Asianet Suvarna News Asianet Suvarna News

ದೇಶದ ಬೆಳವಣಿಗೆಗೆ ಕಾಂಗ್ರೆಸ್‌ ಕೊಡುಗೆ ಅಪಾರ: ಧ್ರುವನಾರಾಯಣ್‌

ಸ್ವಾತಂತ್ರ್ಯ ನಂತರ ಹಸಿವು, ಬಡತನ, ಅನಕ್ಷರತೆಯಿಂದ ಕೂಡಿದ್ದ ಭಾರತ ದೇಶ ಇಂದು ವಿಜ್ಞಾನ, ತಂತ್ರಜ್ಞಾನ, ಆಹಾರ ಸ್ವಾವಲಂಬನೆಗಳಿಸಿ ಬೆಳವಣಿಗೆಯಾಗಲು ಕಾಂಗ್ರೆಸ್‌ ಪಕ್ಷದ ಕೊಡುಗೆ ಅಪಾರವಾದದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ್‌ ಹೇಳಿದರು.

contribution of Congress to the development of the country is immense says r dhruvanarayan gvd
Author
Bangalore, First Published Aug 22, 2022, 1:29 AM IST

ನಂಜನಗೂಡು (ಆ.22): ಸ್ವಾತಂತ್ರ್ಯ ನಂತರ ಹಸಿವು, ಬಡತನ, ಅನಕ್ಷರತೆಯಿಂದ ಕೂಡಿದ್ದ ಭಾರತ ದೇಶ ಇಂದು ವಿಜ್ಞಾನ, ತಂತ್ರಜ್ಞಾನ, ಆಹಾರ ಸ್ವಾವಲಂಬನೆಗಳಿಸಿ ಬೆಳವಣಿಗೆಯಾಗಲು ಕಾಂಗ್ರೆಸ್‌ ಪಕ್ಷದ ಕೊಡುಗೆ ಅಪಾರವಾದದ್ದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಹೇಳಿದರು. ತಾಲೂಕಿನ ಹಗಿನವಾಳು ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿರುವ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷವು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಹಿನ್ನೆಲೆ ಹೊಂದಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ ಕಾರ್ಖಾನೆಗಳು, ಅಣೆಕಟ್ಟೆಗಳು, ವಿಶ್ವವಿದ್ಯಾನಿಲಯಗಳು, ಶಾಲಾ ಕಾಲೇಜುಗಳಿರಲಿಲ್ಲ, ದೇಶದಲ್ಲಿ ಆಹಾರ ಕೊರತೆ ಅಧಿಕವಾಗಿತ್ತು. ಅಮೇರಿಕಾದಿಂದ ಗೋದಿ ನುಚ್ಚು ತರಿಸಿ ಹಂಚುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದರು.

ಆಗಿನ ಪ್ರಧಾನಿ ನೆಹರು ಅವರು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡಯ್ದರು. ಹಸಿರು ಕ್ರಾಂತಿ ಮೂಲಕ ಆಹಾರ ಸ್ವಾವಲಂಬನೆ, 25 ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಈಗ ಭಾರತ ದೇಶ ತಂತ್ರಜ್ಞಾನ, ವಿಜ್ಞಾನ ಕ್ಷೇತ್ರದಲ್ಲಿ ಮುಂದುವರೆಯಲು ಕಾಂಗ್ರೆಸ್‌ ಪಕ್ಷದ ಕೊಡುಗೆ ಅಪಾರವಾಗಿದೆ ಎಂದು ಅವರು ತಿಳಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ವಿದೇಶದಲ್ಲಿನ ಕಪ್ಪು ಹಣವನ್ನು ತಂದು ಎಲ್ಲಾ ನಾಗರೀಕರು ಹಂಚುತ್ತೇನೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ, ಬಡತನ ಹೋಗಲಾಡಿಸುತ್ತೇವೆ ಎಂದಿದ್ದರು. ಆದರೆ, ಅಧಿಕಾರಕ್ಕೆ ಬಂದು 8 ವರ್ಷ ಕಳೆದಿದೆ. ಅವರು ಕೊಟ್ಟಯಾವ ಭರವಸೆಯನ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಬೆಲೆ ಏರಿಕೆಯಿಂದ ರೈತರ, ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ ಎಂದು ಅವರು ಆರೋಪಿಸಿದರು.

ಪಠ್ಯದಲ್ಲಿ ನೀತಿಕತೆಗಳು ಇಲ್ಲದಿದ್ದರೆ ಪ್ರಯೋಜನವಿಲ್ಲ: ಎಸ್‌.ಎಲ್‌. ಭೈರಪ್ಪ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಅನೇಕ ಜನಪರ, ಬಡವರ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಲ್ಲದೆ ಕೊಟ್ಟಎಲ್ಲಾ ಭರವಸೆಗಳನ್ನು ಈಡೇರಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ಮತ್ತು ಬಿಜೆಪಿ ಸರ್ಕಾರದ ದುರಾಡಳಿತವನ್ನು ಜನರಿಗೆ ತಿಳಿಸಿ, ಜನ ಜಾಗೃತಿ ಮೂಡಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬೆಂಬಲ ಕಾಂಗ್ರೆಸ್‌ ಪಕ್ಷದ ಮೇಲಿರಲಿ ಎಂದು ಅವರು ಮನವಿ ಮಾಡಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಪಾದಯಾತ್ರೆ 4 ದಿನ ಪೂರೈಸಿದೆ. ಪ್ರತಿದಿನ 15 ರಿಂದ 20 ಕಿ.ಮೀ ಪಾದಯಾತ್ರೆ ನಡೆಸಲಾಗುತ್ತಿದೆ. ಈ ದಿನ ಹಗಿನವಾಳು- ಹಲ್ಲರೆ, ಮುಲ್ಕುಂಡಿ, ಹುರಾ, ಹಾಡ್ಯ ಮಾರ್ಗವಾಗಿ ಪಾದಯಾತ್ರೆ ಸಾಗಲಿದೆ ಎಂದರು.

ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಚ್‌.ಸಿ. ಬಸವರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕುರಹಟ್ಟಿಮಹೇಶ್‌, ಶ್ರೀಕಂಠನಾಯಕ, ಸಿ.ಎಂ. ಶಂಕರ್‌, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಕೆ. ಮಾರುತಿ, ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮುಖಂಡರಾದ ಪುಷ್ಪ ನಾಗೇಶ್‌ರಾಜ್‌, ಬಸವಣ್ಣ, ಎಂ. ಮಾದಪ್ಪ, ಕರಳಪುರ ನಾಗರಾಜು, ರಾಜೇಶ್‌, ಶಿವಣ್ಣ, ಕೆಂಡಗಣ್ಣಪ್ಪ, ಮಹದೇವು, ತಾಪಂ ಮಾಜಿ ಅಧ್ಯಕ್ಷ ನಾಗೇಶ್‌ರಾಜ್‌, ಕೆಪಿಸಿಸಿ ಸದಸ್ಯ ಅಕ್ಬರ್‌ ಅಲಿಂ, ಯುವ ಕಾಂಗ್ರೇಸ್‌ ಅಧ್ಯಕ್ಷ ಅಶೋಕ್‌ ಮೊದಲಾದವರು ಇದ್ದರು.

ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲ: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳಿದ್ದರೂ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್‌ ಸರ್ಕಾರದ ಯೋಜನೆಗಳು ಜನಮಾನಸದಲ್ಲಿ ನೆಲೆಸಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ್‌ ಹೇಳಿದರು. ತಾಲೂಕಿನ ನವಿಲೂರು ಗ್ರಾಮದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಕೊಟ್ಟಆಶ್ವಾಸನೆ, ಭರವಸೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೇಂದ್ರ ಸರ್ಕಾರಗಳ ದುರಾಡಳಿದಿಂದಾಗಿ ಜನರು ಬೇಸೆತ್ತು ಹೋಗಿದ್ದಾರೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ ಎಂದರು.

ಮೊಟ್ಟೆ ಪ್ರತಿಭಟನೆ ಬಿಸಿ: ಸಿದ್ದರಾಮಯ್ಯ ತವರೂರಿಗೆ ಆಗಮಿಸಲು ಸಿಎಂ ಬೊಮ್ಮಾಯಿ ಹಿಂದೇಟು!

ಸ್ವಾತಂತ್ರ್ಯ ನಂತರ ದೇಶದಲ್ಲಿ ಆಹಾರ ಉತ್ಪಾದನೆ ಕಡಿಮೆ ಇತ್ತು. ಅಮೆರಿಕಾದಿಂದ ಗೋಧಿ ನುಚ್ಚು ತಂದು ಹಂಚಲಾಗುತ್ತಿತ್ತು. ಬಡವರು ಶ್ರೀಮಂತರ ಮನೆಯಲ್ಲಿ ಊಟ ನೀಡಿದರೆ ಸಾಕು ದುಡಿಯುತ್ತೇವೆ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಪರಿಸ್ಥಿತಿಯನ್ನು ನೆಹರು ಅವರು ಪಂಚವಾರ್ಷಿಕ ಯೋಜನೆ ಮೂಲಕ ಮರುಭೂಮಿಯಾಗಿದ್ದ ದೇಶವನ್ನು ಭವ್ಯ ಬಲಿಷ್ಠ ಭಾರತವನ್ನಾಗಿಸಿದರಲ್ಲದೆ ಪ್ರತಿಯೊಬ್ಬ ಭಾರತೀಯನು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸಿದರು. ಸಿದ್ದರಾಮಯ್ಯ ಸರ್ಕಾರ ಬಡವರ ಪರ, ರೈತರ ಪರ ಅನೇಕ ಯೋಜನೆ ಜಾರಿಗೆ ತಂದರು. ಆದ್ದರಿಂದಲೇ ಇನ್ನೂ ಕೂಡ ಕಾಂಗ್ರೆಸ್‌ ಸರ್ಕಾರದ ಯೋಜನೆಗಳು ಜನರ ಮನಸ್ಸಿನಲ್ಲಿ ನೆಲೆಸಿವೆ. ಕಾಂಗ್ರೆಸ್‌ ಪಕ್ಷದ ಸಾಧನೆಗಳನ್ನು ಯುವ ತಲೆ ಮಾರಿಗೆ ತಿಳಿಸುವಂತಹ ಕೆಲಸವನ್ನು ನಾವು ಮಾಡಬೇಕಿದೆ ಎಂದು ಅವರು ಹೇಳಿದರು.

Follow Us:
Download App:
  • android
  • ios