ನವದೆಹಲಿ (ಏ.09): ಕೊರೋನಾ 2ನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನವನ್ನು ಚುರುಕುಗೊಳಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರಂತರವಾಗಿ ಸೂಚನೆಗಳನ್ನು ಕೊಡುತ್ತಿರುವಾಗಲೇ, ಬಹುದೊಡ್ಡ ಸಮಸ್ಯೆಯೊಂದು ಎದುರಾಗಿದೆ. ಕೋವಿಡ್‌ ಲಸಿಕೆಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಕಚ್ಚಾವಸ್ತುವೊಂದನ್ನು ಪೂರೈಸಲು ಅಮೆರಿಕ ಹಾಗೂ ಬ್ರಿಟನ್‌ ದೇಶಗಳು ನಿಷೇಧ ಹೇರಿರುವುದರಿಂದ ಸಮಸ್ಯೆಯಾಗಿದೆ ಎಂದು ಕೋವಿಶೀಲ್ಡ್‌ ಲಸಿಕೆ ಉತ್ಪಾದಿಸುವ ಪುಣೆಯ ಸೀರಂ ಸಂಸ್ಥೆಯ ಸಿಇಒ ಅದಾರ್‌ ಪೂನಾವಾಲಾ ಅವರು ತಿಳಿಸಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಲಸಿಕೆ ಕೊರತೆಯಿಂದ ಲಸಿಕೆ ವಿತರಣಾ ಕೇಂದ್ರಗಳು ಬಂದ್‌ ಆಗುತ್ತಿರುವ ಕುರಿತು ವರದಿಗಳು ಬರುತ್ತಿರುವಾಗಲೇ, ಲಸಿಕೆ ಉತ್ಪಾದನೆಯಲ್ಲಿ ಸಮಸ್ಯೆಯಾಗಿರುವುದು ಮಹತ್ವ ಪಡೆದುಕೊಂಡಿದೆ.

ಬ್ರೇಕಿಂಗ್ : ಕೊರೊನಾಗೆ ಹೊಸ ಔಷಧ, ಮಹಾಮಾರಿಯ ಮರಣಶಾಸನ!

ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿರುವ ಪೂನಾವಾಲಾ, ಹೈದರಾಬಾದ್‌ನ ಕೋವ್ಯಾಕ್ಸಿನ್‌, ಭಾರತ ಹಾಗೂ ವಿವಿಧ ದೇಶಗಳ ಇನ್ನಿತರೆ ಕೋವಿಡ್‌ ಲಸಿಕೆಗಳ ಉತ್ಪಾದನೆಗೆ ಬೇಕಾಗಿರುವ ಅತ್ಯುಪಯುಕ್ತ ಕಚ್ಚಾವಸ್ತುವಿಗೆ ಅಮೆರಿಕ ತಡೆ ಹಿಡಿದಿದೆ. ಹೀಗಾಗಿ ಅಮೆರಿಕಕ್ಕೇ ಹೋಗಿ ಪ್ರತಿಭಟನೆ ನಡೆಸಬೇಕು ಎನಿಸುತ್ತಿದೆ. ನಮಗೆ ಆ ಕಚ್ಚಾವಸ್ತು ಈ ಕ್ಷಣಕ್ಕೆ ಬೇಕು. ಆರು ತಿಂಗಳ ಬಳಿಕ ಅದರ ಅಗತ್ಯವಿಲ್ಲ. ಏಕೆಂದರೆ ಇತರೆ ಪೂರೈಕೆದಾರರನ್ನು ನಾವು ಗಳಿಸಿಕೊಂಡಿರುತ್ತೇವೆ. ಚೀನಾದಿಂದ ತರಿಸಿಕೊಳ್ಳೋಣ ಎಂದರೆ ಗುಣಮಟ್ಟಹಾಗೂ ಪೂರೈಕೆ ಸಮಸ್ಯೆಗಳಿವೆ ಎಂದು ಅವರು ಹೇಳಿದ್ದಾರೆ.

ಪ್ರತಿ ತಿಂಗಳು 10ರಿಂದ 11 ಕೋಟಿ ಕೋವಿಶೀಲ್ಡ್‌ ಉತ್ಪಾದಿಸಬೇಕು ಎಂಬ ಗುರಿ ಇದೆ. ಆದರೆ ಈಗ 6ರಿಂದ 6.5 ಕೋಟಿ ಲಸಿಕೆ ಮಾತ್ರ ತಯಾರಿಸುತ್ತಿದ್ದೇವೆ. ಎರಡರಿಂದ ಮೂರು ತಿಂಗಳ ಕಾಲ ಇದೇ ಬೆಲೆಯಲ್ಲಿ ಲಸಿಕೆ ಮಾರಾಟ ಮಾಡಬೇಕು. ಭಾರತಕ್ಕೆ ಲಸಿಕೆ ಪೂರೈಕೆಯಲ್ಲಿ ಆದ್ಯತೆ ನೀಡಬೇಕು ಎಂಬ ಕೇಂದ್ರ ಸರ್ಕಾರದ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.

ಕೊರೋನಾ ಲಸಿಕೆಯೊಂದನ್ನು ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಕಂಪನಿಗಳು ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಅದರ ಉತ್ಪಾದನೆ ಹಕ್ಕನ್ನು ಸೀರಂ ಸಂಸ್ಥೆ ಹೊಂದಿದೆ. ಕೋವಿಶೀಲ್ಡ್‌ ಎಂಬ ಹೆಸರಿನಲ್ಲಿ ಅದನ್ನು ಮಾರಾಟ ಮಾಡುತ್ತಿದೆ. ಸೀರಂ ಸಂಸ್ಥೆ ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕಾ ಕಂಪನಿ ಎನಿಸಿಕೊಂಡಿದೆ.