Asianet Suvarna News Asianet Suvarna News

ಬಿಬಿಎಂಪಿ ವ್ಯಾಪ್ತಿಯಲ್ಲಿ 79 ಲಕ್ಷ ಜನರಿಗೆ ಮತದಾನ ಹಕ್ಕು

ಬಿಬಿಎಂಪಿಯ ಸಾರ್ವತ್ರಿಕ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿರುವ ಕರಡು ಮತದಾರ ಪಟ್ಟಿಯಲ್ಲಿ ಪಾಲಿಕೆಯ 243 ವಾರ್ಡ್‌ನಲ್ಲಿ 79.08 ಲಕ್ಷ ಮತದಾರರಿದ್ದಾರೆ.

Over 79 lakh voters listed in BBMP's draft electoral rolls gow
Author
Bengaluru, First Published Aug 26, 2022, 3:38 PM IST

ಬೆಂಗಳೂರು (ಆ.26): ಬಿಬಿಎಂಪಿಯ ಸಾರ್ವತ್ರಿಕ ಚುನಾವಣೆ ಸಂಬಂಧ ರಾಜ್ಯ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿರುವ ಕರಡು ಮತದಾರ ಪಟ್ಟಿಯಲ್ಲಿ ಪಾಲಿಕೆಯ 243 ವಾರ್ಡ್‌ನಲ್ಲಿ 79.08 ಲಕ್ಷ ಮತದಾರರಿದ್ದಾರೆ. ಈ ಪೈಕಿ 41,09,496 ಪುರುಷ, 37,97,497 ಮಹಿಳಾ ಹಾಗೂ 1,401 ಇತರೆ ಮತದಾರರಿದ್ದಾರೆ. ಕರಡು ಮತದಾರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ, ಸ್ಥಳ ಬದಲಾವಣೆ ಮಾಡಿಕೊಳ್ಳುವುದು ಸೇರಿದಂತೆ ಇತರೆ ಬದಲಾವಣೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಸೆ.22 ರಂದು ಅಂತಿಮ ಪಟ್ಟಿಬಿಡುಗಡೆ ಮಾಡುವುದಾಗಿ ತಿಳಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು, ಕರಡು ಮತದಾರರ ಪಟ್ಟಿಯನ್ನು ಬಿಬಿಎಂಪಿ ವೆಬ್‌ಸೈಟ್‌ https://bbmp.gov.in/home ವಲಯ ಜಂಟಿ ಆಯುಕ್ತರ ಕಚೇರಿ, ಮತದಾರರ ನೋಂದಣಾಧಿಕಾರಿ ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲೂ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು. ಕರಡು ಮತದಾರರ ಪಟ್ಟಿಯಲ್ಲಿ ಲೋಪ ಸರಿಪಡಿಸಲು ಸೆ.2 ರೊಳಗೆ ಜಂಟಿ ಆಯುಕ್ತರ ಕಚೇರಿ, ಎಆರ್‌ಒ ಕಚೇರಿಗಳಲ್ಲಿ ಆಕ್ಷೇಪಣೆ ಸಲ್ಲಿಸಬಹುದು.

ಜತೆಗೆ ವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌ ಮತ್ತು ಎನ್‌ವಿಎಸ್‌ಪಿ ಪೋರ್ಟಲ್‌ ಮೂಲಕವೂ ಹೊಸ ಮತದಾರರು ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆ ಸಲ್ಲಿಕೆ ಅವಧಿ ಮುಗಿದ ನಂತರವೂ ಏನಾದರೂ ಬದಲಾವಣೆಗಳಿದ್ದರೆ ಅಂತಿಮ ಮತದಾರರ ಪಟ್ಟಿಪ್ರಕಟಿಸುವುದಕ್ಕೂ ಮುನ್ನ ಅರ್ಜಿ ಸಲ್ಲಿಸಿ ಬದಲಿಸಿಕೊಳ್ಳಬಹುದಾಗಿದೆ. ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಸೆ.3ರಿಂದ 7ರವರೆಗೆ ಪರಿಶೀಲಿಸಿ, ಸೆ.22 ಕ್ಕೆ ಅಂತಿಮ ಮತದಾರರ ಪಟ್ಟಿಪ್ರಕಟಿಸಲಾಗುತ್ತದೆ ಎಂದರು.

ಮತದಾನ ಹೆಚ್ಚಳಕ್ಕೆ ಜಾಗೃತಿ: ಬಿಬಿಎಂಪಿಗೆ 2015ರಲ್ಲಿ ನಡೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ.49 ಮಾತ್ರ. ಹೀಗಾಗಿ ಜನರು ಮತದಾನ ಮಾಡುವುದಕ್ಕೆ ಪ್ರೇರೇಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬಸವರಾಜು ತಿಳಿಸಿದರು.

