ಬಿಬಿಎಂಪಿಯ ಚುನಾವಣೆಗಾಗಿ ಕಾಂಗ್ರೆಸ್‌ನ ವಿಷನ್ ಡಾಕ್ಯೂಮೆಂಟ್ ರಚನೆಗೆ ನಿರ್ಧಾರ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ, ಡಿಕೆಶಿ, ಸಿದ್ದರಾಮಯ್ಯ ಚರ್ಚೆ ನಡೆಸಿ ಬಿಬಿಎಂಪಿಯ ಚುನಾವಣೆಗೆ ವಿಷನ್ ಡಾಕ್ಯೂಮೆಂಟ್ ರಚನೆಗೆ ನಿರ್ಧಾರ ಮಾಡಲಾಗಿದೆ. ಯಾವ ಕೆಲಸಕ್ಕೆ ಆದ್ಯತೆ ನೀಡಬೇಕು? ಎಂಬುದರ ಬಗ್ಗೆ ಚರ್ಚೆ ನಡೆದಿದೆ.
ಬೆಂಗಳೂರು (ಆ.29): ಬಿಬಿಎಂಪಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಏನು ಮಾಡಲಿದೆ ಎಂಬ ಕುರಿತು ‘ವಿಷನ್ ಡಾಕ್ಯುಮೆಂಟ್’ ಸಿದ್ಧಪಡಿಸುವುದು ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವ ಮೂಲಕ ಸಮರ್ಥವಾಗಿ ಚುನಾವಣೆ ಎದುರಿಸಲು ಭಾನುವಾರ ನಡೆದ ಬಿಬಿಎಂಪಿ ಚುನಾವಣೆ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಿತಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರು ಭಾಗವಹಿಸಿ ಗಂಭೀರ ಚರ್ಚೆ ನಡೆಸಿದರು. ಈ ವೇಳೆ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವ್ಯಾವ ವಲಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಿದೆ. ಯಾವ ರೀತಿಯ ಕಾರ್ಯಕ್ರಮಗಳನ್ನು ನೀಡಲಿದೆ ಎಂಬ ಬಗ್ಗೆ ಮೊದಲು ‘ವಿಷನ್ ಡಾಕ್ಯುಮೆಂಟ್’ ಸಿದ್ಧಪಡಿಸಬೇಕು. ಇದಕ್ಕಾಗಿ ನಗರಾಭಿವೃದ್ಧಿ ತಜ್ಞರು, ಯುವಕರು, ಮಹಿಳೆಯರು, ಕೂಲಿ ಕಾರ್ಮಿಕರು, ಸರ್ಕಾರೇತರ ಸಂಸ್ಥೆಗಳು ಸೇರಿದಂತೆ ಎಲ್ಲಾ ವರ್ಗದವರೊಂದಿಗೆ ಚರ್ಚಿಸಬೇಕು. ಎಲ್ಲರ ಸಲಹೆಗಳನ್ನು ಆಧರಿಸಿ ವಿಷನ್ ಡಾಕ್ಯುಮೆಂಟ್ ರೂಪಿಸಬೇಕು. ಮುಖ್ಯವಾಗಿ ಬಿಬಿಎಂಪಿಯ ಪ್ರಮುಖ ನಾಲ್ಕು ವಲಯಗಳಲ್ಲಿನ ಸಮಸ್ಯೆಗಳು ಹಾಗೂ ಪರಿಹಾರ ಯೋಜನೆಗಳನ್ನು ಪಟ್ಟಿಮಾಡಬೇಕು. ಬೆಂಗಳೂರನ್ನು ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆ ಹಾಗೂ ಪರಿಹಾರವನ್ನು ಸೂಚಿಸುವ ಮೂಲಕ ಜನರ ಬಳಿಗೆ ಹೋಗಬೇಕು ಎಂದು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.
ಸಭೆಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟಿಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಧ್ರುವನಾರಾಯಣ ಸೇರಿ ಹಲವರು ಭಾಗವಹಿಸಿದ್ದರು.
ಸರ್ಕಾರದ ವೈಫಲ್ಯ ತೆರೆದಿಡಲು ನಿರ್ಧಾರ: ಇನ್ನು ಬಿಬಿಎಂಪಿಯಲ್ಲಿದ್ದ ಬಿಜೆಪಿ ಆಡಳಿತ ಹಾಗೂ ಆಡಳಿತಾಧಿಕಾರಿ ಅವಧಿಯಲ್ಲಿ ರಾಜ್ಯ ಸರ್ಕಾರ ನಡೆಸಿರುವ ವೈಫಲ್ಯಗಳನ್ನು ಜನರ ಮುಂದೆ ತೆರೆದಿಡಬೇಕು. ಮುಖ್ಯವಾಗಿ ರಸ್ತೆ ಗುಂಡಿ ಸಮಸ್ಯೆ, ಮೂಲಭೂತ ಸೌಕರ್ಯ ಹಾಳು ಮಾಡಿರುವುದು ಸೇರಿದಂತೆ ಪ್ರಮುಖ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಬೇಕು ಎಂದು ತೀರ್ಮಾನಿಸಲಾಗಿದೆ.
