Asianet Suvarna News Asianet Suvarna News

ಬೆಂಗಳೂರಿನಲ್ಲಿ ಮುಂದುವರಿದ ಮಳೆರಾಯನ ಅಬ್ಬರ: ಮತ್ತೆ 20ಕ್ಕೂ ಅಧಿಕ ಮರ ಧರೆಗೆ

ನಗರದಲ್ಲಿ ಮಂಗಳವಾರ ರಾತ್ರಿ ಮತ್ತೆ ಮಳೆರಾಯ ಅಬ್ಬರಿಸಿದ್ದು, ಬಿಟಿಎಂ ಲೇಔಟ್‌ ಸೇರಿದಂತೆ ನಗರದ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ. ಕಳೆದ ನಾಲ್ಕು ದಿನಗಳಿಂದ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. 

Continued Rain in Bengaluru Again more than 20 of trees have fallen gvd
Author
First Published May 24, 2023, 7:02 AM IST

ಬೆಂಗಳೂರು (ಮೇ.24): ನಗರದಲ್ಲಿ ಮಂಗಳವಾರ ರಾತ್ರಿ ಮತ್ತೆ ಮಳೆರಾಯ ಅಬ್ಬರಿಸಿದ್ದು, ಬಿಟಿಎಂ ಲೇಔಟ್‌ ಸೇರಿದಂತೆ ನಗರದ ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ. ಕಳೆದ ನಾಲ್ಕು ದಿನಗಳಿಂದ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಂಗಳವಾರವೂ ನಗರದಲ್ಲಿ ಗುಡುಗು, ಗಾಳಿ ಸಹಿತ ಕೆಲಕಾಲ ಭಾರೀ ಮಳೆ ಸುರಿಯಿತು. 

ಮಳೆಯಿಂದ ಬಿಟಿಎಂ ಲೇಔಟ್‌ನ 2ನೇ ಹಂತದ ಪ್ರಮುಖ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ನಿಂತು ಸುತ್ತಮುತ್ತಲಿನ ಅನೇಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮನೆಯಲ್ಲಿರುವ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಜನರು ಬಿಬಿಎಂಪಿಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ತುಂಬಾ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೂ ಸಮಸ್ಯೆ ಉಂಟಾಯಿತು.

ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಫುಲ್‌ ಚಾರ್ಜ್‌!

ಟ್ರಾಫಿಕ್‌ ಜಾಮ್‌: ಮಳೆಯಿಂದ ಶಿವಾನಂದ ರೈಲ್ವೆ ಅಂಡರ್‌ ಪಾಸ್‌, ಓಕಳಿಪುರ ಅಂಡರ್‌ ಪಾಸ್‌, ಅನಂದರಾವ್‌ ವೃತ್ತ, ನೃಪತುಂಗ ರಸ್ತೆ, ಕೆ.ಆರ್‌.ರಸ್ತೆ, ಮಜೆಸ್ಟಿಕ್‌, ಮಲ್ಲೇಶ್ವರ, ಶಾಂತಿನಗರದ ಡಬ್ಬಲ್‌ ರಸ್ತೆ, ಲಾಲ್‌ಬಾಗ್‌ ರಸ್ತೆ, ಎಂ.ಜಿ ರಸ್ತೆ, ಚಾಮರಾಜಪೇಟೆ ಮುಖ್ಯ ರಸ್ತೆ ಸೇರಿದಂತೆ ನಗರದ ಹಲವು ಕಡೆ ಮಳೆ ನೀರು ನಿಂತುಕೊಂಡಿತ್ತು. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವುದಕ್ಕೆ ಸಿದ್ಧರಾಗಿದ್ದ ಸಾರ್ವಜನಿಕರು ಮಳೆಯಿಂದ ಉಂಟಾದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದರು. ಶಿವಾನಂದ ಫ್ಲೈ ಓವರ್‌ ಹಾಗೂ ಪಕ್ಕದ ರಸ್ತೆಯಲ್ಲಿ ಸುಮಾರು 1 ಕಿ.ಮೀ ವರೆಗೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಶೇಷಾದ್ರಿ ರಸ್ತೆ, ಅರಮನೆ ರಸ್ತೆ, ಬಳ್ಳಾರಿ ರಸ್ತೆ, ಸದಾಶಿವನಗರದ ಕಾವೇರಿ ಜಂಕ್ಷನ್‌ ಮೇಖ್ರಿ ವೃತ್ತದಲ್ಲಿಯೂ ಸಂಚಾರಕ್ಕೆ ಅಡ್ಡಿಯಾಗಿತ್ತು. ಕಳೆದ ನಾಲ್ಕು ದಿನದ ಮಳೆಗೆ 800ಕ್ಕೂ ಅಧಿಕ ಮರ ಹಾಗೂ ಮರದ ರಂಬೆ ಕೊಂಬೆಗಳು ಧರೆಗುರುಳಿವೆ. ಮಂಗಳವಾರದ ಮಳೆಗೆ ಜೆ.ಪಿ.ನಗರದಲ್ಲಿ ಎರಡು ಮರ, ಆರ್‌ಟಿ ನಗರ, ವಸಂತನಗರ, ಉತ್ತರಹಳ್ಳಿ, ಜಯನಗರ ಈಸ್ಟ್‌ ಸೇರಿದಂತೆ ನಗರದ ವಿವಿಧ ಭಾಗದಲ್ಲಿ 20ಕ್ಕೂ ಅಧಿಕ ಮರ ಹಾಗು ಮರದ ರಂಬೆ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ.

