*    ಸುಂಕೇರಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಮುಂದಾದ ಕಾರವಾರ ನಗರಸಭೆ*   ಕಾಳಿ ನದಿಗೆ ಮಣ್ಣು ಹಾಗೂ ಕಸದ ರಾಶಿ ಹಾಕಿ ಕಾರವಾರ ನಗರಸಭೆ*   ಪಾರ್ಕ್ ನಿರ್ಮಾಣದಿಂದ ಸ್ಥಳೀಯ ಮೀನುಗಾರರಿಗೂ ತಪ್ಪದ ಸಂಕಷ್ಟ  

ವರದಿ: ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಮೇ.26): ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ವ ಹಿತಾಸಕ್ತಿಯಿಂದ ನಡೆಸುವ ಕೆಲವೊಂದು ಕಾಮಗಾರಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಬಿಡುತ್ತವೆ. ಜನಪರ ಕಾರ್ಯ ನಡೆಸೋ ಬದಲು ಜನರ ವಿರೋಧದ ನಡುವೆಯೇ ಕಾಮಗಾರಿ ಕೈಗೊಳ್ಳಲು ಮುಂದಾಗುತ್ತಾರೆ. ಈ ಮೂಲಕ ಜನಸಾಮಾನ್ಯರ ಆಕ್ರೋಶಕ್ಕೆ ತುತ್ತಾಗುತ್ತಾರೆ. ಅಂತದ್ದೇ ಒಂದು ಎಡವಟ್ಟಿನ ಕಾಮಗಾರಿಗೆ ಕಾರವಾರದ ನಗರ ಸಭೆ ಮುಂದಾಗಿದ್ದು,‌ ಈ ಮೂಲಕ ಸಿಆರ್‌ಝಡ್ ನಿಯಮ ಉಲ್ಲಂಘಸಿ ಪಾರ್ಕ್ ನಿರ್ಮಾಣ ಮಾಡ ಹೊರಟಿದ್ದಲ್ಲದೇ, ಮೀನುಗಾರರ ಹೊಟ್ಟೆ ಮೇಲೆ ಹೊಡೆಯುತ್ತಿದೆ. 

ಸಿಆರ್‌ಝಡ್ ನಿಯಮ ಉಲ್ಲಂಘಿಸಿ ನಗರಸಭೆಯಿಂದ ಪಾರ್ಕ್ ನಿರ್ಮಾಣ 

ಹೌದು, ಸಾರ್ವಜನಿಕರಿಗಾಗಿ ನಿರ್ಮಾಣ ಮಾಡೋ ಕಾಮಗಾರಿಯನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರಸಭೆ ಸಾರ್ವಜನಿಕರ ವಿರೋಧದ ನಡುವೆಯೇ ನಿರ್ಮಾಣ ಮಾಡಲು ಮುಂದಾಗಿದೆ. ಕಾರವಾರ ತಾಲೂಕಿನ ಸುಂಕೇರಿಯ ಕಾಳಿ ನದಿ ತಟದಲ್ಲಿ ಕಾರವಾರ ನಗರಸಭೆ ಪಾರ್ಕ್ ನಿರ್ಮಾಣ ಮಾಡಲು ತಯಾರಿ ನಡೆಸುತ್ತಿದೆ. ಇದರಿಂದಾಗಿ ಸ್ಥಳೀಯ ಮೀನುಗಾರರ ಬದುಕು ಸಂಪೂರ್ಣ ದುಸ್ಥಿತಿಗೆ ಬಂದಂತಾಗಿದ್ದು, ಕಾಳಿ ನದಿಯ ಮೇಲೆಯೂ ಪರಿಣಾಮ ಬೀರಲಾರಂಭಿಸಿದೆ. 

