ವಾರ್ಡ್‌ಗಳ ಪುನರ್‌ ವಿಂಗಡನೆ ಹಾಗು ಮೀಸಲಾತಿ ಕುರಿತಾದ ಅರ್ಜಿಗಳ ವಿಚಾರಣೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಅಧಿಕಾರ ರಾಜ್ಯ ಹೈಕೋರ್ಟ್‌ಗಿದೆ ಎಂದ ಸುಪ್ರೀಂ 

ನವದೆಹಲಿ(ಆ.28): ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್‌ ವಿಂಗಡನೆ ಹಾಗು ಮೀಸಲಾತಿ ಕುರಿತಾದ ಅರ್ಜಿಗಳ ವಿಚಾರಣೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಹಾಗೂ ಅಧಿಕಾರ ರಾಜ್ಯ ಹೈಕೋರ್ಟ್‌ಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಈ ಕುರಿತು ಕೆಲ ಮಾಜಿ ಕಾರ್ಪೊರೇಟರ್‌ಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಅಬ್ದುಲ್‌ ನಜೀರ್‌ ಹಾಗು ನ್ಯಾ.ಮಹೇಶ್ವರಿ ನೇತೃತ್ವದ ದ್ವಿಸದಸ್ಯ ಪೀಠ, ವಾರ್ಡ್‌ಗಳ ಪುರ್ನ ವಿಂಗಡನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್‌ ವಿಚಾರಣೆ ನಡೆಸಿ ತೀರ್ಪು ನೀಡುವ ಅಧಿಕಾರ ಹೊಂದಿದೆ ಎಂದರು. ವಿಚಾರಣೆ ಬಳಿಕ ಚುನಾವಣೆ ಬಗ್ಗೆಯೂ ಹೈಕೋರ್ಟ್‌ ನಿರ್ಧರಿಸಬಹುದು ಎಂದು ನ್ಯಾಯಪೀಠ ಮೌಖಿಕವಾಗಿ ಹೇಳಿದೆ.

BBMP ವಾರ್ಡ್‌ವಾರು ತೆರಿಗೆ ಪಾವತಿ ಪರಿಶೀಲನೆ, ವ್ಯತ್ಯಾಸವಿದ್ದರೆ ದಂಡ

ಸದ್ಯ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿರುವ ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜು ಅವರ ಮೂಲ ಪ್ರಕರಣವನ್ನು ಹಾಗೇ ಉಳಿಸಿಕೊಂಡಿದ್ದು, ಎಂಟು ವಾರಗಳ ಬಳಿಕ ಪಟ್ಟಿ ಮಾಡಲಾಗುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಅಂದು ಕೋರ್ಟ್‌ ಗಮನಕ್ಕೆ ತರಬಹುದು ಎಂದು ಪೀಠ ಹೇಳಿತು. ವಾರ್ಡ್‌ ಪುನರ್‌ ವಿಂಗಡನೆ, ಮೀಸಲಾತಿ ಪ್ರಶ್ನಿಸಿ ಹಲವು ಮಾಜಿ ಕಾರ್ಪೊರೇಟರಗಳು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆ ವೇಳೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದ ಕಾರಣ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಅನುಮತಿ ಬೇಕು ಎಂದು ಹೈಕೋರ್ಟ್‌ ಹೇಳಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಅರ್ಜಿದಾರರು ಸುಪ್ರೀಂಕೋರ್ಟ್‌ ಮೊರೆಹೋಗಿದ್ದರು.