ಕೇಂದ್ರದಿಂದ ಕಾಂಗ್ರೆಸ್‌ನ ಗ್ಯಾರಂಟಿ ವಿಫಲಗೊಳಿಸುವ ಸಂಚು :ಕೆಪಿಸಿಸಿ ಮುಖ್ಯ ವಕ್ತಾರ ನಟರಾಜ್‌ ಗೌಡ

ಅಕ್ಕಿ ಇದ್ದರೂ ಕೊಡದ ಕೇಂದ್ರ ಬಿಜೆಪಿ ಸರ್ಕಾರವೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನು ವಿಫಲಗೊಳಿಸುವ ಸಂಚು ನಡೆಸಿದೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್‌. ನಟರಾಜ್‌ ಗೌಡ ಆರೋಪಿಸಿದರು.

Conspiracy to thwart Congress guarantee from Centre snr

  ಮೈಸೂರು :  ಅಕ್ಕಿ ಇದ್ದರೂ ಕೊಡದ ಕೇಂದ್ರ ಬಿಜೆಪಿ ಸರ್ಕಾರವೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳನ್ನು ವಿಫಲಗೊಳಿಸುವ ಸಂಚು ನಡೆಸಿದೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್‌. ನಟರಾಜ್‌ ಗೌಡ ಆರೋಪಿಸಿದರು.

ಮೈಸೂರಿನ ಇಂದಿರಾ ಗಾಂಧಿ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆಗೆ ಅಕ್ಕಿ ಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸದ ಬಿಜೆಪಿಯ 66 ಶಾಸಕರು ಮತ್ತು 26 ಸಂಸದರು ನಾಡದ್ರೋಹಿಗಳು. ಕಾಂಗ್ರೆಸ್‌ ಗ್ಯಾರಂಟಿಗಳನ್ನು ಇತರೆ ರಾಜ್ಯಗಳು ವಿಸ್ತರಿಸಲಿವೆ. ಇದು ಬಿಜೆಪಿಗೆ ತಕ್ಕ ಪಾಠ ಕಲಿಸಲಿವೆ ಎಂದು ಹೇಳಿದರು.

ಬಿಜೆಪಿಯವರ ಪ್ರತಿಭಟನೆ ಯಾರ ವಿರುದ್ಧ? ರಾಜ್ಯಕ್ಕೆ ಅನ್ಯಾಯ ಮಾಡದಿರುವಂತೆ ಧ್ವನಿ ಎತ್ತದ ಬಿಜೆಪಿ ನಾಯಕರಿಗೆ ಜನತೆಯ ಹಿತ ಮುಖ್ಯವಲ್ಲ. ಇದು ನಾಚಿಕೆಗೇಡು. ಕಾಂಗ್ರೆಸ್‌ ಸರ್ಕಾರಕ್ಕಲ್ಲ. ಕರ್ನಾಟಕ ಸರ್ಕಾರಕ್ಕೆ ಕೊಡುವಂತೆ ಒತ್ತಾಯಿಸಬೇಕಿತ್ತು. ಸರ್ವ ಪಕ್ಷ ನಿಯೋಗ ಕರೆದೊಯ್ಯುವಂತೆ ಸಲಹೆ ಕೊಡಬೇಕಿತ್ತು. ಈಗ ಅವರೇ ಪ್ರತಿಭಟನೆಗೆ ಮುಂದಾಗಿರುವುದು ಮಾನ ಮರ್ಯಾದೆ ತ್ಯಾಗ ಮಾಡಿರುವುದರ ಸಂಕೇತ ಎಂದು ಅವರು ವಾಗ್ದಾಳಿ ನಡೆಸಿದರು.

ದೇಶದ ಗೋದಾಮುಗಳಲ್ಲಿ 731 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ, ಗೋಧಿ ದಾಸ್ತಾನಿದೆ. ಒಂದು ವರ್ಷಕ್ಕೆ ಇಡೀ ದೇಶಕ್ಕೆ 550 ಲಕ್ಷ ಮೆಟ್ರಿಕ್‌ ಟನ್‌ ದವಸ ಅಗತ್ಯವಿದೆ. 180 ಲಕ್ಷ ಮೆಟ್ರಿಕ ಟನ್‌ ದವಸ ಧಾನ್ಯ ಹೆಚ್ಚುವರಿ ದಾಸ್ತಾನಿದೆ. 70 ದೇಶಗಳಿಗೆ ಅಕ್ಕಿ ಕೊಡಲಾಗುತ್ತಿದೆ. 29 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಎಥೆನಾಲ್‌ಗೆ ನೀಡಲಾಗಿದೆ ಎಂದರು.

ಅಕ್ಕಿ ಸಿಗದ ಹಿನ್ನೆಲೆಯಲ್ಲಿ 4.42 ಕೋಟಿ ಜನರಿಗೆ 5 ಕೆಜಿ ಅಕ್ಕಿ, ಇನ್ನೂ 5 ಕೆಜಿ ಅಕ್ಕಿಗೆ . 34 ಗಳಂತೆ ನೀಡಲು ಸರ್ಕಾರ ಮುಂದಾಗಿರುವುದು ಅಭೂತಪೂರ್ವ ಸಂಗತಿ ಮತ್ತು ದೇಶದ ಯಾವ ರಾಜ್ಯವೂ ಜಾರಿಗೆ ತರದ ಕ್ರಾಂತಿಕಾರಕ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.

