ಶಿವಮೊಗ್ಗ(ಜು.01): ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಇಂದು ಬರೋಬ್ಬರಿ 22 ಪಾಸಿಟಿವ್‌ ಕೇಸುಗಳು ದೃಢವಾಗಿವೆ. ಶಿವಮೊಗ್ಗದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿದಂತೆ ಭದ್ರಾವತಿಯಲ್ಲಿ 7, ಶಿಕಾರಿಪುರದಲ್ಲಿ 8, ಶಿವಮೊಗ್ಗದಲ್ಲಿ 2, ಅದೇ ರೀತಿ ಹೊಸನಗರ, ತೀರ್ಥಹಳ್ಳಿ, ಸೊರಬ ತಾಲ್ಲೂಕಿನಲ್ಲಿ ಒಂದೊಂದು ಕೇಸುಗಳು ಧೃಢವಾಗಿದ್ದು, ಇದೇ ಮೊದಲ ಬಾರಿಗೆ 22 ಕೇಸುಗಳು ಶಿವಮೊಗ್ಗದಲ್ಲಿ ದೃಢಪಟ್ಟಿವೆ.

ಇದರಿಂದಾಗಿ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಭದ್ರಾವತಿಯಲ್ಲಿ ಬರೋಬ್ಬರಿ 7 ಕೊರೋನಾ ಪಾಸಿಟಿವ್‌ ಬಂದಿರುವ ಹಿನ್ನೆಲೆಯಲ್ಲಿ 2 ಏರಿಯಾದ 5 ರಸ್ತೆ ಸೀಲ್‌ ಡೌನ್‌ ಮಾಡಲಾಗಿದೆ. ಇಂದು ಮುಂಜಾನೆಯೇ ಉಕ್ಕಿನ ನಗರಿಯ ಮಂದಿಗೆ ಕೊರೋನಾ ಶಾಕ್‌ ಕೊಟ್ಟಿದೆ.

ಗಾಂಧಿ​ನಗರದಲ್ಲಿ ಐವರಿಗೆ ಇಂದು ಪಾಸಿಟಿವ್‌ ಬಂದಿದ್ದು, ಈ ಹಿನ್ನೆಲೆಯಲ್ಲಿ ಮೊದಲಿಯಾರ್‌ ಸಮುದಾಯ ಭವನಕ್ಕೆ ತೆರಳುವ ಮುಖ್ಯರಸ್ತೆ ಹಾಗೂ ಪಕ್ಕದ ರಸ್ತೆಯಲ್ಲಿ ಇಂದು ಮುಂಜಾನೆ ಸೀಲ್‌ ಡೌನ್‌ ಮಾಡಲಾಗಿದೆ. ಇನ್ನು, ಸುಭಾಷ್‌ ನಗರದಲ್ಲಿ ಎರಡು ಪಾಸಿಟಿವ್‌ ಪ್ರಕರಣ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮೂರು ರಸ್ತೆಯನ್ನು ಸೀಲ್‌ ಡೌನ್‌ ಮಾಡಲಾಗಿದೆ. ಮೊದಲಿಯಾರ್‌ ಸಮುದಾಯ ಭವನದ ರಸ್ತೆಯಲ್ಲಿ ಐದು ಮಂದಿಗೆ ಪಾಸಿಟಿವ್‌ ಬಂದಿದೆ. ಇವರ ಟ್ರಾವೆಲ್‌ ಹಿಸ್ಟರಿ ಇನ್ನೂ ದೊರೆತಿಲ್ಲ. ಈ ಕುರಿತಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ.

ಶಿಕಾರಿಪುರದಲ್ಲಿ ಸಾವನ್ನಪ್ಪಿದ್ದ ವೃದ್ಧೆಯ ಸಂಪರ್ಕ ಹೊಂದಿದ 8 ಜನರು ಸೇರಿದಂತೆ, ಭದ್ರಾವತಿಯ ಬಸ್‌ ಏಜೆಂಟ್‌ ಸಂಪರ್ಕ ಹೊಂದಿದ ಐವರು ಸೇರಿದಂತೆ, ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ಇಬ್ಬರು ವೈದ್ಯರಿಂದ ಇದೀಗ ಮತ್ತಿಬ್ಬರು ವೈದ್ಯರಿಗೆ ಸೋಂಕು ಕಾಣಿಸಿಕೊಂಡಿದೆ. ಈ ಇಬ್ಬರು ವೈದ್ಯರು, ಪ್ರಥಮ ಸೋಂಕಿತ ವೈದ್ಯರ ಸಹಾಯಕ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಹಾವೇರಿಯಲ್ಲಿ ಕೊರೋನಾಕ್ಕೆ ಇಬ್ಬರು ವೃದ್ಧೆಯರು ಬಲಿ: 49 ಪಾಸಿಟಿವ್‌

