ಹಳೆ ಸ್ಕೂಟರ್‌ಗಳ ಹೊಸ ಪಯಣ, ಯುವಕರು ಫಿದಾ..!
ಈಗ ತರಹೇವಾರಿ ನವನವೀನ ಬೈಕ್, ಗೇರ್ ಹಾಕಬೇಕಾದ ಅಗತ್ಯವೇ ಇಲ್ಲದ ಸ್ಕೂಟರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವಾಗ ಹಳೆ ಕಾಲದ ಕಬ್ಬಿಣ ತಗಡಿನ ಸ್ಕೂಟರ್ ಯಾರಿಗೆ ಬೇಕು ಅಂತೀರಾ? ಆದರೆ ‘ಓಲ್ಡ್ ಈಸ್ ಗೋಲ್ಡ್’ ಎನ್ನುವುದನ್ನು ಮಂಗಳೂರಿನ ಯುವಕರು ತೋರಿಸಿಕೊಟ್ಟಿದ್ದಾರೆ. ಆಕರ್ಷಕ ಪೈಂಟ್, ಹೊಸ ಟೈರ್‌ಗಳೊಂದಿಗೆ ಕೊಂಗೊಳಿಸ್ತಿದ್ದ ಸ್ಕೂಟರ್‌ಗಳಿಗೆ ಯುವಕರು ಫಿದಾ ಆಗಿದ್ದಾರೆ.
ಮಂಗಳೂರು(ಸೆ.23): ಹಳೆ ಕಾಲದ ಸ್ಕೂಟರ್‌ಗಳಿಗೆ ಹೊಸ ರೂಪ ಕೊಟ್ಟು ಮಂಗಳೂರಿನ ಕುದ್ರೋಳಿಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಸದರ್ನ್ ಸ್ಕೂಟರ್ಸ್ ಮೀಟ್ ವತಿಯಿಂದ ಪ್ರಪ್ರಥಮ ಬಾರಿಗೆ ಈ ಪ್ರದರ್ಶನ ಆಯೋಜಿಸಲಾಗಿತ್ತು. ಎಂದೋ ಗುಜರಿ ಅಂಗಡಿ ಸೇರಬೇಕಿದ್ದ ಸ್ಕೂಟರ್‌ಗಳೆಲ್ಲ ಹೊಸ ಲುಕ್‌ನೊಂದಿಗೆ ಅಲ್ಲಿ ಕಂಗೊಳಿಸುತ್ತಿದ್ದವು.
1960ರ ಮಾಡೆಲ್‌ಗಳು:
ಹಳೆಯದೆಂದರೆ ಕೇವಲ ಹತ್ತಿಪ್ಪತ್ತು ವರ್ಷಗಳಲ್ಲ. ಬರೋಬ್ಬರಿ 70 ವರ್ಷಗಳಷ್ಟುಹಳೆಯ, 2-3 ತಲೆಮಾರುಗಳನ್ನು ದಾಟಿ ಬಂದ 1960ರ ದಶಕದ ಲ್ಯಾಂಬ್ರೆಟ್ಟಾಸ್ಕೂಟರ್‌ಗಳು ನೋಡುಗರ ಆಕರ್ಷಣೆಗೆ ಕಾರಣವಾದವು. ಮೂಲ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ, ಕೇವಲ ಹೊಸ ಬಣ್ಣ- ಟೈರ್‌ಗಳೊಂದಿಗೆ ಈ ಸ್ಕೂಟರ್‌ಗಳನ್ನು ಅವುಗಳ ಮಾಲೀಕರು ಕಾಪಿಟ್ಟುಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಹಳೆ ಸ್ಕೂಟರ್‌ಗಳ ಜೊತೆ ಸೆಲ್ಫೀ:
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 10,11 ರಾಜ್ಯಗಳನ್ನು ದಾಟಿ ಬಂದ ಸ್ಕೂಟರ್‌ಗಳಿಂದ ಹಿಡಿದು 2000 ಇಸವಿವರೆಗಿನ ಬಜಾಜ್ ಚೇತಕ್‌ವರೆಗೆ ಸುಮಾರು 80ಕ್ಕೂ ಅಧಿಕ ಸ್ಕೂಟರ್‌ಗಳು ತಮ್ಮ ‘ದೇಹ ಸಿರಿ’ಯ ಪ್ರದರ್ಶನ ಮಾಡಿದವು. ನೂರಾರು ಮಂದಿ ಕುತೂಹಲದಿಂದ ಬಂದು ನೋಡಿ ಹಳೆ ಸ್ಕೂಟರ್‌ಗಳೊಂದಿಗೆ ಸೆಲ್ಫೀ ತೆಗೆದುಕೊಂಡರು. ಅಜ್ಜನ ಕಾಲದ ಸ್ಕೂಟರ್‌ಗಳನ್ನು ನೋಡಿ ಮಕ್ಕಳು ರೋಮಾಂಚನಗೊಂಡರು.