ಆತಂರಿಕ ಪ್ರಜಾಪ್ರಭುತ್ವವಿಲ್ಲ

ಯಾವ ಬಣ ಹೆಚ್ಚು ಪ್ರತಿಭಟನೆ ಮಾಡುತ್ತದೆ ಎಂಬುದರ ಆಧಾರದ ಮೇಲೆ ವಿಪಕ್ಷ ಮತ್ತು ರಾಜ್ಯಾಧ್ಯಕ್ಷ ನೇಮಕ ಮಾಡಲಾಗಿದೆ ಎಂಬಂತೆ ಬಿಜೆಪಿ ನಾಯಕರು ಬಣಗಳಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷ ನಾಯಕ ಆಯ್ಕೆ ಕಸರತ್ತು ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬುದನ್ನು ಸೂಚಿಸುತ್ತದೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ಆಯ್ಕೆ ಮಾಡುವ ಪದ್ಧತಿ ಇಲ್ಲ. ನಾಗ್‌ಪುರದ ಕೇಶವಾಕೃಪದಿಂದ ಆದೇಶದ ಮೇರೆಗೆ ಆಯ್ಕೆ ನಡೆಯುತ್ತಿದೆ. ಬಿಜೆಪಿಯ ಬಣ್ಣ ಕಳಚಿದೆ. ಅದರ ಬಣ್ಣ ಕೇಸರಿ ಅಲ್ಲ, ಕಪ್ಪು ಎಂದು ಅವರು ಟೀಕಿಸಿದರು.

ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಕೆಲಸ ಮಾಡುವುದಿಲ್ಲ. ಕೆಲಸ ಮಾಡುವವರನ್ನು ಸಹಿಸುವುದಿಲ್ಲ. 2024ರ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ಜನರು ಮನೆಗೆ ಕಳುಹಿಸಲಿದ್ದಾರೆ. ರಾಜ್ಯದಲ್ಲಿ 25 ಸೀಟುಗಳು ಕಾಂಗ್ರೆಸ್‌ ಗೆಲ್ಲಲಿರುವುದು ಜನರ ಭಾವನೆಯಿಂದಲೇ ತಿಳಿಯುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿ ನಾಯಕರಿಗೆ ಬಡವರ ಮೇಲೆ ಅಸಹನೆ ಇದೆ. ಅಭಿವೃದ್ಧಿಯಾಗುವುದು ಬೇಕಿಲ್ಲ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿರಬಾರದು. ಸಾಮರಸ್ಯ, ಸಹಬಾಳ್ವೆಯಿಂದ ಇರುವುದ ಬೇಕಿರಲಿಲ್ಲ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಬಡವರ ಕಣ್ಣೀರು ಒರೆಸುವ ಕಾರ್ಯಕ್ರಮಗಳಾಗಿವೆ ಎಂದರು.

200 ಯೂನಿಟ್‌ ಉಚಿತ ವಿದ್ಯುತ್‌ ಪೂರೈಕೆಯ ಗೃಹಜ್ಯೋತಿ ಯೋಜನೆಗೆ 1 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಇದು ಕತ್ತಲಿನಿಂದ ಬೆಳಕಿನೆಡೆಗಿನ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ನಗರ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮಾಧ್ಯಮ ವಕ್ತಾರ ಎಂ. ಮಹೇಶ್‌, ಮುಖಂಡರಾದ ಹೇಮಂತ್‌ಕುಮಾರ್‌, ಈಶ್ವರ್‌ ಚಕ್ಕಡಿ ಇದ್ದರು.

ನಿಗಮ ಮಂಡಳಿಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮತ್ತು ತಾಲೂಕುವಾರು ಸಮಿತಿ ಮಾಡಿದ್ದು, ಆಕಾಂಕ್ಷಿಗಳು ಜು.15ರ ಒಳಗೆ ಅರ್ಜಿ ಸಲ್ಲಿಸಬೇಕು. ಜಿಲ್ಲೆ ಮತ್ತು ತಾಲೂಕುವಾರು ಮೀಸಲಾತಿ ಸಹ ಮಾಡಲಾಗಿದ್ದು, ಈ ಬಾರಿ ಅರ್ಹರಿಗೆ, ಅವಕಾಶ ವಂಚಿತರಿಗೆ ಅವಕಾಶ ದೊರೆಯಲಿದೆ.

- ಡಾ.ಬಿ.ಜೆ. ವಿಜಯ್‌ಕುಮಾರ್‌, ಜಿಲ್ಲಾಧ್ಯಕ್ಷ, ಕಾಂಗ್ರೆಸ್‌

Latest Videos
Follow Us:
Download App:
  • android
  • ios