ಮದುವೆ ದಿಬ್ಬಣದ ಟೆಂಪೊ ಪಲ್ಟಿ: 20 ಮಂದಿಗೆ ಗಾಯ, ತಪ್ಪಿದ ಭಾರೀ ದುರಂತ

ಕಾರವಾರದ ಸುಂಕೇರಿ ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿದ್ದು, ಅವುಗಳೆಲ್ಲವೂ ಕಾಳಿ ನದಿತಟದಲ್ಲಿ ಸಂಪ್ರದಾಯಿಕ ಮೀನುಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿವೆ. ಅದ್ರಲ್ಲೂ ನಗರಸಭೆ ನಿರ್ಮಾಣ ಮಾಡುವ ಪ್ರದೇಶದಲ್ಲೇ ಹಿಂದಿನಿಂದಲೂ ಮೀನುಗಾರಿಕೆ ನಡೆಸುತ್ತಿದ್ದು, ಮೀನುಗಾರಿಕೆಗೆ ಈ ಪ್ರದೇಶ ಸೂಕ್ತವಾಗಿತ್ತು. ಆದರೆ, ನಗರಸಭೆ ಮಾತ್ರ ಇದೇ ಜಾಗವನ್ನು ಗುರುತಿಸಿಕೊಂಡು ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಎಲ್ಲೆಲ್ಲಿಂದಲೋ ಮಣ್ಣು ತಂದು ನದಿಗೆ ಹಾಕಿ ಹಲವು ವ್ಯಾಪ್ತಿಯನ್ನು ಮಣ್ಣಿನಿಂದ ಮುಚ್ಚಿದ್ದಾರೆ. ಈ ಮಣ್ಣಿನಲ್ಲಿ ಕಸದ ರಾಶಿಗಳು ಕೂಡಾ ತುಂಬಿರೋದ್ರಿಂದ ತ್ಯಾಜ್ಯ ಬಿಸಾಕಬೇಡಿ ಎಂದು ಬೋರ್ಡ್ ಹಾಕಿದ ನಗರಸಭೆಯೇ ನದಿ ವ್ಯಾಪ್ತಿಯಲ್ಲಿ ಕಸ ತಂದು ಹಾಕುತ್ತಿದೆ. ಪಾರ್ಕ್ ನಿರ್ಮಾಣ ಕಾಮಗಾರಿಯ ವಿರುದ್ಧ ಮೀನುಗಾರರು ವಿರೋಧ ವ್ಯಕ್ತಪಡಿಸಿ ಸಾಕಷ್ಟು ಬಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಲ್ಲದೇ, ಜನಪ್ರತಿನಿಧಿಗಳಿಗೆ, ಉಸ್ತುವಾರಿ ಸಚಿವರಿಗೂ ಕಾಮಗಾರಿ ನಿಲ್ಲಿಸುವಂತೆ ಮನವಿ ಮಾಡಿದ್ದರು. ಆದರೆ, ತನ್ನ ಮೊಂಡುತನ ಬಿಡದ ನಗರ ಸಭೆ ಮಾತ್ರ ಕಾಮಗಾರಿ ಮುಂದುವರಿಸಿದೆ. ಹೀಗಾಗಿ ಸ್ಥಳೀಯ ಮೀನುಗಾರರ ತಮಗೆ ನ್ಯಾಯ ಬೇಕೆಂದು ಆಗ್ರಹಿಸಿ ಪ್ರತಿಭಟಿಸಲು ಮುಂದಾಗಿದ್ದಾರೆ. 

