ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.  ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಚುನಾವಣಾ ಪ್ರಣಾಳಿಕೆಯಾದ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ.

ವರದಿ: ಭರತ್‌ರಾಜ್ ಕಲ್ಲಡ್ಕ , ಏಷಿಯಾನೆಟ್ ಸುವರ್ಣ ನ್ಯೂಸ್ 

ಕಾರವಾರ (ಮಾ.6): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಜಿಲ್ಲೆಗೆ ಇಂದು ಇದೇ ಮೊದಲ ಬಾರಿಗೆ ಆಗಮಿಸಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷಿ ಚುನಾವಣಾ ಪ್ರಣಾಳಿಕೆಯಾದ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿದ್ದಾರೆ. ಅಲ್ಲದೇ, ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್, ಜೆ.ಪಿ.ನಡ್ಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೇ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಈ ಬಾರಿ ಅಧಿಕಾರಕ್ಕೆ ಬರಲೇ ಬೇಕು ಎಂದು ಪ್ರಯತ್ನಕ್ಕೆ ಇಳಿದಿರುವ ಕಾಂಗ್ರೆಸ್ ಪ್ರಮುಖವಾಗಿ ಮನೆಯ ಮಹಿಳೆಯರಿಗೆ ಪ್ರತೀ ತಿಂಗಳು 2 ಸಾವಿರ ರೂ., 200 ಯುನಿಟ್ ವಿದ್ಯುತ್ ಉಚಿತ ಕೊಡುವ ಜತೆಗೆ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ 10ಕೆ.ಜಿ. ಅಕ್ಕಿ ಉಚಿತವಾಗಿ ವಿತರಣೆ ಮಾಡುವ ಆಶ್ವಾಸನೆ ನೀಡಿದೆ. ಈ ಯೋಜನೆಯನ್ನು ಗ್ಯಾರಂಟಿ ಕಾರ್ಡ್ ಮೂಲಕ ವಿತರಣೆ ಮಾಡುವ ಕಾರ್ಯವನ್ನು ಜಿಲ್ಲೆಯ ಹಳಿಯಾಳದಲ್ಲಿ ಇಂದು ನಡೆಸಲಾಯಿತು.

ಇದೇ ಪ್ರಥಮ ಬಾರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಉತ್ತರಕನ್ನಡ ಜಿಲ್ಲೆಗೆ ಆಗಮಿಸಿ ಗ್ಯಾರಂಟಿ ಕಾರ್ಡ್ ಗಳನ್ನ ವಿತರಿಸಿದರು. ಬಳಿಕ‌ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದರು. ಬಿಜೆಪಿಯವರು ಜನರನ್ನು ಹಿಂಸೆಯ ಬೆಂಕಿಗೆ ನೂಕಲು ಪ್ರಯತ್ನಿಸ್ತಾರೆ. ಆದರೆ, ನಾವು ಅಭಿವೃದ್ಧಿಯ ದಾರಿಯಲ್ಲಿ ಹೋಗಲಿಚ್ಛಿಸುತ್ತಿದ್ದು, ಕರಾವಳಿಯಿಂದಲೇ ಪ್ರಾರಂಭಿಸ್ತೇವೆ. ದೇಶದಲ್ಲಿ ಎಲ್ಲಿ ಕೇಳಿದರೂ ಕರ್ನಾಟಕದಲ್ಲಿ 40% ಸರಕಾರ ಇದೆ ಅಂತಾರೆ. ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಮಕ್ಕಳು ಕೂಡಾ "ಪೇ ಸಿಎಂ" ಹೇಳ್ತಾರೆ. ಕಾಂಟ್ರಾಕ್ಟರ್ ಅಸೋಸಿಯೇಶನ್ ಪ್ರಧಾನಿ ಮೋದಿಗೆ ಪತ್ರ ಬರೆದು 40% ಕಮಿಷನ್ ಬಗ್ಗೆ ದೂರಿದ್ದರು.

ಪ್ರಧಾನಿ ಮೋದಿ ಅಷ್ಟು ಬಾರಿ ರಾಜ್ಯಕ್ಕೆ ಬಂದರೂ ಈ ಬಗ್ಗೆ ಪರಿಶೀಲಿಸಿಲ್ಲ, ಮಾತನಾಡಿಲ್ಲ. ಬಿಜೆಪಿಯ ಕಾರ್ಯಕರ್ತನಾಗಿದ್ದ ಮೃತ ಸಂತೋಷ್ ಪಾಟೀಲರ ಮನೆಗೆ ಮೋದಿ ತೆರಳಿಲ್ಲ. ರಾಜ್ಯಕ್ಕೆ ಬಂದ ಮೋದಿ ತುಂಬಾ ಟಾಟಾ ಮಾಡಿದ್ರು, ಸಂತೋಷ್ ಪಾಟೀಲರ ಮಡದಿಯ ಕಣ್ಣೀರು ಒರೆಸಿ, ಪರಿಹಾರ ನೀಡಿದಿದ್ರೆ ಚೆನ್ನಾಗಿರ್ತಿತ್ತು. ಆದರೆ, ಕೆಲಸ ವಿಷಯ ಬಂದಾಗ ಬಿಜೆಪಿ ಹಾವಿನಂತೆ ಕಚ್ಚುತ್ತದೆ. ಕಾರ್ಯಕರ್ತರು, ಮುಖಂಡರನ್ನೇ ತಿನ್ನುವ ಬಿಜೆಪಿ ಇನ್ನು ರಾಜ್ಯವನ್ನು ಎಲ್ಲಿ ಬಿಡ್ತದೆ..? ಬೊಮ್ಮಾಯಿಯವರೇ ಎಷ್ಟು ಹಣದಿಂದ ನಿಮ್ಮ ಹಣದ ದುರಾಸೆ ನಿಲ್ಲುತ್ತದೆ..? ಹೇಳಿ, ಪ್ರತಿಯೊಬ್ಬರಿಂದ ತಲಾ 5 ರೂ. ಸಂಗ್ರಹಿಸಿ ನಿಮ್ಮ ಹಣದ ದಾಹ ನೀಗಿಸಿ ಸಂತೋಷ್ ಮನೆಗೆ ಪರಿಹಾರ ಕೊಡ್ತೇವೆ ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದರು.

ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯನ್ನು ಕೂಡಾ ಬಿಜೆಪಿಯವರು ಭ್ರಷ್ಟಾಚಾರಕ್ಕೆ ನೂಕಿದರು. ಬಿಜೆಪಿಯ ಶಾಸಕರೋರ್ವರ ಮಗ ಭ್ರಷ್ಟಾಚಾರದಲ್ಲಿ ಸಿಲುಕಿದ ಪ್ರಕರಣ ಮಾಧ್ಯಮದ ಪ್ರಸಾರವಾಗಿತ್ತು. ಕೋಟ್ಯಾಂತರ ರೂಪಾಯಿ ಹಣ ಇವರ ಮನೆಯಿಂದ ಸೀಝ್ ಮಾಡಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಶಾಸಕರು ನಾಪತ್ತೆಯಾಗಿದ್ದು, ಲುಕೌಟ್ ನೋಟೀಸ್ ಜಾರಿ ಮಾಡಿದ್ದಾರೆ. ಬಿಜೆಪಿ ಶಾಸಕರನ್ನು ಹಿಡಿಯಲಾಗದ ಇವರಿಗೆ ಕ್ರಿಮಿನಲ್‌ಗಳನ್ನು ಹಿಡಿಯಲಾಗುತ್ತದೆಯೇ ? ಬೊಮ್ಮಾಯಿ, ಜ್ಞಾನೇಂದ್ರ ಅವರಿಗೆ ಲುಕ್ ಔಟ್ ನೋಟೀಸ್ ಜಾರಿ ಮಾಡಬೇಕು, ಅವರೇ ಶಾಸಕರನ್ನು ಬಚ್ಚಿಟ್ಟಿದ್ದಾರೆ.

ಲಿಂಗಾಯತ ಸ್ವಾಮೀಜಿಯೇ ಹೇಳ್ತಾರೆ ಮಠಕ್ಕೆ ಅನುದಾನ ಬೇಕಂದ್ರೆ ಕಮಿಷನ್ ನೀಡಬೇಕೆಂದು. ಬಿಜೆಪಿಯವರು ವರ್ಗಾವಣೆಗೂ ಹಣ ಕೇಳ್ತಿದ್ದು, ಇದರಿಂದಲೇ ಸರ್ಕಲ್ ಇನ್ಸ್‌ಪೆಕ್ಟರ್ ನಂದೀಶ್ ಆತ್ಮಹತ್ಯೆ ಮಾಡಿದ್ರು. ಪೋಸ್ಟಿಂಗ್ ಯಾರು ಕೊಡ್ತಾರೆ..? ಭ್ರಷ್ಟಾಚಾರದ ಹಣ ಯಾರು ತೆಗೊತಾರೆ..? ದೆಹಲಿಯಲ್ಲಿ ಯಾರ್ಯಾರಿಗೆ ಹೋಗ್ತದೆ.‌.? ತಿಳಿಸಲಿ. ಸ್ಕೂಲ್ ಅನುದಾನ, ಮಠದ ಅನುದಾನ, ನೌಕರಿಯಲ್ಲೂ ಪರ್ಸಂಟ್ ತಿನ್ನುವ ಇವರು ಸಿಎಂ ಪೋಸ್ಟ್ ಅನ್ನೂ ಮಾರಾಟ ಮಾಡ್ತಾರೆ. 2500ಕೋಟಿ ರೂ. ನೀಡಿದ್ರೆ ಸಿಎಂ ಪೋಸ್ಟ್ ದೊರೆಯುತ್ತೆ ಎಂದು ಬಸವರಾಜ ಯತ್ನಾಳ್ ಹೇಳಿದ್ರು. ಯತ್ನಾಳ್ ಸುಳ್ಳು ಹೇಳೋದಾದ್ರೆ ಅವರನ್ನು ಇನ್ನೂ ಪಕ್ಷದಿಂದ ಯಾಕೆ ತೆಗೆದಿಲ್ಲ..?. ಹಿಂಸೆಯ ರಾಜನೀತಿಯ ಕಾರಣದಿಂದಲೇ ನಾಥೋರಾಮ ಗೋಡ್ಸೆ ಗಾಂಧೀಜಿಯ ಮೇಲೆ ಗುಂಡಿನ ದಾಳಿ ಮಾಡಿದ್ದ. ಇದೇ ರೀತಿ ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಕಾಂಗ್ರೆಸ್‌ನ ಇತರ ಮುಖಂಡರನ್ನು ಕೂಡಾ ಸಾಯಿಸಲಾಗಿತ್ತು.