ಬೆಂಗಳೂರು: ಬಿಬಿಎಂಪಿ ವಾರ್ಡ್ ವಿಂಗಡಣೆ ವಿಚಾರಣೆ ಮತ್ತೆ ಹೈಕೋರ್ಟ್ ಅಂಗಳಕ್ಕೆ
40 ಪರ್ಸೆಂಟ್ ಭ್ರಷ್ಟಾಚಾರ, ಜನಸಾಮಾನ್ಯರಿಗೆ ಬಿಜೆಪಿ ಮಾಡಿರುವ ಮೋಸ, ಬಿಬಿಎಂಪಿ ವಾರ್ಡ್ ವಿಂಗಡಣೆ, ಮೀಸಲಾತಿಗಳಲ್ಲಿ ಮಾಡಿರುವ ಅನ್ಯಾಯಗಳನ್ನು ಜನರಿಗೆ ತಲುಪಿಸಬೇಕು. ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸದಿರುವುದು, ಜನರಿಗೆ ಒಂದೂ ವಸತಿ ಕಲ್ಪಿಸದಿರುವುದು ಸೇರಿದಂತೆ ಸರ್ಕಾರದ ಜನವಿರೋಧಿ ಅಂಶಗಳನ್ನು ಜನರ ಮುಂದಿಟ್ಟು ಬಿಜೆಪಿಯನ್ನು ತಿರಸ್ಕರಿಸುವಂತೆ ಮಾಡಬೇಕು ಎಂದು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 79 ಲಕ್ಷ ಜನರಿಗೆ ಮತದಾನ ಹಕ್ಕು
ವಾರ್ಡ್ ಮೀಸಲು ಪ್ರಶ್ನಿಸಿ ಅರ್ಜಿ, ಸೆ.1ಕ್ಕೆ ವಿಚಾರಣೆ: ಬಿಬಿಎಂಪಿ ವಾರ್ಡ್‌ವಾರು ಮೀಸಲಾತಿ ಅಂತಿಮಗೊಳಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಈಜಿಪುರ ನಿವಾಸಿ ಕೆ.ಮಹದೇವ ತಕರಾರು ಅರ್ಜಿ ಸಲ್ಲಿಸಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಮತ್ತು ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿ ಮಾಡಲಾಗಿದೆ.
ಅರ್ಜಿ ವಿಚಾರಣೆಯ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕ ಸದಸ್ಯ ನ್ಯಾಯಪೀಠ ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದೆ. ಜೊತೆಗೆ ಸುಪ್ರೀಂ ಕೋರ್ಟ್ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡೋಣ ಎಂದು ತಿಳಿಸಿ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಜಯ ಮೊವಿಲ್ ವಾದ ಮಂಡಿಸಿ, ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡುಗಳಿಗೆ ಸೂಕ್ತ ರೀತಿಯಲ್ಲಿ ಮೀಸಲಾತಿ ಕೊಟ್ಟಿಲ್ಲ. ಈಜಿಪುರ ವಾರ್ಡ್ ವಿಶೇಷವಾಗಿ ಪರಿಶಿಷ್ಟಜಾತಿಗೆ ಮೀಸಲಾಗಿದೆ. ಸರ್ಕಾರ ಮಾತ್ರ ಈ ಬಾರಿ ಸಾಮಾನ್ಯ ಮಹಿಳೆಗೆ ಮೀಸಲಾತಿ ನೀಡಿದ್ದು, ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ದೂರಿದರು.
ಅರ್ಜಿಯಲ್ಲಿ ಏನಿದೆ?: ಬಿಟಿಎಂ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್‌ಗಳಲ್ಲಿ ಪರಿಶಿಷ್ಟಜಾತಿಗೆ ಸೂಕ್ತ ಮೀಸಲು ಒದಗಿಸಿಲ್ಲ. ಒಂದು ಕ್ಷೇತ್ರದಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲು ನೀಡಲಾಗಿದ್ದು, ಉಳಿದ ವಾರ್ಡ್‌ಗಳಲ್ಲಿ ಮಹಿಳೆಗೆಯರಿಗೆ ಮೀಸಲು ಕಲ್ಪಿಸಲಾಗಿದೆ. ಮಹಿಳೆ-ಪುರುಷ ವರ್ಗದಲ್ಲಿ ಸಮತೋಲ ಕಾಯ್ದುಕೊಂಡಿಲ್ಲ. ಈಜಿಪುರದಲ್ಲಿ ಮಾತ್ರವಲ್ಲದೆ ಬಿಬಿಎಂಪಿಯ ಹಲವು ವಾರ್ಡ್‌ಗಳಲ್ಲಿ ಸಹ ಪುರುಷ ಹಾಗೂ ಮಹಿಳಾ ವರ್ಗದ ಮೀಸಲಾತಿಯಲ್ಲಿ ಸಮತೋಲನ ಸಾಧಿಸಿಲ್ಲ. ಆದ್ದರಿಂದ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟಜಾತಿ ಜನಸಂಖ್ಯೆ ಪರಿಗಣಿಸಿ ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೂ ಮೀಸಲು ಅಧಿಸೂಚನೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.