ಇನ್ನು ಕಾರವಾರ ನಗರಸಭೆಯು ಸುಂಕೇರಿಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗೋ ಮೂಲಕ ಸಿಆರ್‌ಝಡ್ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ. ಕಾರವಾರದಲ್ಲಿ ಕಾಳಿ ನದಿ ವ್ಯಾಪ್ತಿ ಸಿಆರ್‌ಝಡ್‌ನಡಿ ಬರೋದ್ರಿಂದ ಯಾವುದೇ ಕಾಮಗಾರಿಯನ್ನು ಈ ವ್ಯಾಪ್ತಿಯಲ್ಲಿ ನಡೆಸಬಾರದು ಅನ್ನೋ ನಿಮಯಗಳಿವೆ. ಆದರೆ, ನಗರಸಭೆ ಮಾತ್ರ ಈ ನಿಯಮವನ್ನು ಉಲ್ಲಂಘಿಸಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. 
ಮ್ಯಾಂಗ್ರೋವ್ ಗಿಡಗಳು ಕೂಡಾ ಕಾಳಿ ನದಿ ತಟದಲ್ಲಿ ಬಹಳ ಸೊಂಪಾಗಿ ಬೆಳೆಯುತ್ತಿರುವುದರಿಂದ ಅವುಗಳನ್ನು ಕೂಡಾ ಕತ್ತರಿಸಿ ಅದರ ಮೇಲೆ ಕಸಗಳು ತುಂಬಿದ ಮಣ್ಣನ್ನು ಹಾಕಿ ಕಾಳಿ ನದಿಯ ಹರಿವನ್ನೇ ಮುಚ್ಚಿ ಹಾಕಲಾಗಿದೆ.‌ ಮಣ್ಣು ಮುಚ್ಚಿರುವ ಕಾರಣದಿಂದ ಮುಂದಿನ ಮಳೆಗಾಲದಲ್ಲಿ ಸ್ಥಳೀಯ ಮನೆಗಳು ನೆರೆಯಿಂದ ಸಂಕಷ್ಟಕ್ಕೀಡಾಗುವ ಸಾಧ್ಯತೆಗಳಿವೆ. 

Karwar: ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಹಾಡಿಗೆ ಸಿಬ್ಬಂದಿ ಫಿದಾ!

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾಡಲು ಸಾಕಷ್ಟು ಕೆಲಸಗಳಿದ್ದು, ಪಾರ್ಕ್ ನಿರ್ಮಾಣ ಮಾಡೋ ಹಣದಲ್ಲಿ ಈ ಗ್ರಾಮದ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಬಹುದು ಅನ್ನೋದು ಸ್ಥಳೀಯ ಅಭಿಪ್ರಾಯ. ಈಗಾಗಲೇ ಸುಮಾರು 200 ಮೀಟರ್ ನಷ್ಟು ಕಾಳಿ ನದಿ ತಟವನ್ನು ನಗರಸಭೆ ಮುಚ್ಚಿರೋದ್ರಿಂದ ಮೀನುಗಾರರ ಹೊಟ್ಟೆ ಮೇಲೆ‌ ಹೊಡೆದಂತಾಗಿದೆ. ಇಲ್ಲಿ ತ್ಯಾಜ್ಯಗಳನ್ನು ಕೂಡಾ ತಂದು ಹಾಕಿರೋದ್ರಿಂದ ಜಲಚರಗಳು ಕೂಡಾ ಸಾವನ್ನಪ್ಪಿವೆ. ಈ ಕಾರಣದಿಂದ ಈ ಯೋಜನೆಯನ್ನು ನಿಲ್ಲಿಸಿ ಹಾಕಿರೋ ಮಣ್ಣನ್ನು ತೆಗೆಯಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 

ಒಟ್ಟಿನಲ್ಲಿ ಮೀನುಗಾರರ ಬದುಕಿನ ಮೇಲೆ ಹೊಡೆದು ಹಾಗೂ ಕಾಳಿ ನದಿಯನ್ನು ಹಾಳುಗೆಡವಿ ಪಾರ್ಕ್ ನಿರ್ಮಾಣ ಮಾಡಲು ಹೊರಟಿರುವ ನಗರಸಭೆ ಇನ್ನಾದರೂ ವಾಸ್ತವ ಸ್ಥಿತಿಯನ್ನು ಅರಿತು ಈ ಯೋಜನೆ ನಿಲ್ಲಿಸಬೇಕಿದೆ. ಯಾವುದೋ ಯೋಜನೆಗೆ ಸುಮ್ಮನೆ ಹಣ ವೆಚ್ಚ ಮಾಡೋ ಬದಲು ಜನರ ಅಭಿವೃದ್ಧಿಗಾಗಿ ನಗರಸಭೆ ಹಣ ವ್ಯಯ ಮಾಡಲಿ ಎಂದು ಜನರ ಆಗ್ರಹ.