‘ನಮ್ಮ ಮೆಟ್ರೋ’ದ ಎರಡನೇ ಹಂತದ ಯೋಜನೆಗಳಿಗೆ 3177 ಕೋಟಿ ಮೊತ್ತದಲ್ಲಿ 318 ಬೋಗಿಗಳನ್ನು ಪೂರೈಸುವ ಗುತ್ತಿಗೆಯನ್ನು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಪಡೆದಿದೆ.
ಬೆಂಗಳೂರು (ಆ.09): ‘ನಮ್ಮ ಮೆಟ್ರೋ’ದ ಎರಡನೇ ಹಂತದ ಯೋಜನೆಗಳಿಗೆ 3177 ಕೋಟಿ ಮೊತ್ತದಲ್ಲಿ 318 ಬೋಗಿಗಳನ್ನು ಪೂರೈಸುವ ಗುತ್ತಿಗೆಯನ್ನು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಪಡೆದಿದೆ. ಬೋಗಿಗಳನ್ನು ಪೂರೈಸುವ ಜೊತೆಗೆ ಇದೇ ಮೊದಲ ಬಾರಿಗೆ ಹದಿನೈದು ವರ್ಷಗಳ ನಿರ್ವಹಣೆ ಹೊಣೆಯನ್ನೂ ಬಿಇಎಂಎಲ್ ನಿಭಾಯಿಸಬೇಕಿದೆ. ಬೋಗಿ ಪೂರೈಕೆ ಸಂಬಂಧ ಬಿಡ್ ಸಲ್ಲಿಸಿದ್ದ ಕಂಪನಿಗಳ ಪೈಕಿ ಬಿಇಎಂಎಲ್ ಅತಿ ಕಡಿಮೆ ಮೊತ್ತ ಲಗತ್ತಿಸಿತ್ತು. ಸದ್ಯ ಬಿಎಂಎಂಎಲ್ 10 ವಂದೇ ಭಾರತ್ ರೈಲುಗಳ ಸ್ಲೀಪರ್ ಕೋಚ್‌ಗಳ ನಿರ್ಮಾಣದಲ್ಲಿ ಸಂಪೂರ್ಣವಾಗಿ ತೊಡಗಿದೆ.
ಹೀಗಾಗಿ ಮುಂದಿನ ವರ್ಷಾರಂಭದಿಂದ ಈ ಬೋಗಿಗಳ ಪೂರ್ಣ ಪ್ರಮಾಣದ ನಿರ್ಮಾಣ ಕಾರ್ಯ ಆರಂಭವಾಗಲಿದೆ. 2025ಕ್ಕೆ ಈ ಬೋಗಿಗಳು ನಮ್ಮ ಮೆಟ್ರೋಗೆ ಪೂರೈಕೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದರು. 126 ಬೋಗಿಗಳನ್ನು ಮುಂಬರುವ ನೀಲಿ ಮಾರ್ಗದ 37 ಕಿ.ಮೀ. ಕೆ.ಆರ್.ಪುರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರಿಡಾರ್ (2ಬಿ ಹಂತ), 96 ಬೋಗಿಗಳನ್ನು 18.2 ಕಿ.ಮೀ. ರೇಷ್ಮೇ ಕೇಂದ್ರ-ಕೆ.ಆರ್.ಪುರಕ್ಕೆ ಪೂರೈಸಲಾಗುತ್ತಿದೆ. 21.3 ಕಿ.ಮೀ. ಉದ್ದದ ಕಾಳೇನ ಅಗ್ರಹಾರ-ನಾಗವಾರ ಮಾರ್ಗ ಗುಲಾಬಿ ಕಾರಿಡಾರ್‌ಗೆ 96 ಬೋಗಿಗಳನ್ನು ಒದಗಿಸಲು ನಿರ್ಧರಿಸಲಾಗಿದೆ.