ಪ್ರಮುಖ ಅಂಡರ್‌ ಪಾಸ್‌ಗೆ ಬ್ಯಾರಿಕೇಡ್‌: ಮಂಗಳವಾರ ಮಳೆ ಆರಂಭಗೊಳ್ಳುತ್ತಿದಂತೆ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌, ಲೀ ಮೆರಿಡಿಯನ್‌ ಹಾಗೂ ಕಾವೇರಿ ಜಂಕ್ಷನ್‌ ಅಂಡರ್‌ ಪಾಸ್‌ಗೆ ಪೊಲೀಸರು ಬ್ಯಾರಿಕೇಡ್‌ ಅಳವಡಿಕೆ ಮಾಡಿ ವಾಹನ ಸಂಚಾರ ನಿಷೇದಿಸಲಾಗಿದೆ ಎಂಬ ಫಲಕವನ್ನು ಅಳವಡಿಕೆ ಮಾಡಿದರು.

ಕೆ.ಆರ್‌. ಸರ್ಕಲ್‌ ಅಂಡರ್‌ ಪಾಸ್‌ನಲ್ಲಿ ನೀರಿಲ್ಲ: ದುರ್ಘಟನೆ ನಡೆದ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಕೆ.ಆರ್‌.ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ನೀರು ಹರಿದು ಹೊರ ಹೋಗುವ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದಾರೆ. ಹೀಗಾಗಿ, ಮಂಗಳವಾರ ಭಾರೀ ಪ್ರಮಾಣದ ಮಳೆ ಸುರಿದರೂ ಅಂಡರ್‌ ಪಾಸ್‌ನಲ್ಲಿ ನೀರು ನಿಂತುಕೊಳ್ಳದೇ ಹರಿದು ಹೊರ ಹೋಗುತ್ತಿತ್ತು.

ಪುಟ್ಟೇನಹಳ್ಳಿಯಲ್ಲಿ 5.5 ಸೆಂ.ಮೀ ಮಳೆ: ಮಂಗಳವಾರ ರಾತ್ರಿ 10.30ರ ವೇಳೆಗೆ ಪುಟ್ಟೇನಹಳ್ಳಿಯ ದೊರೆಸಾನಿ ಪಾಳ್ಯದಲ್ಲಿ ಅತಿ ಹೆಚ್ಚು 5.5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬಿಳೇಕಳ್ಳಿಯಲ್ಲಿ 5.2, ಕೊಡಿಗೆಹಳ್ಳಿ 4.8, ಕೆಂಗೇರಿ 4.2, ವಿದ್ಯಾಪೀಠ 3.8,ಕುಮಾರಸ್ವಾಮಿ ಲೇಔಟ್‌ 2.5, ಕೋಣನಕುಂಟೆ 2.2, ರಾಜರಾಜೇಶ್ವರಿ ನಗರ ಹಾಗೂ ಬೊಮ್ಮನಹಳ್ಳಿಯಲ್ಲಿ ತಲಾ 1.8 ಸೆಂ.ಮೀ ಮಳೆಯಾದ ವರದಿಯಾಗಿದೆ.

ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಇದು ಸೂಚನೆ ಅಲ್ಲ, ಎಚ್ಚರಿಕೆ: ಸಿದ್ದರಾಮಯ್ಯ

ಮಳೆ ಅವಾಂತರಕ್ಕೆ ಮತ್ತೊಂದು ಬಲಿ: ರಾಜಧಾನಿಯಲ್ಲಿ ಮಳೆ ಸೃಷ್ಠಿಸಿದ ಅವಾಂತರಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಭಾರಿ ಮಳೆ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ರಾಮನಗರದ ನಿವಾಸಿ ಫಕ್ರುದ್ದೀನ್‌ (48) ಮೃತ ದುರ್ದೈವಿ. ಕೆಲಸ ಮುಗಿಸಿಕೊಂಡು ನೈಸ್‌ ರಸ್ತೆ ಮಾರ್ಗವಾಗಿ ಅವರು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಕಾಚೋಹಳ್ಳಿ ಅಂಡರ್‌ ಪಾಸ್‌ ಬ್ರಿಡ್ಜ್‌ ಸಮೀಪ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ನೆಲಮಂಗಲದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಫಕ್ರುದ್ದೀನ್‌ ಕೆಲಸ ಮಾಡುತ್ತಿದ್ದರು. ಎಂದಿನಂತೆ ಕೆಲಸ ಮುಗಿಸಿಕೊಂಡು ನೈಸ್‌ ರಸ್ತೆ ಮೂಲಕ ರಾಮನಗರಕ್ಕೆ ಬೈಕ್‌ನಲ್ಲಿ ಸೋಮವಾರ ರಾತ್ರಿ ಅವರು ತೆರಳುತ್ತಿದ್ದರು. ಆ ವೇಳೆ ಭಾರಿ ಮಳೆ ಬೀಳುತ್ತಿದ್ದರಿಂದ ನಿಯಂತ್ರಣ ತಪ್ಪಿ ರಸ್ತೆಗುರುಳಿದಿದ್ದಾರೆ. ಘಟನೆಯಲ್ಲಿ ತಲೆಗೆ ತೀವ್ರವಾಗಿ ಪೆಟ್ಟಾಗಿ ಫ್ರಕ್ರುದ್ದೀನ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios