ರಾಮನಗರ ಜಿಲ್ಲೆ ಮರುನಾಮಕರಣ ನನಗೆ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವುದರಿಂದ ಯಾವುದೇ ನಷ್ಟ ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು.
ರಾಮನಗರ (ಅ.28): ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವುದರಿಂದ ಯಾವುದೇ ನಷ್ಟ ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಸಮರ್ಥಿಸಿಕೊಂಡರು. ಮಾಗಡಿಯ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆ ಹೆಸರನ್ನು ಬದಲಾವಣೆ ಮಾಡುವುದರಿಂದ ಏನು ತೊಂದರೆ ಆಗುವುದಿಲ್ಲ ಎಂದರು.
ಸಿಎಂ, ಡಿಸಿಎಂ ಸೇರಿ ಎಲ್ಲಾ ಸಚಿವರು ಹಣ ತಿಂದಿಲ್ಲ ಎಂದು ಪ್ರಮಾಣ ಮಾಡಲಿ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಹೇಳಿಕೆಗೆ ಮಾನ್ಯತೆ ನೀಡಬೇಕಿಲ್ಲ. ಈ ಆಣೆ-ಪ್ರಮಾಣದ ಬಗ್ಗೆ ನನಗೆ ನಂಬಿಕೆಯೂ ಇಲ್ಲ ಎಂದರು. ಬೆಂಗಳೂರಿನ ಕಸವನ್ನು ರಾಮನಗರದಲ್ಲಿ ವಿಲೇವಾರಿ ಮಾಡುವ ವಿಚಾರ ನನಗೆ ಗೊತ್ತೇ ಇಲ್ಲ. ಈ ಬಗ್ಗೆ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ನನಗೆ ಮಾಹಿತಿಯೂ ಇಲ್ಲ. ನನ್ನ ಬಳಿ ಚರ್ಚೆ ಮಾಡದಿರುವು ವಿಚಾರವನ್ನು ಹೇಗೆ ಮಾತನಾಡಿ. ಮಾಧ್ಯಮಗಳಲ್ಲಿ ಬಂದಿರುವುದು ಊಹಾಪೋಹ ಇರಬಹುದು ಎಂದು ರಾಮಲಿಂಗಾರೆಡ್ಡಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರಿಗೆ ರಾಮನಗರವನ್ನು ಸೇರಿಸಿದರೆ ರೈತರ ಕೃಷಿಭೂಮಿಗೆ ಸಂಚಕಾರ: ಅಶ್ವತ್ಥ ನಾರಾಯಣ
ಮರುನಾಮಕರಣ ನನಗೆ ಗೊತ್ತಿಲ್ಲ: ರಾಮನಗರ ಜಿಲ್ಲೆಯ ಮರುನಾಮಕರಣದ ವಿಚಾರ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿಸಿದುಕೊಂಡಿದ್ದೇನೆ. ಡಿಸಿಎಂ ಡಿ.ಕೆ.ಶಿವಕುಮಾರ್ ರವರು ನನಗೆ ವೈಯಕ್ತಿಕವಾಗಿ ಸಿಕ್ಕಿಲ್ಲ. ಚರ್ಚೆಯನ್ನೂ ಮಾಡಿಲ್ಲ. ಆದರೆ, ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಹೆಸರು ಬದಲಾವಣೆ ಮಾಡಿದಾಕ್ಷಣಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಜತೆಗೆ ಜಿಲ್ಲೆಗೆ ಹೆಚ್ಚಿನ ಅನುದಾನ, ಮೂಲ ಸೌಕರ್ಯಗಳು ಸಿಗಬೇಕು. ಆ ಉದ್ದೇಶದಿಂದ ಬದಲಾವಣೆ ಆದರೆ ತೊಂದರೆ ಇಲ್ಲ ಎಂದು ತಿಳಿಸಿದರು.
ಜನ ತೀರ್ಮಾನಿಸುತ್ತಾರೆ: ‘ಚುನಾವಣೆ ಬಂದಾಗ ಯಾವ ಪಕ್ಷ ಅಧಿಕಾರದಲ್ಲಿರಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ಕಳೆದ ಐದು ತಿಂಗಳ ಹಿಂದೆ ಜನ ನಿರ್ಧಾರ ಮಾಡಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಸರ್ಕಾರ ಇದ್ದಾಗ ಅವರೇನು ಮಾಡಿದ್ದಾರೆ ಅಂತ ಗೊತ್ತಿದೆ. ನಮ್ಮ ಮೇಲೆ ಆರೋಪ ಮಾಡುವ ಬದಲು ಲೋಕಾಯುಕ್ತಕ್ಕೆ ದೂರು ಕೊಡಲಿ. ಇಲ್ಲ ಯಾವುದೇ ತನಿಖೆಗೆ ಒತ್ತಾಯ ಮಾಡಲಿ’ ಎಂದು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ನೀವು ಸತ್ಯ ಹರಿಶ್ಚಂದ್ರರಾದರೆ ಆಣೆ ಮಾಡಿ: ‘ಹೌದಪ್ಪ ನಾವೆಲ್ಲರು ಕಳ್ಳರು. ನಾವೆಲ್ಲ ದುಡ್ಡು ತಿಂದಿದ್ದೀವಿ ಅಂತ ಒಪ್ಪಿಕೊಂಡಿದ್ದೀವಿ. ನೀವು ದುಡ್ಡು ತಿಂದಿಲ್ಲ ಅಲ್ವಾ. ನೀವು ಸತ್ಯ ಹರಿಶ್ಚಂದ್ರ ಆಗಿದ್ದರೆ ದುಡ್ಡೆ ತಿಂದಿಲ್ಲ ಅಂತ ಆಣೆ ಮಾಡಿ ನೋಡೋಣ’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ಎಲ್ಲರನ್ನು ಆಣೆ ಪ್ರಮಾಣಕ್ಕೆ ಕರೆಸುತ್ತೇನೆ. ನೀವು ದೇವೇಗೌಡ ಅವರನ್ನು ಆಣೆ ಮಾಡಲು ಕರೆಸುತ್ತೀರಾ’ ಎಂದು ಪ್ರಶ್ನಿಸಿದರು.
ರಾಮನಗರ ಜಿಲ್ಲೆ ರದ್ದಾಗುವುದರಿಂದ ನಷ್ಟ ಆಗುವುದಿಲ್ಲ: ಮಾಜಿ ಶಾಸಕ ಲಿಂಗಪ್ಪ
‘ನಾವು ನೀವು ತಿಂದೇ ಇಲ್ಲ ಅನ್ನೊದಾದರೆ ಆಣೆ ಮಾಡಿ ಅಂತ ಹೇಳಿರೋದು. ಅದನ್ನು ಬಿಟ್ಟು ಅವರನ್ನು ಕರೀರಿ, ಇವರನ್ನು ಕರೀರಿ, ನರೇಂದ್ರ ಮೋದಿನ ಕರೀರಿ ಅಂತ ಹೇಳೋಕೆ ಆಗುತ್ತಾ. ಬಾಲಿಶವಾದ ಹೇಳಿಕೆಗಳಿಗೆ ಉತ್ತರ ಕೊಡಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಗಳು ಹೀಗೆಲ್ಲ ಮಾತಾಡಬಾರದು. ಯಾವ ಸಂದರ್ಭದಲ್ಲಿ ಏನು ಮಾತಾಡಬೇಕು ಅಂತ ಗೊತ್ತಾಗಲ್ವಾ’ ಎಂದು ಬಾಲಕೃಷ್ಣ ತಿರುಗೇಟು ನೀಡಿದರು.