ಹೊಸಮನೆಯ ಸುಭಾಷ್‌ ನಗರದಲ್ಲಿ ಇಬ್ಬರಿಗೆ ಪಾಸಿಟಿವ್‌ ಬಂದಿದ್ದು, ತಮಿಳುನಾಡು ಟ್ರಾವೆಲ್‌ ಹಿಸ್ಟರಿ ಇದೆ. ತಮ್ಮ ಗರ್ಭಿಣಿ ಸೊಸೆ ಹೆರಿಗೆ ಸಂದರ್ಭದಲ್ಲಿ ತಮಿಳುನಾಡಿಗೆ ತೆರಳಿದ್ದು, ನಾಲ್ಕೆತ್ರೖದು ದಿನಗಳ ಹಿಂದೆ ನಗರಕ್ಕೆ ಮರಳಿದ 56 ವರ್ಷದ ಪುರುಷ, 48 ವರ್ಷದ ಮಹಿಳೆಯಲ್ಲಿ ಪಾಸಿಟಿವ್‌ ಬಂದಿದೆ. ಈ ಕುಟುಂಬದಲ್ಲಿ ಒಟ್ಟು ಐವರಿದ್ದು, ಇನ್ನೂ ಇಬ್ಬರು ವರದಿ ಬರಬೇಕಿದೆ. ಸೊರಬದ ಒಂದು ಬಡಾವಣೆಯಲ್ಲಿಯೂ ಕೂಡ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಸೀಲ್‌ ಡೌನ್‌ ಮಾಡಲಾಗಿದೆ. ಶಿವಮೊಗ್ಗದ ಗಾಂ​ಧಿನಗರ ಸೇರಿದಂತೆ, ಎರಡು ಬಡಾವಣೆಯ ರಸ್ತೆಗಳನ್ನು ಸೀಲ್‌ ಡೌನ್‌ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಜನರ ಓಡಾಟವನ್ನು ನಿರ್ಬಂ​ಧಿಸಲಾಗಿದೆ. ಯಾರಾದರೂ ಓಡಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಪಿ-14378, ರಿಂದ ಪಿ-14399 ರವರೆಗಿನ ನಂ. ನ ಸೋಂಕಿತರಿಗೆ, ನಗರದ ಮೆಗ್ಗಾನ್‌ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ, ಶಿವಮೊಗ್ಗದಲ್ಲಿ ದಿನೇದಿನೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್‌ ಸೋಂಕು ಜನರನ್ನು ಭೀತಿಯಲ್ಲಿ ತಳ್ಳಿದೆ.

ಸೋಂಕಿತರ ವಿವರ:

ಪಿ-14378 26 ವರ್ಷದ ಪುರುಷ (ಅಂತರಜಿಲ್ಲಾ ಪ್ರಯಾಣ ಬೆಂಗಳೂರು), ಪಿ-14379 53 ವರ್ಷದ ಪುರುಷ (ಪಿ-9546ರ ಸಂಪರ್ಕ), ಪಿ-14380 39 ವರ್ಷದ ಮಹಿಳೆ (ಪಿ-11197ರ ಸಂಪರ್ಕ), ಪಿ-14381 26 ವರ್ಷದ ಮಹಿಳೆ , ಪಿ-14382 6 ವರ್ಷದ ಬಾಲಕ, ಪಿ-14383 44 ವರ್ಷದ ಹೆಣ್ಣು, ಪಿ-14384 44 ವರ್ಷದ ಹೆಣ್ಣು, ಪಿ-14385 56 ವರ್ಷದ ಪುರುಷ (ಐವರು ಪಿ-10827ರ ಸಂಪರ್ಕ), ಪಿ-14386 39 ವರ್ಷದ ಗಂಡು (ಕತಾರ್ನಿಂದ ಹಿಂದಿರುಗಿದವರು), ಪಿ-14387 32 ವರ್ಷದ ಪುರುಷ (ಐಎಲ್‌ಐ), ಪಿ-14388 46 ವರ್ಷದ ಹೆಣ್ಣು (ತಮಿಳುನಾಡಿನಿಂದ ಹಿಂದಿರುಗಿದವರು), ಪಿ-14389 31 ವರ್ಷದ ಗಂಡು (ಬೆಂಗಳೂರು ಮೂಲ), ಪಿ-14390 57 ವರ್ಷದ ಪುರುಷ (ತಮಿಳುನಾಡಿನಿಂದ ಹಿಂದಿರುಗಿದವರು), ಪಿ-14391 26 ವರ್ಷದ ಮಹಿಳೆ (ಪಿ-10830 ರ ಸಂಪರ್ಕ), ಪಿ-14392 42 ವರ್ಷದ ಪುರುಷ (ಪಿ-9546 ರ ಸಂಪರ್ಕ), ಪಿ-14393 2 ವರ್ಷದ ಬಾಲಕ, ಪಿ-14394 3 ವರ್ಷದ ಬಾಲಕಿ, ಪಿ-14395 5 ವರ್ಷದ ಬಾಲಕ (ಮೂವರು ಪಿ-11197ರ ಸಂಪರ್ಕ), ಪಿ-14396 64 ವರ್ಷದ ವೃದ್ಧ (ಐಎಲ್‌ಐ), ಪಿ-14397 28 ವರ್ಷದ ಮಹಿಳೆ (ಅಂತರಜಿಲ್ಲೆ ಪ್ರಯಾಣ), ಪಿ-14398 35 ವರ್ಷದ ಪುರುಷ (ಪಿ-9546 ರ ಸಂಪರ್ಕ), ಪಿ-14399 52 ವರ್ಷದ ಪುರುಷ (ಐಎಲ್‌ಐ).