ಬೆಂಗಳೂರು (ಸೆ.08):  ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 2,942 ಹೊಸ ಸೋಂಕಿತರು ಪತ್ತೆಯಾಗುವ ಮೂಲಕ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ.

ಬೆಂಗಳೂರಿನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಜುಲೈ ಕೊನೆಯ ವಾರದಲ್ಲಿ ಸೋಂಕಿತರ 50 ಸಾವಿರ ಗಡಿದಾಟಿತ್ತು. ಆಗಸ್ಟ್‌ 21 ರಂದು ಸೋಂಕಿನ ಸಂಖ್ಯೆ ಒಂದು ಲಕ್ಷದ ಗಡಿದಾಟಿತ್ತು. ಸೋಮವಾರ 1.5 ಲಕ್ಷ ಗಡಿದಾಟಿದೆ. ಈ ಮೂಲಕ ಕಳೆದ 17 ದಿನದಲ್ಲಿ ಬೆಂಗಳೂರಿನಲ್ಲಿ ಒಟ್ಟು 50 ಸಾವಿರ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ.

ರಾಜ್ಯ 90% ಅನ್‌ಲಾಕ್‌, 45% ನಾರ್ಮಲ್..! ...

ನಗರದಲ್ಲಿ ಮೊದಲ 50 ಸಾವಿರ ಸೋಂಕು ಪ್ರಕರಣ ಪತ್ತೆಯಾಗುವುದಕ್ಕೆ ಬರೋಬ್ಬರಿ 3 ತಿಂಗಳು ಬೇಕಾಗಿತ್ತು. ಆದರೆ, ಸೋಂಕಿತರ ಸಂಖ್ಯೆ 50 ಸಾವಿರದಿಂದ 1 ಲಕ್ಷದ ಗಡಿದಾಟುವುದಕ್ಕೆ ಕೇವಲ 22 ದಿನ ತೆಗೆದುಕೊಂಡಿತ್ತು. 1 ಲಕ್ಷದಿಂದ 1.5 ಲಕ್ಷ ದಾಟುವುದಕ್ಕೆ 17 ದಿನ ತೆಗೆದುಕೊಂಡಿದೆ. ಮುಂದಿನ 15 ರಿಂದ 20 ದಿನದಲ್ಲಿ ನಗರ ಕೊರೋನಾ ಸೋಂಕಿತರ ಸಂಖ್ಯೆ 2 ಲಕ್ಷ ದಾಟುವ ಸಾಧ್ಯತೆ ಇದೆ.

ಒಟ್ಟು ಸೋಂಕಿತರ ಸಂಖ್ಯೆ 1,50,523ಕ್ಕೆ ಏರಿಕೆಯಾಗಿದೆ. ಸೋಮವಾರ 2,935 ಮಂದಿ ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಸಂಖ್ಯೆ 1,08.642ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ 4 ಲಕ್ಷ ದಾಟಿದ ಕೊರೋನಾ ಸಂಖ್ಯೆ: ಸೋಮವಾರ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..! .

ಇನ್ನು ಸೋಮವಾರ 48 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟವರದಿಯಾಗಿದೆ. ಈ ಮೂಲಕ ಒಟ್ಟು 1,211 ಮಂದಿ ನಗರದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು 39,669 ಸಕ್ರಿಯ ಪ್ರಕರಣಗಳಿದ್ದು, 265 ಮಂದಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.