸಂಪೂರ್ಣ ಭರ್ತಿಯಾಗಿವೆ. 350 ಹಾಸಿಗೆಗಳ ಪೈಕಿ 349 ಹಾಸಿಗೆ ಭರ್ತಿಯಾಗಿದ್ದು ಸಾಮಾನ್ಯ ಬೆಡ್‌ ಸಹ ಮರೀಚಿಕೆಯಾಗಿದೆ.

ಕೊರೋನಾ ಲಸಿಕೆ ನೀಡಿಕೆ ಬಂದ್‌?

ಖಾಸಗಿ ಆಸ್ಪತ್ರೆಗಳಲ್ಲೂ ಕೇವಲ 11 ಐಸಿಯು ಬೆಡ್‌ ಲಭ್ಯವಿವೆ. ಮೂಲಗಳ ಪ್ರಕಾರ ಇವುಗಳೂ ಸಹ ಭರ್ತಿಯಾಗಿವೆ. ಒಟ್ಟು 775 ಬೆಡ್‌ ಮೀಸಲಿಟ್ಟಿದ್ದು ಈ ಪೈಕಿ ಐಸಿಯು 47, ವೆಂಟಿಲೇಟರ್‌ ಸಹಿತ ಐಸಿಯು 50, ಈ ಪೈಕಿ 36 ಐಸಿಯು, 26 ವೆಂಟಿಲೇಟರ್‌ ಸಹಿತ ಐಸಿಯು ಹಾಸಿಗೆಗಳು ಭರ್ತಿಯಾಗಿದ್ದು, ಕೇವಲ 11 ಐಸಿಯು ಬೆಡ್‌ ಮಾತ್ರ ಲಭ್ಯವಿದೆ. ಸರ್ಕಾರಿ ಕೋಟಾದಡಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 3 ಐಸಿಯು, 6 ವೆಂಟಿಲೇಟರ್‌ ಸಹಿತ ಐಸಿಯು ಮಾತ್ರ ಲಭ್ಯವಿದೆ.

ಐಸಿಯು ಬೆಡ್‌ಗಳ ಲಭ್ಯತೆ:

ಆಸ್ಪತ್ರೆ ಐಸಿಯು ಬೆಡ್‌ ಭರ್ತಿ ಲಭ್ಯತೆ

ಸರ್ಕಾರಿ ಆಸ್ಪತ್ರೆ 57 52 5
ಸರ್ಕಾರಿ ವೈದ್ಯ ಕಾಲೇಜು 70 70 0
ಖಾಸಗಿ ಆಸ್ಪತ್ರೆಗಳು 18 8 10
ಖಾಸಗಿ ವೈದ್ಯ ಕಾಲೇಜು 52 39 13
ಒಟ್ಟು 197 169 28

ಇದೇ ರೀತಿ ಪ್ರಕರಣಗಳು ಹೆಚ್ಚಾಗುತ್ತಿದ್ದರೆ ಬೆಂಗಳೂರು ಮುಂಬೈ ಆಗಲು ತುಂಬಾ ಸಮಯ ಬೇಕಾಗಿಲ್ಲ. ಪ್ರಕರಣಗಳ ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ಬೆಡ್‌ಗಳ ತೀವ್ರ ಕೊರತೆಯಾಗಿ ಸಾವಿನ ಪ್ರಮಾಣವೂ ಹೆಚ್ಚಾಗಬಹುದು. ಹೀಗಾಗಿ ಸಾರ್ವಜನಿಕರು ಕೊರೋನಾ ನಿಯಮ ಪಾಲಿಸಿ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದ್ದಾರೆ.

47 ವೆಂಟಿಲೇಟರ್‌ ಸಹಿತ ಐಸಿಯು ಲಭ್ಯ:

ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿನ 65ರಲ್ಲಿ 55 ಭರ್ತಿಯಾಗಿವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 45 ಬೆಡ್‌ಗಳ ಪೈಕಿ ಸಂಪೂರ್ಣ ಭರ್ತಿಯಾಗಿವೆ. ಖಾಸಗಿ ಆಸ್ಪತ್ರೆಗಳಲ್ಲಿನ 22 ಬೆಡ್‌ಗಳ ಪೈಕಿ 12 ಭರ್ತಿಯಾಗಿದ್ದು, ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ 55 ವೆಂಟಿಲೇಟರ್‌ ಸಹಿತ ಐಸಿಯು ಬೆಡ್‌ಗಳಲ್ಲಿ 28 ಭರ್ತಿಯಾಗಿವೆ.

ವಿವಿಧ ಆಸ್ಪತ್ರೆಗಳಲ್ಲಿ ಕೊರೋನಾ ಬೆಡ್‌ ಲಭ್ಯತೆ ವಿವರ:

ಒಟ್ಟು ಬೆಡ್ ಭರ್ತಿಯಾದ ಬೆಡ್‌ ಖಾಲಿ ಇರುವ ಬೆಡ್‌

ಸರ್ಕಾರಿ ಮೆಡಿಕಲ್‌ ಕಾಲೇಜು - 350 - 349 - 1
ಸರ್ಕಾರಿ ಆಸ್ಪತ್ರೆಗಳು - 872 - 763 - 109
ಖಾಸಗಿ ಮೆಡಿಕಲ್‌ ಕಾಲೇಜು - 750 -492 - 258
ಖಾಸಗಿ ಆಸ್ಪತ್ರೆಗಳು - 316 - 117 - 199
ಒಟ್ಟು - 2,119 - 1,635 - 484
 

Follow Us:
Download App:
  • android
  • ios