ಬಿಬಿಎಂಪಿ ಕಾಮಗಾರಿ ಬಿಲ್ ಪಾವತಿಗೆ ಕಮಿಷನ್: ಸಿಎಂಗೆ ದೂರು
ನಿತ್ಯ 6.1 ಲಕ್ಷ ಜನರ ಪ್ರಯಾಣ: ಕಳೆದ ಜುಲೈ ತಿಂಗಳಲ್ಲಿ ನಿತ್ಯ ಸರಾಸರಿ 6.1 ಲಕ್ಷ ಜನರು ಮೆಟ್ರೋ ರೈಲುಗಳಲ್ಲಿ ಸಂಚರಿಸಿರುವುದು ಹೊಸ ದಾಖಲೆಯಾಗಿದೆ. 17 ದಿನ ನಿರಂತರವಾಗಿ 6.12 ಲಕ್ಷ ಜನ ಸಂಚರಿಸಿದ್ದಾರೆ. ಜನವರಿಗೆ ಹೋಲಿಸಿದರೆ ಶೇ.16ರಷ್ಟುಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಈ ತಿಂಗಳ ಅಂತ್ಯಕ್ಕೆ ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ (2.1 ಕಿ.ಮೀ) ಹಾಗೂ ಕೆಂಗೇರಿ-ಚೆಲ್ಲಘಟ್ಟ(1.9 ಕಿ.ಮೀ) ಮಾರ್ಗ ಜನಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ದೈನಂದಿನ ಪ್ರಯಾಣಿಕರ ಸಂಖ್ಯೆ 7.5 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಮೆಟ್ರೋ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಇವೆರಡೂ ಮಾರ್ಗಗಳಲ್ಲಿ ಬಿಎಂಆರ್‌ಸಿಎಲ್ ಈಗಾಗಲೇ ಪ್ರಾಯೋಗಿಕ ಸಂಚಾರ ಆರಂಭಿಸಿದೆ.
ಆರಂಭದಲ್ಲಿ ಮಹಾತ್ಮಾ ಗಾಂಧಿ ರಸ್ತೆ-ಬೈಯಪ್ಪನಹಳ್ಳಿ ದೈನಂದಿನ ಪ್ರಯಾಣಿಕರ ಸಂಖ್ಯೆ ಕೇವಲ 35 ಸಾವಿರ ಆಗಿತ್ತು. ಸದ್ಯ 70 ಕಿ.ಮೀ. ಮೆಟ್ರೋ ಜಾಲ ಹೊಂದಿದ್ದು, ನಿತ್ಯ ಸರಾಸರಿ 6 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಕಳೆದ ಐದು ವರ್ಷದಿಂದ ಕುಂಠಿತವಾಗಿ ಸಾಗಿರುವ ಹಸಿರು ಮಾರ್ಗದ ವಿಸ್ತರಿತ ನಾಗಸಂದ್ರ-ಮಾದವಾರ (3 ಕಿ.ಮೀ.) ಕಾಮಗಾರಿ ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು ನವೆಂಬರ್‌ನಿಂದ ಕಾರ್ಯಾಚರಣೆ ಮಾಡಿದಲ್ಲಿ ಮತ್ತಷ್ಟುಜನರು ಪ್ರಯಾಣಿಸಬಹುದು. ನೇರಳೆ ಮತ್ತು ಹಸಿರು ಸೇರಿ ಶೀಘ್ರ ಒಟ್ಟಾರೆ 7 ಕಿ.ಮೀ. ಸೇರ್ಪಡೆ ಆಗುತ್ತಿದೆ. ಇದರಿಂದಲೂ ಮೆಟ್ರೋ ಅವಲಂಬಿತರ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಮೆಟ್ರೋ ತನ್ನ ಸೇವೆಯ ಆರಂಭ ಹಾಗೂ ಕೊನೆಯ ಸಂಚಾರದ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಮೊದಲ ಹಾಗೂ ಕೊನೆಯ ನಿಲ್ದಾಣಗಳಿಂದ ಪ್ರಯಾಣಿಕರು ಸುಲಭವಾಗಿ ತಮ್ಮ ಸ್ಥಳಗಳಿಗೆ ತಲುಪಲು ಕ್ರಮ ವಹಿಸಿದರೆ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಬಹುದು.
-ನಗರ ಸಾರಿಗೆ ತಜ್ಞರು
