ಮಂಡ್ಯ (ನ.06):  ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ಕಾಂಗ್ರೆಸ್‌ ವಶವಾಗಿದೆ. 12 ಸ್ಥಾನಗಳ ಪೈಕಿ ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಜಾತ್ಯತೀತ ಜನತಾದಳ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ 9 ನಿರ್ದೇಶಕ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ.ಅಶ್ವಥ್‌ ಪ್ರಮುಖರು ಗೆಲುವಿನ ನಗೆ ಬೀರಿದರೆ, ಮನ್‌ಮುಲ್‌ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಾತನೂರು ಸತೀಶ್‌ ಸೋಲನುಭವಿಸಿದರು.

ಮಳವಳ್ಳಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅಖಾಡ ಪ್ರವೇಶಿಸಿದ್ದ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ 26 ಮತಗಳೊಂದಿಗೆ ವಿಜಯಮಾಲೆ ಧರಿಸಿದರೆ ಕೇವಲ 5 ಮತ ಪಡೆದು ವಿ.ಎಂ.ವಿಶ್ವನಾಥ್‌ ಸೋಲು ಕಂಡರು.

ಜೆಡಿಎಸ್-ಕಾಂಗ್ರೆಸ್ ನಡುವೆ ಟಫ್ ಫೈಟ್ : ದಳಪತಿಗಳಿಗೆ ವಿಜಯ .

ಮಂಡ್ಯ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಸಿ.ಅಶ್ವಥ್‌ 25 ಮತಗಳನ್ನು ಪಡೆದು ಗೆಲುವು ಕಂಡರೆ, ಸಾತನೂರು ಸತೀಶ್‌ 21 ಮತಗಳೊಂದಿಗೆ ಪರಾಜಿತರಾದರು.

ಮದ್ದೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪಿ.ಸಂದರ್ಶ 34 ಮತಗಳನ್ನು ಪಡೆದು ವಿಜಯಿಯಾದರೆ, 11 ಮತಗಳೊಂದಿಗೆ ಎಂ.ಹೊನ್ನೇಗೌಡ ಪರಾಭವಗೊಂಡರು.

ಶ್ರೀರಂಗಪಟ್ಟಣ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದ ಪಿ.ಎಸ್‌.ಚಂದ್ರಶೇಖರ್‌ 19 ಮತಗಳೊಂದಿಗೆ ಗೆಲುವಿನ ಗುರಿ ಮುಟ್ಟಿದರೆ, 3 ಮತ ಪಡೆದು ಎಸ್‌.ಎಂ.ಮಲ್ಲೇಶ್‌ ಮುಗ್ಗರಿಸಿದರು.

ಕೆ.ಆರ್‌. ಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌.ಕೆ. ಅಶೋಕ 29 ಮತ ಪಡೆದು ವಿಜಯಿಯಾದರೆ, ಮನ್‌ಮುಲ್‌ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್‌ 9 ಮತಗಳೊಂದಿಗೆ ಪರಾಜಿತರಾದರು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ .

ನಾಗಮಂಗಲ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎಚ್‌.ಎಸ್‌.ನರಸಿಂಹಯ್ಯ 9 ಮತ ಪಡೆದು ಜಯಶಾಲಿಯಾದರು. 5 ಮತಗಳನ್ನು ಪಡೆದ ಎಚ್‌.ರಮೇಶ್‌ ಸೋಲುಂಡರು.

ಮಂಡ್ಯ ಜಿಲ್ಲೆಯಲ್ಲಿನ ಬಳಕೆದಾರರ ಮತ್ತು ಸಂಸ್ಕರಣ ಸಹಕಾರ ಸಂಘಗಳು ಮತ್ತು ನಗರ ಸಹಕಾರಿ ಬ್ಯಾಂಕ್‌ ಹಾಗೂ ವ್ಯವಸಾಯೇತ್ತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದ ಹೆಚ್‌.ಅಶೋಕ್‌ 67 ಮತಗಳೊಂದಿಗೆ ಗೆಲುವು ಸಾಧಿಸಿದರು. 39 ಮತಗಳನ್ನು ಪಡೆದ ಕೆ.ಎಲ್‌.ದೊಡ್ಡಲಿಂಗೇಗೌಡ ಸೋಲನುಭವಿಸಿದರು.

ಮಂಡ್ಯ ಉಪ ವಿಭಾಗದ ಹಾಲು ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರದಿಂದ ಎಚ್‌.ಸಿ.ಕಾಳೇಗೌಡ 157 ಮತಗಳನ್ನು ಪಡೆದು ವಿಜಯಮಾಲೆ ಧರಿಸಿದರು. ಮನ್‌ಮುಲ್‌ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ 107 ಮತಗಳನ್ನು ಪಡೆದು ಪರಾಜಿತರಾದರು.

ಮಂಡ್ಯ ಜಿಲ್ಲೆಯಲ್ಲಿನ ಕೈಗಾರಿಕಾ ಸಹಕಾರ ಸಂಘಗಳು(ನೇಕಾರರ ಸಹಕಾರ ಸಂಘಗಳು ಸೇರಿದಂತೆ) ಕಾರ್ಮಿಕ ಸಹಕಾರ ಸಂಘಗಳು ಮತ್ತು ಇನ್ನಿತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದ ಕೆ.ಸಿ.ಜೋಗೀಗೌಡ 92 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿಗಳಾಗಿದ್ದ ಎಂ.ಬಿ.ಬಸವರಾಜು 6, ಲಿಂಗರಾಜು 1 ಮತ ಪಡೆದು ಸೋಲು ಕಂಡರು.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಬೆಂಬಲಿಗರು:

ಚುನಾವಣೆ ನಡೆಯುವ ಸ್ಥಳವಾಗಿದ್ದ ಶ್ರೀಲಕ್ಷ್ಮೀಜನಾರ್ದನ ಶಾಲೆಯ ಬಳಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಬೆಳಗ್ಗೆಯೇ ನಗರಕ್ಕೆ ಆಗಮಿಸಿದ್ದ ಅಭ್ಯರ್ಥಿಗಳೂ ಸಹ ಶಾಲೆಯ ಮುಂಭಾಗ ನಿಂತು ತಮ್ಮ ಕ್ಷೇತ್ರದ ಮತದಾರರ ಬರುವಿಕೆಗಾಗಿ ಎದುರುನೋಡುತ್ತಿದ್ದರು. ಮತದಾರರು ಬರುತ್ತಿದ್ದಂತೆ ನಗುಮೊಗದಿಂದ ನಮಸ್ಕರಿಸಿ ತಮ್ಮ ಪರ ಮತ ಚಲಾಯಿಸುವಂತೆ ಕೋರುತ್ತಿದ್ದುದು ಕಂಡುಬಂದಿತು.

ಶಾಲೆಯಲ್ಲಿ 9 ನಿರ್ದೇಶಕ ಸ್ಥಾನಗಳಿಗೆ 9 ಮತಗಟ್ಟೆತೆರೆಯಲಾಗಿತ್ತು. ಹೆಚ್ಚವರಿಯಾಗಿ ಒಂದು ಕೋವಿಡ್‌ ಮತಗಟ್ಟೆಯನ್ನು ತೆರೆದಿತ್ತು. ಮತದಾರರಲ್ಲಿ ಯಾರಿಗಾದರೂ ಕೊರೋನಾ ಸೋಂಕು ಇದ್ದರೆ ಅವರಿಗಾಗಿ ತೆರೆದಿದ್ದ ಪ್ರತ್ಯೇಕ ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಕೊರೋನಾ ಇರುವ ಸಂಬಂಧ ಪ್ರಮಾಣ ಪತ್ರ ತಂದರೆ ಅಂತಹವರಿಗೆ ಪ್ರತ್ಯೇಕವಾಗಿ ಮತದಾನ ಮಾಡಿಸಿ ಸೋಂಕು ಹರಡುವುದನ್ನು ತಡೆಗಟ್ಟಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು.

ವಿಜಯೋತ್ಸಾಹ:

ಒಂದೊಂದು ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಅಭ್ಯರ್ಥಿಗಳ ಕಡೆಯ ಬೆಂಬಲಿಗರು ತಮ್ಮ ನಾಯಕನ ಪರ ಘೋಷಣೆಗಳನ್ನು ಕೂಗಿ ಹರ್ಷ ವ್ಯಕ್ತಪಡಿಸಿದರು. ವಿಜಯಿ ಅಭ್ಯರ್ಥಿಗೆ ಹೂವಿನಹಾರ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು.

40 ಸಿಬ್ಬಂದಿ, 32 ಪೊಲೀಸ್‌ ನಿಯೋಜನೆ

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಗಳ ಚುನಾವಣೆಗೆ ಸಂಬಂಧಿಸಿದಂತೆ ಒಂದು ಮತಗಟ್ಟೆಗೆ 4 ಅಧಿಕಾರಿಗಳಂತೆ 10 ಮತಗಟ್ಟೆಗೆ 40 ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಅವರು ಪ್ರೌಢಶಾಲೆ, ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಚುನಾವಣಾ ಅಧಿಕಾರಿಗಳಾಗಿ ನಿಯೋಜಿಸಿದ್ದರು. ಪಾರದರ್ಶಕತೆ ಮತ್ತು ನಿಷ್ಪಕ್ಷಪಾತ ಚುನಾವಣೆಗೆ ನಡೆಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಜಿಲ್ಲೆಯ ವಿವಿಧೆಡೆಯಿಂದ ಮತದಾರರು ಸೇರಿದಂತೆ ಅಭ್ಯರ್ಥಿಗಳ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಯನ್ನು ಮನಗಂಡು ಶಾಲೆಯ ಬಳಿ ಭದ್ರತೆಗೆ 32 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಗಾಂಧಿಭವನದ ಬಳಿ ಹಾಗೂ ಲಕ್ಷ್ಮೀಜನಾರ್ದನ ಶಾಲೆಯ ಬಳಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್‌ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.