ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಇದು ಸೂಚನೆ ಅಲ್ಲ, ಎಚ್ಚರಿಕೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಮುಂಗಾರು ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಉಂಟಾಗುವ ಹಾನಿ, ಬೆಳೆ ಹಾನಿ ತಡೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Be careful about rain its a warning Says CM Siddaramaiah gvd

ಬೆಂಗಳೂರು (ಮೇ.24): ‘ರಾಜ್ಯದಲ್ಲಿ ಮುಂಗಾರು ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಉಂಟಾಗುವ ಹಾನಿ, ಬೆಳೆ ಹಾನಿ ತಡೆಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಜತೆಗೆ ರೈತರಿಗೆ ಬೇಕಿರುವ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳು ಬೇಡಿಕೆಗಿಂತ ಹೆಚ್ಚು ದಾಸ್ತಾನು ಇಡಬೇಕು. ಇದು ಕೇವಲ ಸೂಚನೆಯಲ್ಲ ಎಚ್ಚರಿಕೆ. ನಿರ್ಲಕ್ಷ್ಯ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಉಪ ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ವಿವಿಧ ಇಲಾಖೆಗಳೊಂದಿಗೆ ಸರಣಿ ಸಭೆ ನಡೆಸಿದ ಅವರು ಮಂಗಳವಾರ ಸಂಜೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಈ ವೇಳೆ ರಾಜ್ಯದ ಕೆಲವು ಭಾಗದಲ್ಲಿ ಮಳೆ ಪ್ರಾರಂಭವಾಗಿದ್ದು, ಬಿತ್ತನೆ ಪ್ರಾರಂಭವಾಗಿದೆ. ಏಪ್ರಿಲ್‌ನಿಂದ ಈಚೆಗೆ ಸುರಿದಿರುವ ಪೂರ್ವ ಮುಂಗಾರು ಅವಧಿಯಲ್ಲಿ ಕೆಲವೆಡೆ ಸಿಡಿಲು, ಮರ ಬಿದ್ದು ಪ್ರಾಣ ಹಾನಿ ಸಂಭವಿಸಿದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಶೇ.10 ರಷ್ಟುಜಾಸ್ತಿಯಾಗಿದ್ದು, ವಿವಿಧ ಘಟನೆಗಳಲ್ಲಿ 52 ಮಂದಿ ಸಾವನ್ನಪ್ಪಿದ್ದಾರೆ. 

ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ: ಸಚಿವ ಎಂ.ಬಿ.ಪಾಟೀಲ್‌

331 ಜಾನುವಾರುಗಳ ಜೀವ ಹಾನಿಯಾಗಿದೆ. 22 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, 814 ಮನೆಗಳಿಗೆ ಹಾನಿಯಾಗಿದ್ದು ಕೂಡಲೇ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು. ಇನ್ನು ಮುಂಗಾರು ಮಳೆ ಜೂ.9ಕ್ಕೆ ಶುರುವಾಗಲಿದೆ. ಯಾವುದೇ ಅನಾಹುತ ಸಂಭವಿಸಿದರೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ಅನುದಾನ ಇಲ್ಲದಿದ್ದರೆ ಸರ್ಕಾರದಿಂದ ಕೇಳಿ ಪಡೆಯಿರಿ. ಜತೆಗೆ ಬಿತ್ತನೆ ಚಟುವಟಿಕೆಗೆ ಯಾವುದೇ ಲೋಪವಾಗದಂತೆ ಕೃಷಿ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು ಎಂದು ತಿಳಿದುಬಂದಿದೆ.

ನಿರ್ಲಕ್ಷ್ಯ ಮಾಡಿದರೆ ಕಟ್ಟುನಿಟ್ಟಿನ ಕ್ರಮ: ಮಳೆಯಿಂದ ಮರ ಬಿದ್ದರೆ ಕೂಡಲೇ ತೆರವುಗೊಳಿಸಬೇಕು. ವಿದ್ಯುತ್‌ ಕಂಬ, ಟ್ರಾನ್‌ಫಾರ್ಮರ್‌, ಸೇತುವೆ, ಶಾಲಾ ಕೊಠಡಿ ಹೀಗೆ ಯಾವುದೇ ಸಮಸ್ಯೆಯಾದರೂ ಕೂಡಲೇ ಸರಿಪಡಿಸಬೇಕು. ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು. ಸ್ಥಳಕ್ಕೆ ಹೋಗಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೆ ಕರ್ತವ್ಯ ಲೋಪ ಆಗಬಾರದು. ಬೇಜವಾಬ್ದಾರಿತನದಿಂದ ಅನಾಹುತಗಳಾದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ. ಸಂಬಂಧಪಟ್ಟಅಧಿಕಾರಿಗಳನ್ನೇ ಹೊಣೆ ಮಾಡುತ್ತದೆ ಎಂದು ಹೇಳಿದರು.

ಹಿಂದಿನ ಸರ್ಕಾರದ ಎಲ್ಲಾ ಕಾಮಗಾರಿಗೆ ಸಿದ್ದು ಬ್ರೇಕ್‌: ಇಲಾಖೆಗಳಿಗೆ ಹಣ ಬಿಡುಗಡೆ, ಪಾವತಿಗೂ ತಡೆ

ನೆಟೆ ರೋಗಕ್ಕೆ ಪರಿಹಾರ ನೀಡಲು ಸೂಚಿಸಿದ್ದೇನೆ: ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳ ಬಳಿ 540 ಕೋಟಿ ರು. ಇದೆ. ವಿಪತ್ತು ಪರಿಹಾರ ನಿಧಿಯಲ್ಲಿ 330 ಕೋಟಿ ರು. ಇದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ತೊಗರಿಗೆ ನೆಟೆ ರೋಗ ಬಂದಿತ್ತು. ಒಂದು ಹೆಕ್ಟೇರ್‌ಗೆ 10 ಸಾವಿರ ರು. ನೀಡುವುದಾಗಿ ಹಿಂದಿನ ಸರ್ಕಾರ ಘೋಷಿಸಿತ್ತು. ಆದರೆ ಕೊಟ್ಟಿಲ್ಲ ಹೀಗಾಗಿ ಕೂಡಲೇ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios