ಮಂಗಳೂರು(ಸೆ.24): ಉಳ್ಳಾಲದ ಮುಕ್ಕಚೇರಿಯ ಕಡಪುರ ಎಂಬಲ್ಲಿ ಭಾನುವಾರ ತಡರಾತ್ರಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಯುವ ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್‌ ಕಂದಕ್‌ ಶೂಟೌಟ್‌ ನಡೆಸಿ ಎದುರಾಳಿ ತಂಡದ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡಗಳ ಒಟ್ಟು 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ತಡರಾತ್ರಿ 11.45ರ ವೇಳೆಗೆ ಘಟನೆ ನಡೆದಿದ್ದು, ಸುಹೈಲ್‌ ಕಂದಕ್‌ ಮತ್ತು ಇನ್ನೊಬ್ಬ ಕಾಂಗ್ರೆಸ್‌ ಕಾರ್ಯಕರ್ತ ಸಲ್ಮಾನ್‌ ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಶೂಟೌಟ್‌ನಿಂದ ಗಾಯಗೊಂಡ ಇರ್ಷಾದ್‌ (18) ಎಂಬಾತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸುಹೈಲ್‌ ಕಂದಕ್‌ ಮತ್ತು ಆತನ ಸಹಚರ ಬಶೀರ್‌ ಮೇಲೆ ಎದುರಾಳಿ ತಂಡದವರು ಮತ್ತು ಸ್ಥಳೀಯರು ಹಲ್ಲೆ ನಡೆಸಿದ್ದರಿಂದ ಇವರಿಬ್ಬರು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡೂ ಕಡೆಯಿಂದ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ನಡೆದದ್ದೇನು?:

ಮಂಗಳೂರಿನ ಅತ್ತಾವರ ನಿವಾಸಿಯಾಗಿರುವ ಸುಹೈಲ್‌ ಕಂದಕ್‌ ತನ್ನ 7 ಮಂದಿ ಸಹಚರರೊಂದಿಗೆ ತಡರಾತ್ರಿ ಮುಕ್ಕಚೇರಿಯ ಸಮುದ್ರ ತೀರದ ಕಡಪುರಕ್ಕೆ ತೆರಳಿದ್ದು, ಎದುರಾಳಿ ತಂಡದ ಸಲ್ಮಾನ್‌ನನ್ನು ವಿಚಾರಿಸತೊಡಗಿದ್ದಾರೆ. ಆಗ ಅಲ್ಲಿದ್ದ ಸಲ್ಮಾನ್‌ನ ಸಹಚರರ ಜತೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಈ ವೇಳೆ ಪರವಾನಗಿ ಹೊಂದಿದ ಪಿಸ್ತೂಲ್‌ ತೆಗೆದ ಸುಹೈಲ್‌ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಬಳಿಕ ಎದುರಾಳಿ ತಂಡದ ಇರ್ಷಾದ್‌ ಮೇಲೆ ಶೂಟೌಟ್‌ ನಡೆಸಿದ್ದಾನೆ. ಇದರಿಂದ ಇರ್ಷಾದ್‌ ಬಲಗಾಲಿನ ಮೊಣಗಂಟಿನ ಕೆಳಗೆ ಗುಂಡು ಹೊಕ್ಕಿದೆ.

ಮಂಗಳೂರು: ಕ್ಯಾನ್ಸರ್ ಸಂತ್ರಸ್ತೆಯರಿಗಾಗಿ ಕೇಶ ದಾನ ಮಾಡಿದ ವಿದ್ಯಾರ್ಥಿನಿ

ಶೂಟೌಟ್‌ ನಡೆಸಿದ ಬಳಿಕ ಪರಿಸ್ಥಿತಿ ಬಿಡಡಾಯಿಸಿದ್ದು, ಉದ್ರಿಕ್ತರಾದ ಎದುರಾಳಿ ತಂಡವರು ಮತ್ತು ಸ್ಥಳೀಯರು ಸೇರಿ ಸುಹೈಲ್‌ ಮತ್ತು ಆತನ ಸಹಚರ ಬಶೀರ್‌ ಮೇಲೆ ಯದ್ವಾತದ್ವಾ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ, ಸುಹೈಲ್‌ ಬಂದಿದ್ದ ಟೊಯೊಟಾ ಇನ್ನೋವಾ ಕಾರನ್ನೂ ಧ್ವಂಸಗೊಳಿಸಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

6 ಸುತ್ತು ಗುಂಡು:

‘‘ಮಾರಾಮಾರಿ ವೇಳೆ ಸುಹೈಲ್‌ ತನ್ನ ಪಿಸ್ತೂಲಿನಿಂದ ಆರು ಸುತ್ತು ಗುಂಡು ಹಾರಿಸಿದ್ದು, ಅದರಲ್ಲಿ ಎರಡು ಸಜೀವ ಗುಂಡುಗಳು ಮತ್ತು ಒಂದು ಬಳಸಲ್ಪಟ್ಟಗುಂಡು ಸ್ಥಳದಲ್ಲಿ ದೊರೆತಿದೆ. ಗಾಯಗೊಂಡ ಇರ್ಷಾದ್‌ ಯೇನೆಪೋಯ ಆಸ್ಪತ್ರೆಗೆ ದಾಖಲಾಗಿದ್ದು, ಆತನ ಆರೋಗ್ಯ ಸ್ಥಿತಿ ಸದೃಢವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಸುಹೈಲ್‌ ಕಂದಕ್‌ ಮತ್ತು ಬಶೀರ್‌ ಸ್ಥಳೀಯ ನೇತಾಜಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಬಳಿಕ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಹೈಲ್‌ನ ಪಿಸ್ತೂಲನ್ನು ವಶಕ್ಕೆ ಪಡೆದಿದ್ದೇವೆ. ವೈದ್ಯರು ಅನುಮತಿ ನೀಡಿದ ಬಳಿಕ ಈ ಮೂವರನ್ನೂ ವಿಚಾರಣೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತ ಡಾ.ಪಿ.ಎಸ್‌. ಹರ್ಷ ಸುದ್ದಿಗಾರರಿಗೆ ತಿಳಿಸಿದರು.

ಆರೋಪಿಗಳ್ಯಾರು:

ಸುಹೈಲ್‌ ಕಂದಕ್‌ ಮತ್ತು ಆತನ 7 ಮಂದಿ ಸಹಚರರ ಮೇಲೆ ಐಪಿಸಿ ಸೆಕ್ಷನ್‌ 143, 147, 148, 149, 341, 324, 326, 307 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೊಹಮ್ಮದ್‌ ಅರ್ಷದ್‌, ನಿಜಾಮುದ್ದೀನ್‌, ಇನ್ನೊಬ್ಬ ನಿಜಾಮುದ್ದೀನ್‌,ತೌಫೀಕ್‌ ಶೇಖ್‌, ಫಹಾದ್‌, ಅಫ್ವಾನ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಮಾನ್‌ ಮತ್ತು ಆತನ 10 ಮಂದಿ ಸಹಚರರ ಮೇಲೆ ಸೆಕ್ಷನ್‌ 143, 147, 148, 149, 341, 324, 326, 307, 504, 506, 507 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅವರಲ್ಲಿ ಮೊಹಮ್ಮದ್‌, ಮೊಹಮ್ಮದ್‌ ವಾಸೀಮ್‌, ಅಬ್ದುಲ್‌ ರಹ್ಮತುಲ್ಲಾ, ಹರ್ಷಾದ್‌, ಮುಝೌಮ್ಮಿಲ್‌, ರೈಫಾನ್‌, ಮೊಹಮ್ಮದ್‌ ಸಿಯಾಬ್‌ನನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಪ್ರಕರಣದಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕುರಿತು ಶ್ಲಾಘನೆ ವ್ಯಕ್ತವಾಗಿದೆ. ತಡರಾತ್ರಿಯಾದರೂ ಕರ್ತವ್ಯಪ್ರಜ್ಞೆ ಮೆರೆದ ಪೊಲೀಸರನ್ನು ಆಯುಕ್ತರು ಅಭಿನಂದಿಸಿ, ಪ್ರಶಂಸಾ ಪತ್ರ ನೀಡಿದ್ದಾರೆ.

ವಾಟ್ಸಪ್‌ ಸ್ಟೇಟಸ್‌ ಕಾರಣವೇ?!

