Asianet Suvarna News Asianet Suvarna News

ಅರ್ಕಾವತಿ ಎಡ-ಬಲ ದಂಡೆಯಲ್ಲಿ ವಾಕ್ಪಾತ್‌ ನಿರ್ಮಾಣ: ರಾಜ್ಯ ಸರ್ಕಾರದಿಂದ 126 ಕೋಟಿ!

ಒಳ ಚರಂಡಿ ನೀರಿನಿಂದ ಕಲುಷಿತಗೊಂಡಿರುವ ಹಾಗೂ ಲಾಳದ ಕಡ್ಡಿ, ಜೊಂಡು ಮುಂತಾದ ಬೇಡದ ಗಿಡಗಳು ಸೊಂಪಾಗಿ ಬೆಳೆದು ವಿಷ ಜಂತುಗಳ ಆವಾಸ ಸ್ಥಾನವಾಗಿ ಪರಿಣಮಿಸಿರುವ ನಗರದ ಮಧ್ಯಭಾಗದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿಯ ಎಡ - ಬಲ ದಂಡೆಗೆ ಹೈಟೆಕ್‌ ಟಚ್ ನೀಡಿ ಪ್ರವಾಸಿ ತಾಣವನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

 

 

Construction of walkway on left right of Arkavati at Ramanagara gvd
Author
First Published Oct 29, 2023, 8:22 PM IST

ಎಂ.ಅಫ್ರೋಜ್ ಖಾನ್

ರಾಮನಗರ (ಅ.29): ಒಳ ಚರಂಡಿ ನೀರಿನಿಂದ ಕಲುಷಿತಗೊಂಡಿರುವ ಹಾಗೂ ಲಾಳದ ಕಡ್ಡಿ, ಜೊಂಡು ಮುಂತಾದ ಬೇಡದ ಗಿಡಗಳು ಸೊಂಪಾಗಿ ಬೆಳೆದು ವಿಷ ಜಂತುಗಳ ಆವಾಸ ಸ್ಥಾನವಾಗಿ ಪರಿಣಮಿಸಿರುವ ನಗರದ ಮಧ್ಯಭಾಗದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿಯ ಎಡ - ಬಲ ದಂಡೆಗೆ ಹೈಟೆಕ್‌ ಟಚ್ ನೀಡಿ ಪ್ರವಾಸಿ ತಾಣವನ್ನಾಗಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅರ್ಕಾವತಿ ನದಿಯು ನಗರದ ಮಧ್ಯ ಭಾಗದಲ್ಲಿ ಸುಮಾರು 4 ಕಿ.ಮೀ. ಉದ್ದ ಹರಿದು ಹೋಗುತ್ತದೆ. ಇದರಲ್ಲಿ ನದಿಯ ಎಡ ಮತ್ತು ಬಲ ದಂಡೆಯಲ್ಲಿ 3.6 ಕಿಲೋ ಮೀಟರ್ ಉದ್ದ ವಾಕಿಂಗ್‌ ಪಾತ್ ನಿರ್ಮಾಣ ಮಾಡಿ ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿ ಮಾಡಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 126 ಕೋಟಿ ರುಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ.

ಅರ್ಕಾವತಿ ನದಿ ದಡ ಅಭಿವೃದ್ಧಿಗೆ ಸಂಸದ ಡಿ.ಕೆ.ಸುರೇಶ್‌ ಮತ್ತು ಶಾಸಕ ಇಕ್ಬಾಲ್ ಹುಸೇನ್ ರವರು ವಿಶೇಷ ಕಾಳಜಿ ವಹಿಸಿದ್ದು, ಕಾವೇರಿ ನೀರಾವರಿ ನಿಗಮದ ಮೂಲಕ ಅರ್ಕಾವತಿ ನದಿ ಎಡ - ಬಲ ದಂಡೆಯಲ್ಲಿ ವಾಕಿಂಕ್‌ ಪಾತ್‌ ನಿರ್ಮಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದಕ್ಕೆ ರಾಜ್ಯ ಸರ್ಕಾರವೂ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಹರಿಯುವ ಅರ್ಕಾವತಿ ನದಿ ದಡವನ್ನು ಆಕರ್ಷಕ ಪ್ರವಾಸಿ ಕೇಂದ್ರವನ್ನಾಗಿಸುವ ಯೋಜನೆ ಸಿದ್ಧಗೊಂಡಿದೆ. ಈ ಯೋಜನೆ ಪ್ರಕಾರ ನಗರದ ಮೇಧರ ಬೀದಿ - ವಿವೇಕಾನಂದ ಬಡಾವಣೆ (ಬೆಂ-ಮೈ ಹೆದ್ದಾರಿ) ನಡುವೆ ಅರ್ಕಾವತಿ ನದಿಗೆ ಅಡ್ಡಲಾಗಿರುವ ನಿರ್ಮಿಸಿರುವ ಸೇತುವೆ ಬಳಿಯಿಂದ ಬಾಲಗೇರಿ ಪ್ರದೇಶದಲ್ಲಿರುವ ಸೇತುವೆವರೆಗಿನ ಎಡ - ಬಲ ದಂಡೆಯಲ್ಲಿ ಸುಂದರವಾದ ವಾಕಿಂಗ್‌ ಪಾತ್ ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಒತ್ತುವರಿ ತೆರವು ಕಾರ್ಯಾಚರಣೆಯೂ ನಡೆಯಲಿದೆ.

