ನಾಗಮಂಗಲ (ನ.06):  ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ. ಅಧ್ಯಕ್ಷರಾಗಿ ಎನ್‌.ಜೆ.ಆಶಾ, ಉಪಾಧ್ಯಕ್ಷರಾಗಿ ಜಾಫರ್‌ ಷರೀಫ್‌ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಪರವಾಗಿ ಸಂಸದೆ ಸುಮಲತಾ ಅಂಬರೀಷ್‌ ಮತ ಹಾಕಿದ್ದರೂ ಇದು ಫಲಿಸಲಿಲ್ಲ. ಒಂದು ಮತ ಅಧಿಕವಾಗಿದ್ದ ಜೆಡಿಎಸ್‌ ಪಕ್ಷ ಅಧಿಕಾರವನ್ನು ತನ್ನದಾಗಿಸಿಕೊಂಡು ಮೊದಲ ಪುರಸಭೆಯಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿ ಸಾಧಿಸಿತು.

ಒಟ್ಟು 23 ಮಂದಿ ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್‌ ಪಕ್ಷ 12 ಕಾಂಗ್ರೆಸ್‌ 11 ಮಂದಿ ಸದಸ್ಯ ಬಲವನ್ನು ಹೊಂದಿತ್ತು. ಜೆಡಿಎಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಎನ್‌.ಜೆ.ಆಶಾ, ಉಪಾಧ್ಯಕ್ಷ ಸ್ಥಾನಕ್ಕೆ ಜಾಫರ್‌ ಷರೀಫ್‌ ಸ್ಪರ್ಧಿಸಿದ್ದರು. ಶಾಸಕ ಸುರೇಶ್‌ಗೌಡರ ಒಂದು ಮತ ಸೇರಿ ತಲಾ 13 ಮತಗಳನ್ನು ಪಡೆದು ಚುನಾಯಿತರಾದರು.

ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಮುಬೀನ್‌ ತಾಜ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಆಲಿ ಅನ್ಸರ್‌ ಪಾಷಗೆ ಸಂಸದೆ ಸುಮಲತಾ ಮತವೂ ಸೇರಿ ತಲಾ 12 ಮತಗಳು ಬಿದ್ದವು. ಒಂದು ಮತದ ಅಂತರದಿಂದ ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿಸಿದರು. ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್‌ ಅಧಿಕ ಮತ ಪಡೆದ ಎನ್‌.ಜೆ.ಆಶಾ ಮತ್ತು ಜಾಫರ್‌ ಷರೀಫ್‌ ಆಯ್ಕೆಯನ್ನು ಪ್ರಕಟಿಸಿದರು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ..

ಹಾಲಿ ಶಾಸಕ ಸುರೇಶ್‌ಗೌಡ ಹಾಗೂ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ನಡುವೆ ಪುರಸಭಾ ಗಾದಿಗಾಗಿ ತೀವ್ರ ಪೈಪೋಟಿ ನಡೆದಿತ್ತು. ಜೆಡಿಎಸ್‌ ಪಕ್ಷದಲ್ಲಿ ಅಧ್ಯಕ್ಷಗಾದಿಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಅವರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಅದರ ಲಾಭ ತಮಗೆ ವರವಾಗಬಹುದು ಎಂದು ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್‌ ಪಕ್ಷ ಸಂಸದೆ ಸುಮಲತಾ ಅಂಬರೀಷ್‌ ಅವರನ್ನು ಮತದಾನಕ್ಕೆ ಕರೆತಂದಿತ್ತು.

ಆದರೆ, ಶಾಸಕ ಸುರೇಶ್‌ ಗೌಡ ಯಾವುದೇ ಲೆಕ್ಕಾಚಾರ ತಪ್ಪದಂತೆ ಕಳೆದ 6 ದಿನಗಳಿಂದ ಪುರಸಭೆಯ ಸದಸ್ಯರೊಂದಿಗೆ ಇದ್ದು ಚುನಾವಣೆಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷಗಾದಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ ಪಕ್ಷದಿಂದ ತಮ್ಮ ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷಗಾದಿಗೇರುತ್ತಿದಂತೆ ಜೆಡಿಎಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು ಅಲ್ಲದೇ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ, ನೀಖಿಲ್ ಕುಮಾರಸ್ವಾಮಿ, ಶಾಸಕ ಸುರೇಶ್‌ ಗೌಡ ಪರ ಘೋಷಣೆಗಳು ಕೂಗಿದರು.

ನಂತರ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಶಾಸಕರಿಗೆ ಹೂ, ಹಾರು ಹಾಕಿ ಕಾರ್ಯಕರ್ತರು ಸಂಭ್ರಮಿಸಿದರು. ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೂಬಸ್ತ್ ಮಾಡಲಾಗಿತ್ತು.