ಮಾರಾಮಾರಿಗೆ ವಾಟ್ಸಪ್‌ ಸ್ಟೇಟಸ್‌ನ ಕ್ಷುಲ್ಲಕ ವಿಚಾರ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ. ಸುಹೈಲ್‌ ಕಂದಕ್‌ ಇಂಟೀರಿಯರ್ಸ್‌ ಮತ್ತಿತರ ಕೆಲಸಗಳನ್ನು ನಿರ್ವಹಿಸುತ್ತಿದ್ದು, ಆತನ ಕಚೇರಿಯಲ್ಲಿ ಅರ್ಷದ್‌ ಎಂಬ ಯುವಕ ಕೆಲಸಕ್ಕಿದ್ದ. ಈತ ತನ್ನ ವಾಟ್ಸಪ್‌ ಸ್ಟೇಟಸ್‌ನಲ್ಲಿ ಸದಾ ಸುಹೈಲ್‌ ಫೋಟೊ ಹಾಕುತ್ತಿದ್ದ ಎನ್ನಲಾಗಿದೆ. ಅದನ್ನು ಸಹಿಸದ ಸಲ್ಮಾನ್‌, ಅರ್ಷದ್‌ಗೆ ಕರೆ ಮಾಡಿ ಸ್ಟೇಟಸ್‌ ವಿಚಾರದಲ್ಲಿ ತಗಾದೆ ತೆಗೆದಿದ್ದ. ಅಲ್ಲದೆ, ಸುಹೈಲ್‌ ಮುಕ್ಕಚೇರಿಗೆ ಬಂದರೆ ನೋಡಿಕೊಳ್ತೇನೆ ಎಂದೂ ಬೆದರಿಕೆಯೊಡ್ಡಿದ್ದ. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಸುಹೈಲ್‌ ಪಿಸ್ತೂಲು ಹಾಗೂ ಸಹಚರರೊಂದಿಗೆ ನೇರವಾಗಿ ಮುಕ್ಕಚೇರಿಗೆ ತೆರಳಿದ್ದ. ಈ ಸಂದರ್ಭ ಸಲ್ಮಾನ್‌ ಸಹಚರರೊಂದಿಗೆ ಚಕಮಕಿ ನಡೆದಿದೆ.

ಹಳೆ ಸ್ಕೂಟರ್‌ಗಳ ಹೊಸ ಪಯಣ, ಯುವಕರು ಫಿದಾ..!

ಆದರೆ ಸುಹೈಲ್‌ ಕಂದಕ್‌ ಮತ್ತು ಎದುರಾಳಿ ತಂಡದ ಸಲ್ಮಾನ್‌ ನಡುವೆ ಹಿಂದಿನಿಂದಲೇ ಸಣ್ಣ ಮಟ್ಟದ ದ್ವೇಷ ಇತ್ತು ಎನ್ನಲಾಗಿದೆ. ವಾಟ್ಸಪ್‌ ಸ್ಟೇಟಸ್‌ ಒಂದು ನೆಪವಾಗಿತ್ತು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಸಲ್ಮಾನ್‌ಗೆ ಟಾರ್ಗೆಟ್‌ ಗ್ರೂಪ್‌ ಲಿಂಕ್‌?

ಆರೋಪಿ ಸಲ್ಮಾನ್‌ ನಟೋರಿಯಸ್‌ ಟಾರ್ಗೆಟ್‌ ಗ್ರೂಪ್‌ನೊಂದಿಗೆ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಇವನೂ ಸೇರಿದಂತೆ ಇತರ ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಕ್ಕಚೇರಿ ಭಾಗದಲ್ಲಿ ಈತನ ಗುಂಪು ಕಟ್ಟಿಕೊಂಡು ನಟೋರಿಯಸ್‌ ಆಗಿ ಬೆಳೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಅಲಿಯಾಸ್‌’ಗಳು ಯಾರು?

ಸುಹೈಲ್‌ ಕಂದಕ್‌ಗೆ ಒಂದು ಹೆಸರು ಮಾತ್ರವಲ್ಲದೆ, ಉಮ್ಮರ್‌ ಫಾರೂಕ್‌ ಇತ್ಯಾದಿ ಹಲವು ‘ಅಲಿಯಾಸ್‌’ಗಳಿದ್ದು, ಈ ಹೆಸರಿನಲ್ಲಿ ಇತರ ಚಟುವಟಿಕೆ ನಡೆಸುತ್ತಿದ್ದನೇ ಎಂಬ ಬಗ್ಗೆಯೂ ಪೊಲೀಸರು ಗಮನ ಕೇಂದ್ರೀಕರಿಸಿದ್ದಾರೆ. ‘ಈ ಅಲಿಯಾಸ್‌ಗಳು ಯಾರು, ಅವರ ಹಿಸ್ಟರಿ ಏನು ಎಂಬುದನ್ನು ಹುಡುಕುತ್ತಿದ್ದೇವೆ’ ಎಂದು ಕಮೀಷನರ್‌ ಡಾ.ಪಿ.ಎಸ್‌. ಹರ್ಷ ತಿಳಿಸಿದ್ದಾರೆ.

'ಸದಾನಂದ ಗೌಡರಿಗೆ ಬುದ್ಧಿ ಇದೆಯಾ..? ಮಂಗಳೂರಿಗೆ ಬಂದ್ರೆ ಬಹಿಷ್ಕಾರ'..!