ಬೊಮ್ಮಾಯಿ, ಅಶ್ವತ್ಥ ನಾರಾಯಣ, ನಳಿನ್, ನಡ್ಡಾ ಅವರೇ ದಿನ ಹಾಗೂ ತಾರೀಕು ಹೇಳಿ.‌ನಾವು ಸಿದ್ಧರಾಮಯ್ಯ, ಡಿ.ಕೆ.ಶಿವ ಕುಮಾರ್ ಅವರನ್ನು ಕರೆದುಕೊಂಡು ಬರ್ತೇವೆ. ನೀವು ಅವರನ್ನು ಸಾಯಿಸಿ,. ಯಾರ್ಯಾರನ್ನೆಲ್ಲಾ ನೀವು ಸಾಯಿಸಬಹುದು? ನಮ್ಮ ಪ್ರತಿಯೊಂದು ಮುಖಂಡರನ್ನು ನೀವು ಸಾಯಿಸಬಹುದು. ನಿಮ್ಮ ಬುಲೆಟ್ ಕಡಿಮೆಯಾಗುತ್ತದೆ ಹೊರತು ಅದಕ್ಕೊಡ್ಡುವ ನಮ್ಮ ಎದೆ ಕಡಿಮೆಯಾಗಲ್ಲ. ನೀವು ಎಲ್ಲರನ್ನು ಕೊಂದರೂ ಕಾಂಗ್ರೆಸ್‌ನ ಗ್ಯಾರಂಟಿಯನ್ನು ಮಾತ್ರ ನಿಲ್ಲಿಸಲಾಗಲ್ಲ ಎಂದು ಸುರ್ಜೇವಾಲ ಹೇಳಿದರು.

ಸಿದ್ದರಾಮಯ್ಯ ಗೆದ್ದ ಬಳಿಕ ಕ್ಷೇತ್ರದ ಜವಾಬ್ದಾರಿ ಯಾರು ನೋಡಿಕೊಳ್ತಾರೆ ಗೊತ್ತಿಲ್ಲ:

ಇನ್ನು ಹಳಿಯಾಳದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಸಲೀಂ ಅಹಮ್ಮದ್ ಉಚಿತ ವಿದ್ಯುತ್ ಕೊಡುವ ಘೋಷಣೆ ಮಾಡುತ್ತಿದ್ದಂತೇ ಕರೆಂಟ್ ಹೋಗಿದ್ದು, ನಂತರ ಮೈಕ್ ಇಲ್ಲದೆಯೇ ಹಾಗೇ ಮಾತನಾಡುವಂತೆ ಸುರ್ಜೇವಾಲ ಸಲೀಂ ಅಹಮ್ಮದ್ ಗೆ ಸೂಚನೆ ನೀಡಿದ್ದರಿಂದ ಮೈಕ್ ಇಲ್ಲದೇ ಹಾಗೇ ಮಾತನಾಡಿದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಆರ್. ವಿ. ದೇಶಪಾಂಡೆ, ಕಾರ್ಯಕರ್ತರು ಕೇವಲ ಬಂದು ಹೋಗುವ ಕೆಲಸ ಮಾಡಬಾರದು. ನಮ್ಮ ಯೋಜನೆಯನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನ ಮಾಡಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ ಅ​ಧಿಕಾರಕ್ಕೂ ಬರಲ್ಲ, ಹಣ, ಅಕ್ಕಿ, ವಿದ್ಯುತ್‌ ಇಲ್ಲ: ಸಚಿವ ಎಂಟಿಬಿ ನಾಗರಾಜ್‌

ಇದೇ ವೇಳೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕಾರಣಿ ಸಭೆ ಸಹ ನಡೆಸಿ ಟಿಕೆಟ್ ಆಕಾಂಕ್ಷಿಗಳ ಜತೆ ಮುಖಂಡರು ಚರ್ಚೆ ನಡೆಸಿದರು. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದು, ಸುರ್ಜೆವಾಲ ಮೂಲಕ ತಮ್ಮ ಆಫರ್‌ಗಳಿಗೆ ಚಾಲನೆ ನೀಡಿದೆ. ಇಷ್ಟೆಲ್ಲಾ ನಡೆಸುವ ಕಾಂಗ್ರೆಸ್ ಮತದಾರರನ್ನು ಈ ಬಾರಿ ತಮ್ಮತ್ತ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆಯೇ ಅನ್ನೋದನ್ನ ಮಾತ್ರ ಕಾದು ನೋಡಬೇಕಾಗಿದೆ.