ಮುಂಬೈ (ಏ.09): ಕೇಂದ್ರ ಸರ್ಕಾರದಿಂದ ಕೊರೋನಾ ಲಸಿಕೆ ಬಾರದಿದ್ದರೆ ಶುಕ್ರವಾರದಿಂದ ಮುಂಬೈನಲ್ಲಿ ಲಸಿಕೆ ನೀಡಿಕೆ ಸ್ಥಗಿತಗೊಳ್ಳಲಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಮೇಯರ್‌ ಕಿಶೋರಿ ಪೆಡ್ನೇಕರ್‌ ಹೇಳಿದ್ದಾರೆ. ಇದೇ ವೇಳೆ, ಪುಣೆಯಲ್ಲಿ 100, ಮುಂಬೈನಲ್ಲಿ 26 ಹಾಗೂ ಸತಾರಾ, ಸಾಂಗ್ಲಿ, ಪನವೇಲ್‌ಗಳಲ್ಲಿ ಹಲವು ಲಸಿಕಾ ಕೇಂದ್ರಗಳು ಈಗಾಗಲೇ ಲಸಿಕೆಯ ಕೊರತೆಯಿಂದ ಬಾಗಿಲು ಮುಚ್ಚಿವೆ.

‘ಮುಂಬೈನ ಕೆಲ ಕೇಂದ್ರಗಳಲ್ಲಿ ಗುರುವಾರ ಸಂಜೆಯವರೆಗೆ ಸಾಕಾಗುವಷ್ಟುಮಾತ್ರ ಲಸಿಕೆಯಿದೆ. ಕೇಂದ್ರದಿಂದ ಲಸಿಕೆ ಬಾರದಿದ್ದರೆ ಶುಕ್ರವಾರ ಲಸಿಕೆ ವಿತರಣೆ ಸಂಪೂರ್ಣ ಬಂದ್‌ ಆಗಲಿದೆ’ ಎಂದು ಮೇಯರ್‌ ತಿಳಿಸಿದ್ದಾರೆ.

ಕೋವಿಡ್‌ ನಿಯಮ ಉಲ್ಲಂಘನೆ: 9.46 ಕೋಟಿ ದಂಡ ವಸೂಲಿ ..

ಈ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಆರೋಗ್ಯ ಸಚಿವ ರಾಜೇಶ್‌ ಟೋಪೆ, ‘ಜನಸಂಖ್ಯೆ ಹೆಚ್ಚಿರುವ ಮಹಾರಾಷ್ಟ್ರದಂತಹ ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚು ಲಸಿಕೆ ಪೂರೈಸಬೇಕು. ನಮಗೆ ವಾರಕ್ಕೆ 40 ಲಕ್ಷ ಹಾಗೂ ತಿಂಗಳಿಗೆ 1.6 ಕೋಟಿ ಲಸಿಕೆ ಬೇಕು. ಆದರೆ ಮಹಾರಾಷ್ಟ್ರದ ಅರ್ಧ ಜನಸಂಖ್ಯೆಯಿರುವ ಗುಜರಾತ್‌ಗೆ 1 ಕೋಟಿ ಲಸಿಕೆ ನೀಡುವ ಕೇಂದ್ರ ಸರ್ಕಾರ ನಮಗೂ 1 ಕೋಟಿ ಲಸಿಕೆ ನೀಡುತ್ತಿದೆ’ ಎಂದು ಹೇಳಿದ್ದಾರೆ.

ಇನ್ನು, ಮಹಾರಾಷ್ಟ್ರ ಕೇವಲ ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ. ರಾಜ್ಯಕ್ಕೆ ಸಾಕಾಗುವಷ್ಟುಲಸಿಕೆ ನೀಡುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಈ ಹಿಂದೆ ಹೇಳಿದ್ದರು. ಅದರ ಬೆನ್ನಲ್ಲೇ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಕೂಡ ಹರ್ಷವರ್ಧನ್‌ ಜೊತೆ ಲಸಿಕೆ ವಿಚಾರವಾಗಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.