ರಾಮನಗರ ಜಿಲ್ಲೆ ಮರುನಾಮಕರಣ ನನಗೆ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ

ಯಾವುದೇ ನಗರದ ಮದ್ಯ ಭಾಗದಲ್ಲಿ ನದಿಗಳು ಹರಿದರೆ ಆ ನಗರಗಳು ಅಭಿವೃದ್ಧಿ ಹೊಂದುವ ಜತೆಗೆ ಪ್ರಸಿದ್ಧಿಯನ್ನೂ ಪಡೆಯುತ್ತವೆ ಎನ್ನುವ ಮಾತಿದೆ. ಆದರೆ, ಅರ್ಕಾವತಿ ನದಿ ವಿಚಾರದಲ್ಲಿ ರಾಮನಗರದ ಪಾಲಿಗೆ ಇದು ಸುಳ್ಳಾಗಿದೆ. ಹಾಗಾಗಿ 126 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಅರ್ಕಾವತಿ ನದಿಯನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿಸುವ ಪ್ರಯತ್ನ ನಡೆದಿದೆ. ಈ ಮೊದಲು 2018ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 250 ಕೋಟಿ ರುಪಾಯಿ ವೆಚ್ಚದಲ್ಲಿ ಅರ್ಕಾವತಿ ನದಿ ದಡವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನದಿ ಮುಖಿ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದರು. ಇದಕ್ಕಾಗಿ ಕಾವೇರಿ ನೀರಾವರಿ ನಿಗಮ ಹಾಗೂ ಸ್ಥಳೀಯ ಸಂಸ್ಥೆ ಜಂಟಿಯಾಗಿ ಯೋಜನೆ ಕೂಡ ರೂಪಿಸಿದ್ದರು.

ಅಧಿಕಾರಿಗಳು ಗುಜರಾತಿನ ಸಾಬರಮತಿ ಆಶ್ರಮ ಹಾಗೂ ಶಿವಮೊಗ್ಗ ನಗರದಲ್ಲಿ ಅನುಷ್ಟಾನದ ಹಂತದಲ್ಲಿದ್ದ ತುಂಗಾ ನದಿ ಮುಖಿ ಅಭಿವೃದ್ಧಿ ಯೋಜನೆ ಮಾದರಿಗಳನ್ನು ಅಧ್ಯಯನ ಮಾಡಿ ಯೋಜನಾ ವರದಿ ಸಿದ್ದ ಪಡಿಸಿದ್ದರು. ಕುಮಾರಸ್ವಾಮಿರವರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಅದು ನೆನೆಗುದಿಗೆ ಬಿದ್ದಿತು. ಆದರೀಗ ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರ ಆಶಯದಂತೆ ವಾಕಿಂಗ್‌ ಪಾತ್ ನಿರ್ಮಿಸುವ ಯೋಜನೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿರವರು ರಾಜ್ಯಸರ್ಕಾರದಿಂದ ಅನುಮೋದನೆ ಕೊಡಿಸಿದ್ದಾರೆ ಎನ್ನಲಾಗಿದೆ.

ನದಿ ದಡದಲ್ಲಿ ಏನೇನು ಇರಲಿದೆ?: ವ್ಯಾಪ್ತಿಯಲ್ಲಿ ನದಿಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದು. ಎರಡೂ ದಡದಲ್ಲಿ ವಾಕಿಂಗ್‌ ಪಾತ್ , ಉದ್ಯಾನವನ, ಒಳಚರಂಡಿ ನೀರು ಹರಿಯಲು ಪ್ರತ್ಯೇಕ ಡ್ರೇನ್‌ ವ್ಯವಸ್ಥಕಾರಾಂಜಿ, ಅತ್ಯಾಧುನಿಕ ವಿದ್ಯುತ್ ದೀಪಾಲಂಕಾರ, ಯೋಗ ಕೇಂದ್ರ, ಜಿಮ್‌ , ಪಾರ್ಕಿಂಗ್ ವ್ಯವಸ್ಥೆ, ಮಕ್ಕಳ ಆಟಿಕೆಗಳು, ಬೋಟಿಂಗ್‌ ವ್ಯವಸ್ಥೆ ಕಲ್ಪಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದು.

ರಾಮನಗರ ಜಿಲ್ಲೆ ರದ್ದಾಗುವುದರಿಂದ ನಷ್ಟ ಆಗುವುದಿಲ್ಲ: ಮಾಜಿ ಶಾಸಕ ಲಿಂಗಪ್ಪ

ಅರ್ಕಾವತಿ ನದಿ ನಗರದ ಮಧ್ಯ ಭಾಗದಲ್ಲಿ ಹರಿಯುತ್ತಿರುವ ಕಾರಣ ಉತ್ತಮ ಪ್ರವಾಸಿ ತಾಣವನ್ನಾಗಿ ರೂಪಿಸಲು ಅವಕಾಶ ಇದೆ. ಸಂಸದ ಡಿ.ಕೆ.ಸುರೇಶ್ ರವರು ನದಿಯ ಎಡ - ಬಲ ದಡದಲ್ಲಿ ವಾಕಿಂಗ್ ಪಾತ್ ನಿರ್ಮಿಸಲು ಯೋಜನೆ ರೂಪಿಸಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಬಫರ್‌ ಜೋನ್‌ ಜೊತೆಗೆ ಒತ್ತುವರಿ ತೆರವುಗೊಳಿಸಿ ವಾಕಿಂಗ್ ಪಾತ್‌ ನಿರ್ಮಿಸಲಾಗುವುದು.
- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.

Follow Us:
Download App:
  • android
  • ios