ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-20ರಿಂದ 2022-23ರವರೆಗೆ) ಬಿಬಿಎಂಪಿಯಿಂದ ಅನುಷ್ಠಾನಗೊಳಿಸಲಾಗಿರುವ ಕಾಮಗಾರಿಗಳ ತನಿಖೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಐಎಎಸ್‌ ಅಧಿಕಾರಿಗಳ ನೇತೃತ್ವದ ನಾಲ್ಕು ಸಮಿತಿಯನ್ನು ರಚಿಸಿದೆ.

ಬೆಂಗಳೂರು (ಆ.09): ಬಿಜೆಪಿ ಸರ್ಕಾರದ ಅವಧಿಯಲ್ಲಿ (2019-20ರಿಂದ 2022-23ರವರೆಗೆ) ಬಿಬಿಎಂಪಿಯಿಂದ ಅನುಷ್ಠಾನಗೊಳಿಸಲಾಗಿರುವ ಕಾಮಗಾರಿಗಳ ತನಿಖೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಐಎಎಸ್‌ ಅಧಿಕಾರಿಗಳ ನೇತೃತ್ವದ ನಾಲ್ಕು ಸಮಿತಿಯನ್ನು ರಚಿಸಿದೆ. ಪಿಎಸ್‌ಐ ನೇಮಕಾತಿ ಅಕ್ರಮ ಸೇರಿದಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಲವು ಹಗರಣಗಳ ತನಿಖೆಗೆ ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಅದರ ಜತೆಗೆ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ತನಿಖೆ ನಡೆಸಲು ಆದೇಶಿಸಿದೆ. 

ಕಾಮಗಾರಿಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ, ಅವುಗಳಿಗೆ ಪ್ರತ್ಯೇಕ ಸಮಿತಿಗಳನ್ನು ನೇಮಿಸಲಾಗಿದೆ. ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳು, ರಸ್ತೆ ಅಭಿವೃದ್ಧಿ ಮತ್ತು ಒಎಫ್‌ಸಿ ಕೇಬಲ್‌ ಅನುಮತಿ ನೀಡಿರುವುದು, ಬೃಹತ್‌ ನೀರುಗಾಲುವೆ ಮತ್ತು ಕೇಂದ್ರ, ವಲಯ ನಗರ ಯೋಜನೆ ವಿಭಾಗಗಳಲ್ಲಿ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ನೀಡಿರುವುದು ಹಾಗೂ ಕೆರೆಗಳ ಅಭಿವೃದ್ಧಿ ಮತ್ತು ಸ್ಮಾರ್ಚ್‌ಸಿಟಿ ಯೋಜನೆ ಅಡಿಯಲ್ಲಿನ ಕಾಮಗಾರಿ ಹಾಗೂ ವಾರ್ಡ್‌ ಮಟ್ಟದ ಕಾಮಗಾರಿಗಳ ತನಿಖೆಗೆ ಸಮಿತಿ ರಚಿಸಲಾಗಿದೆ.

ನಿರ್ದೇಶಕ ಟಿ.ಎಸ್.ನಾಗಾಭರಣಗೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್!

ಸಮಿತಿಯು ಕೆಟಿಪಿಪಿ ಕಾಯ್ದೆ ನಿಯಮ ಉಲ್ಲಂಘಿಸಿ ಟೆಂಡರ್‌ ನೀಡಿರುವುದು, ಕಾಮಗಾರಿಗಳನ್ನು ನಿರ್ವಹಿಸದೇ ಬಿಲ್‌ಗಳನ್ನು ಪಡೆದಿರುವುದು, ಕಾಮಗಾರಿಗಳ ಗುಣಮಟ್ಟಇಲ್ಲದಿರುವುದು, ಅನುಮೋದಿತ ಕಾಮಗಾರಿಗಳನ್ನು ನಿಯಮಾನುಸಾರ ಅನುಷ್ಠಾನಗೊಳಿಸದಿರುವುದು, ನಿರ್ದಿಷ್ಟಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿ ನಂತರ ಆ ಕಾಮಗಾರಿ ಬಿಲ್‌ ಹಣವನ್ನು ಬೇರೆಯವರಿಗೆ ಪಾವತಿಸಿರುವುದು, ಕಾಮಗಾರಿಗಳ ನಿರ್ವಹಣೆ ಸಮರ್ಪಕವಾಗಿ ಮಾಡದಿರುವುದು ಸೇರಿದಂತೆ ಹಲವು ವಿಚಾರಗಳನ್ನು ಪರಿಶೀಲಿಸಿ ಸಮಿತಿಯು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನ, ಬಿಬಿಎಂಪಿ ಆದಾಯದಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ ತನಿಖೆಗೊಳಪಡಿಸಿದ ಕಾಮಗಾರಿಗಳನ್ನು ಮಾತ್ರ ಈ ಪ್ರಕ್ರಿಯೆಯಿಂದ ಹೊರಗಿಡಲಾಗುತ್ತಿದೆ. ಸಮಿತಿಗಳು ತಮಗೆ ನೀಡಲಾದ ವಿಭಾಗಗಳ ಕಾಮಗಾರಿ, ಯೋಜನೆಗಳಿಗೆ ಸಂಬಂಧಿಸಿದ ನಿಗದಿತ ಪರಿಶೀಲನೆ ನಡೆಸಿ 30 ದಿನದ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ.