ಮತಗಟ್ಟೆನಿಗದಿಗೆ ಜಾಗದ ಸಮಸ್ಯೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾತನಾಡಿ, ಎಲ್ಲ 243 ವಾರ್ಡ್‌ಗಳಿಗೆ 7,550 ಮತಗಟ್ಟೆಗಳನ್ನು ಸ್ಥಾಪಿಸಬೇಕಿದೆ. ವಾರ್ಡ್‌ ಮರುವಿಂಗಡಣೆಯಿಂದಾಗಿ 45 ವಾರ್ಡ್‌ಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವ ಕಾರಣ ಈ ವಾರ್ಡ್‌ಗಳಲ್ಲಿ ಮತಗಟ್ಟೆಸ್ಥಾಪನೆ ಜಾಗ ಹುಡುಕಾಟದಲ್ಲಿದ್ದೇವೆ. ಮತಗಟ್ಟೆಸ್ಥಾಪನೆಯಾಗದಿದ್ದರೆ, ಹೊಸದಾಗಿ ವಾರ್ಡ್‌ ಕಚೇರಿ ತೆರೆದು ಅಲ್ಲಿಯೇ ಮತಗಟ್ಟೆಸ್ಥಾಪನೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

5.20 ಲಕ್ಷ ಮತದಾರರು ಹೆಚ್ಚಳ: 2015ರ ಚುನಾವಣೆ ವೇಳೆ ಬಿಬಿಎಂಪಿ ವ್ಯಾಪ್ತಿಯಲ್ಲಿ 73,88,256 ಮತದಾರರಿದ್ದರು. ಕರಡು ಪಟ್ಟಿಯಲ್ಲಿ 79.08 ಲಕ್ಷ ಮತದಾರದ್ದು, 5,20,138 ಮತದಾರರು ಹೆಚ್ಚಳವಾಗಿದ್ದಾರೆ.

ಬೆಂಗಳೂರು: ಬಿಬಿಎಂಪಿ ಮೀಸಲು ಕರಡು ಪಟ್ಟಿಯೇ ಫೈನಲ್‌..!

ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಆರಂಭಿಸುವಂತೆ ಸುಪ್ರೀಂಕೋರ್ಚ್‌ ನಿರ್ದೇಶಿಸಿದ ಪ್ರಕಾರ ಮತದಾರರ ಪಟ್ಟಿಸಿದ್ಧಪಡಿಸಲಾಗುತ್ತಿದೆ. ವಾರ್ಡ್‌ ಮೀಸಲಾತಿ ಪಟ್ಟಿಯನ್ನು ಸರ್ಕಾರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಶುಕ್ರವಾರ ಸುಪ್ರೀಂಕೋರ್ಚ್‌ನಲ್ಲಿ ಚುನಾವಣೆ ಕುರಿತು ಯಾವುದೇ ಸೂಚನೆ ನೀಡಿದರೂ ಆಯೋಗ ಅದನ್ನು ಪಾಲಿಸಲಿದೆ. ಚುನಾವಣೆ ನಡೆಸಲು ಆಯೋಗ ಸಿದ್ಧವಿದೆ.

-ಬಸವರಾಜು, ಆಯುಕ್ತರು, ರಾಜ್ಯ ಚುನಾವಣಾ ಆಯೋಗ

ಕೊನೆಗೂ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಶುರು ಮಾಡಿದ ಚುನಾವಣೆ ಆಯೋಗ

ಕೇವಲ ಶೇ.3ರಷ್ಟು, ಆಧಾರ್‌ ಜೋಡಣೆ: ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆಗೆ ಬೆಂಗಳೂರಿನ ನಾಗರಿಕರು ನಿರಾಸಕ್ತಿ ಹೊಂದಿದ್ದಾರೆ. ಈವರೆಗೆ ಕೇವಲ ಶೇ.3 ಮತದಾರರು ಮಾತ್ರ ಆಧಾರ್‌ ಜೋಡಣೆ ಮಾಡಿಕೊಂಡಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಶೇ.40ರಷ್ಟುಮತದಾರರು ಆಧಾರ್‌ ಲಿಂಕ್‌ ಮಾಡಿಕೊಂಡಿದ್ದಾರೆ. ಹೀಗಾಗಿ ಬೆಂಗಳೂರಿನ ನಿವಾಸಿಗಳ ಸಂಘ ಸೇರಿ ಇನ್ನಿತರ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳೊಂದಿಗೂ ಮಾತುಕತೆ ನಡೆಸಲಾಗುವುದು. ಬೂತ್‌ ಮಟ್ಟದ ಅಧಿಕಾರಿಗಳಿಗೆ ಮನೆಮನೆಗೆ ತೆರಳಿ ಆಧಾರ್‌ ಜೋಡಣೆ ಮಹತ್ವದ ಬಗ್ಗೆ ತಿಳಿಸುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು.

*ಅತಿ ಹೆಚ್ಚು ಮತದಾರರು ಇರುವ ವಾರ್ಡ್‌- ಥಣಿಸಂದ್ರ, ಮತದಾರರ ಸಂಖ್ಯೆ- 51,653

*ಅತಿ ಕಡಿಮೆ ಇರುವ ವಾರ್ಡ್‌- ಕೂಡ್ಲು, ಮತದಾರರ ಸಂಖ್ಯೆ-18,604

Follow Us:
Download App:
  • android
  • ios