ರೈಡಿಂಗಲ್ಲೇ ಬಂದರು:
‘ಈ ಪ್ರದರ್ಶನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮಾತ್ರವಲ್ಲದೆ, ದೂರದ ಬೆಂಗಳೂರು, ಕೇರಳದ ಕಣ್ಣೂರು ಮತ್ತಿತರ ಕಡೆಗಳಿಂದ ಹಳೆ ಸ್ಕೂಟರ್ ಮಾಲೀಕರು ಅಲ್ಲಿಂದ ರೈಡಿಂಗ್ ಮಾಡಿಕೊಂಡೇ ಬಂದಿದ್ದಾರೆ. ಅಲ್ಲಲ್ಲಿ ಹಳೆ ಸ್ಕೂಟರ್ ಮಾಲೀಕರು ವಾಟ್ಸಪ್ ಗ್ರೂಪ್‌ಗಳನ್ನು ರಚಿಸಿಕೊಂಡಿದ್ದಾರೆ. ಅವರನ್ನು ಸಂಪರ್ಕಿಸಿ ಆಹ್ವಾನ ನೀಡಿದೆವು. ಸುಮಾರು 72ರಷ್ಟುಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಜತೆಗೆ ಸ್ಥಳೀಯ 10ಕ್ಕೂ ಅಧಿಕ ಮಂದಿ ಸ್ಕೂಟರ್‌ಗಳೊಂದಿಗೆ ಭಾಗವಹಿಸಿದ್ದಾರೆ’ ಎಂದು ಕಾರ್ಯಕ್ರಮದ ಆಯೋಜಕ ಶಾನ್ ಫರ್ನಾಂಡಿಸ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
‘ಎಷ್ಟೇ ಹೊಸ ಸ್ಕೂಟರ್‌ಗಳನ್ನು ಓಡಿಸಿದರೂ ಹಳೆ ಸ್ಕೂಟರ್ ಓಡಿಸುವಾಗಿನ ಥ್ರಿಲ್, ಫೀಲಿಂಗ್ ಹೊಸತರಲ್ಲಿ ಸಿಗುವುದಿಲ್ಲ. ಸ್ಕೂಟರ್‌ಗಳ ಬಿಡಿ ಭಾಗಗಳು ಹಲವು ನಗರಗಳಲ್ಲಿ ಈಗಲು ಸಿಗುತ್ತಿವೆ. ಹೊಸ ಸ್ಕೂಟರ್‌ಗಳಿಗೆ ಹೋಲಿಸಿದರೆ ಬಿಡಿ ಭಾಗಗಳ ರೇಟ್ ಕೂಡ ಕಡಿಮೆ. ಮೈಂಟೇನೆನ್ಸ್ ಕೂಡ ಕಡಿಮೆ ಖರ್ಚಿನಲ್ಲೇ ಆಗುತ್ತದೆ. ಆಗಾಗ ಅವುಗಳತ್ತ ಕಾಳಜಿ ವಹಿಸಬೇಕಾಗುತ್ತದೆ’ ಎನ್ನುತ್ತಾರವರು.
ಆ ದಿನಗಳ ಮೆಲುಕು:
ಪ್ರದರ್ಶನಕ್ಕೆ ಬಂದ ಬಹಳಷ್ಟುಮಂದಿ ಹಳೆ ಸ್ಕೂಟರ್‌ಗಳೊಂದಿಗಿನ ತಮ್ಮ ಆ ದಿನಗಳನ್ನು ಮೆಲುಕು ಹಾಕಿದರು. ತಮ್ಮಲ್ಲಿದ್ದ ಸ್ಕೂಟರ್‌ಗಳನ್ನು ಮಾರಾಟ ಮಾಡಿದ ಬಗ್ಗೆಯೂ ದುಃಖಿಸಿದರು.
ಓಲ್ಡ್ ಮಾಡೆಲ್‌ಗೆ ಫಿದಾ ಆದ ಯುವಕರು:
ಹಳೆ ಸ್ಕೂಟರ್‌ಗಳ ಮಾಲೀಕರು ವಯಸ್ಸಾದವರು ಎಂದುಕೊಂಡರೆ ತಪ್ಪು. ಪ್ರದರ್ಶನಕ್ಕೆ ಬಂದ ಬಹುತೇಕರು ಯುವಕರೇ. ಓಲ್ಡ್ ಮಾಡಲ್‌ನತ್ತ ಮತ್ತೆ ಯುವ ಜನಾಂಗ ಆಕರ್ಷಿತರಾಗುತ್ತಿದ್ದಾರೆ ಎಂಬುದನ್ನು ಈ ಪ್ರದರ್ಶನ ತೋರಿಸಿಕೊಟ್ಟಿತು.