ಸಮಿತಿಗಳ ವಿವರ: ಘನತ್ಯಾಜ್ಯ ನಿರ್ವಹಣೆ ಕಾಮಗಾರಿ
ಅಧ್ಯಕ್ಷ: ಉಜ್ವಲ್‌ ಕುಮಾರ್‌ ಘೋಷ್‌
ಸದಸ್ಯರು: ಕ್ಯಾ.ದೊಡ್ಡಿಹಾಳ್‌, ಬಸವರಾಜ ಕೋಟಿ, ಟಿ.ಪ್ರಭಾಕರ್‌

ರಸ್ತೆ ಅಭಿವೃದ್ಧಿ, ಒಎಫ್‌ಸಿ ಕೇಬಲ್‌ಗೆ ಅನುಮತಿ
ಅಧ್ಯಕ್ಷ: ಆಮ್ಲನ್‌ ಆದಿತ್ಯ ಬಿಸ್ವಾಸ್‌
ಸದಸ್ಯರು: ಪ್ರಭಾಕರ್‌ ಡಿ.ಹಮ್ಮಿಗೆ, ಜ್ವಾಲೇಂದ್ರ ಕುಮಾರ್‌, ಕೆ.ಮೋಹನ್‌, ಬಿ.ಎನ್‌.ಬಸವರಾಜ್‌ ಶಂಶಿಮಠ್‌, ಎನ್‌.ಎಸ್‌.ಮೋಹನ್‌

ಬೃಹತ್‌ ನೀರುಗಾಲುವೆ, ಕೇಂದ್ರ-ವಲಯ ನಗರ ಯೋಜನೆಯಲ್ಲಿ ನಕ್ಷೆ, ಒಸಿ ಮಂಜೂರಾತಿ
ಅಧ್ಯಕ್ಷ: ಪಿ.ಸಿ.ಜಾಫರ್‌
ಸದಸ್ಯರು: ಎಸ್‌.ಬಿ.ಸಿದ್ದಗಂಗಪ್ಪ, ಎಚ್‌.ಆರ್‌.ರಾಮಕೃಷ್ಣ, ಮಲ್ಲೇಶ್‌

ಕೆರೆಗಳ ಅಭಿವೃದ್ಧಿ ಮತ್ತು ಸ್ಮಾರ್ಚ್‌ಸಿಟಿ, ವಾರ್ಡ್‌ ಕಾಮಗಾರಿಗಳು
ಅಧ್ಯಕ್ಷ: ಡಾ.ಆರ್‌.ವಿಶಾಲ್‌
ಸದಸ್ಯರು: ಎಚ್‌.ಪಿ.ಪ್ರಕಾಶ್‌, ಬೀಸೇಗೌಡ, ಶ್ರೀಕಾಂತ್‌, ಜಿ.ಎಸ್‌.ಗೋಪಿನಾಥ್‌

ದೇಶದಲ್ಲಿಯೇ ಭರವಸೆಗಳ ಈಡೇರಿಸಿದ ಸರ್ಕಾರ ಕಾಂಗ್ರೆಸ್‌: ಟಿ.ಬಿ.ಜಯಚಂದ್ರ

ಏನೇನು ತನಿಖೆ?
- ಘನತ್ಯಾಜ್ಯ ನಿರ್ವಹಣೆ ಕಾಮಗಾರಿ, ರಸ್ತೆಗಳ ನಿರ್ಮಾಣ
- ಒಎಫ್‌ಸಿ ಕೇಬಲ್‌ಗೆ ಅನುಮತಿ, ನೀರುಗಾಲುವೆ ನಿರ್ಮಾಣ
- ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರಗಳ ವಿತರಣೆ
- ಕೆರೆಗಳ ಅಭಿವೃದ್ಧಿ, ಸ್ಮಾರ್ಚ್‌ಸಿಟಿ ಯೋಜನೆಯ ಕಾಮಗಾರಿ
- ನಿಯಮ ಉಲ್ಲಂಘಿಸಿ ಟೆಂಡರ್‌, ಕೆಲಸ ಮಾಡದೆ ಬಿಲ್‌ ಪಾವತಿ
- ರಾಜ್ಯ, ಕೇಂದ್ರ, ಬಿಬಿಎಂಪಿ ಅನುದಾನದ ಎಲ್ಲ ಕಾಮಗಾರಿಗಳು